ಬಾಘಪತ್ ಕದನದ ವಿಡಿಯೋ ಐದು ವರ್ಷ ಹಿಂದೆ ಭಾರಿ ವೈರಲ್ ಆಗಿತ್ತು. ಇದೀಗ ಚಟ್ನಿ ಯುದ್ಧ ನಡೆದಿದೆ. ಹಸಿರು ಚಟ್ನಿ ಬದಲು ಸಿಹಿ ಚಟ್ನಿ ನೀಡಿದ್ದಕ್ಕೆ ಪಕೋಡಾ ವ್ಯಾಪಾರಿ ಮೇಲೆ ದಾಳಿ ನಡೆದಿದೆ. ಕೆಲವೇ ಹೊತ್ತಲ್ಲಿ ಇಡೀ ಬೀದಿಯಲ್ಲಿ ಯುದ್ಧವೇ ನಡೆದು ಹೋಗಿದೆ.
ಲಖನೌ (ಸೆ.28) ಅಧಿಪತ್ಯಕ್ಕಾಗಿ, ಗಡಿಗಾಗಿ, ತೈಲಕ್ಕಾಗಿ ಸೇರಿದಂತೆ ಹಲವು ಕಾರಣಗಳಿಂದ ವಿಶ್ವದ ಹಲೆವೆಡೆ ಯುದ್ಧ ನಡೆಯುತ್ತಿದೆ. ಭಾರತದ ಹಲವು ಗಲ್ಲಿಗಳಲ್ಲೂ ಇದಕ್ಕಿಂತ ದೊಡ್ಡ ಯುದ್ಧಗಳು ನಡೆಯುತ್ತಿದೆ. ಈ ಬಾರಿ ಹಸಿರು ಚಟ್ನಿಗಾಗಿ ಯುದ್ಧ ನಡೆದಿದೆ. ಅಂಗಡಿಯಾತ ಹಸಿರು ಚಟ್ನಿ ಬದಲು ಸಿಹಿ ಚಟ್ನಿ ನೀಡಿದ್ದಾನೆ ಅನ್ನೋದು ಕಾರಣ. ಬ್ರೇಡ್ ಪಕೋಡಾದ ಟೇಸ್ಟ್ ಹಾಳಾಯಿತು ಎಂದು ಅಂಗಡಿ ವ್ಯಾಪಾರಿ ಸೇರಿದಂತೆ ಹಲವರ ಮೇಲೆ ದಾಳಿಯಾಗಿದೆ. ಕೆಲವೇ ಹೊತ್ತಲ್ಲಿ ಸಿಕ್ಕ ಸಿಕ್ಕವರು ಸೇರಿ ಬಡಿದಾಡಿಕೊಂಡಿದ್ದಾರೆ. ಬೀದಿಯಲ್ಲಿ ಯುದ್ಧವೇ ನಡೆದು ಹೋಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಹಾಪುರದಲ್ಲಿ.
ಚಾಚಾ ಬಳಿಕ ಈಗ ಚಚ್ನಿ ಫೀವರ್
ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಾಘಪತ್‌ನಲ್ಲಿ ಚಾಟ್ಸ್ ವ್ಯಾಪಾರಿಗಳ ನಡುವೆ ಕಲಹ ನಡೆದು ಯುದ್ಧವಾಗಿ ತಿರುಗಿತ್ತು. ಇದೇ ಯುದ್ಧದಲ್ಲಿ ಐನ್‌ಸ್ಟೈನ್ ಚಾಚಾ ಎಂದು ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದರು. ಈ ಘಟನೆ ಬಳಿಕ ಇದೀಗ ಹಾಪುರದಲ್ಲಿ ಚಟ್ನಿ ಯುದ್ಧ ನಡೆದಿದೆ. ಗುಂಪೊಂದು ಹಾಪುರದ ಖ್ಯಾತ ಪಕಡೋ ವ್ಯಾಪಾರಿ ಬಳಿ ಬಂದು ತಿನಿಸು ಖರೀದಿಸಿದ್ದಾರೆ.
ಹಾಪುರದಲ್ಲಿ ಬ್ರೆಡ್ ಪಕೋಡಾ ಅತ್ಯಂತ ಜನಪ್ರಿಯ. ಈ ಪಕೋಡಾಗೆ ಸ್ವಲ್ಪ ಖಾರ ಇರುವ ಹಸಿರು ಚಟ್ನಿ ನೀಡುತ್ತಾರೆ. ಈ ಸ್ವಾದಕ್ಕಾಗಿ ಹಲವರು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಆಗಮಿಸಿದ ಗುಂಪು ಬ್ರೆಡ್ ಪಕೋಡಾ ಖರೀದಿಸಿದೆ. ಆದರೆ ಹಸಿರು ಚಟ್ನಿ ಬದಲು ಸಿಹಿ ಚಟ್ನಿ ನೀಡಲಾಗಿದೆ. ಇದರಿಂದ ತಿನಿಸು ಖರೀದಿಸಿದ ಗುಂಪು ಆಕ್ರೋಶಗೊಂಡಿದೆ. ಒಂದೆರಡು ಮಾತಲ್ಲೇ ಗುಂಪು ನೇರವಾಗಿ ಅಂಗಡಿ ವ್ಯಾಪಾರಿ ಮೇಲೆ ದಾಳಿ ಮಾಡಿದೆ.
ಬೀದಿಯಲ್ಲಿ ಶುರುವಾದ ರಂಪಾಟ
ಪಕೋಡ ತಯಾರಿಸುತ್ತಿದ್ದ ಪಾತ್ರೆಗಳನ್ನು ಎಸೆದಿದ್ದಾರೆ. ಅಂಗಡಿ ವ್ಯಾಪಾರಿ ಕೂಡ ಆಕ್ರೋಶಗೊಂಡಿದ್ದಾನೆ. ತನ್ನ ಇಡೀ ದಿನದ ಸಂಪಾದನೆಯನ್ನು ಎಸೆಯುತ್ತೀರಾ ಎಂದು ಆಕ್ರೋಶಗೊಂಡಿದ್ದಾನೆ. ಗುಂಪಿನಲ್ಲಿದ್ದ ಹಲವರು ಅಂಗಡಿ ವ್ಯಾಪಾರಿ ಮೇಲೆ ದಾಳಿ ಮಾಡಿದ್ದರೆ. ಇತ್ತ ಅಂಗಡಿ ವ್ಯಾಪಾರಿ ಕೈಯಲ್ಲಿದ್ದ ಬಡಿಗೆ ಮೂಲಕ ಪ್ರತಿದಾಳಿ ನಡೆಸಿದ್ದಾರೆ. ಅಷ್ಟರಲ್ಲಿ ಜಗಳ ತಾರಕಕ್ಕೇರಿದೆ. ಅಕ್ಕ ಪಕ್ಕದವರು ಸೇರಿಕೊಂಡಿದ್ದಾರೆ. ಪರಿಣಾಮ ಕೆಲ ಹೊತ್ತು ಯಾರು ಯಾರ ಮೇಲೆ ದಾಳಿ ಮಾಡುತ್ತಿದ್ದಾರೆ ಅನ್ನೋದೇ ಗೊತ್ತಾಗಿಲ್ಲ. ಎಲ್ಲಾ ಕಡೆಯಿಂದ ದಾಳಿ ಶುರುವಾಗಿದೆ. ಇಡೀ ಬೀದಿಯಲ್ಲಿ ಒಬ್ಬರ ಮೇಲೊಬ್ಬರ ದಾಳಿ ಶುರುವಾಗಿದೆ.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಸಿಸಿಟಿವಿ, ಲಭ್ಯವಿರುವ ವಿಡಿಯೋಗಳು, ಸ್ಥಳೀಯ ಮಾಹಿತಿಗಳನ್ನು ಕಲೆ ಹಾಕಿ ಪ್ರಕರಣ ದಾಖಲಿಸಿದ್ದಾರೆ. ಎಲ್ಲರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
2021ರಲ್ಲಿ ಬಾಘಪತ್‌ನಲ್ಲಿ ಚಾಟ್ಸ್ ಮಾರಾಟಗಾರರ ನಡುವೆ ಕದನ ನಡೆದಿತ್ತು. ಗ್ರಾಹಕರನ್ನು ಸೆಳೆಯುವ ವಿಚಾರದಲ್ಲಿ ಜಗಳ ಆರಂಭಗೊಂಡು ತಾರಕಕ್ಕೇರಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಚಟ್ನಿ ಯುದ್ಧದ ವಿಡಿಯೋ ಹರಿದಾಡುತ್ತಿದೆ.


