ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯ ಬಗ್ಗೆ ಮಾಹಿತಿ ಕೇಳಿದ ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೊಚ್ಚಿ: ಪಿಎಂಒ ಅಧಿಕಾರಿ ಎಂದು ಹೇಳಿಕೊಂಡು ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯ ಸ್ಥಳದ ಬಗ್ಗೆ ಮಾಹಿತಿ ಕೇಳಿದ ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಜಿಬ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ ಕೇರಳದ ಕೋಜಿಕೋಡ್‌ನ ನಡಕ್ಕವು ನಿವಾಸಿಯಾಗಿದ್ದಾನೆ. ಈತ ಪ್ರಧಾನಿ ಸಚಿವಾಲಯದ ಅಧಿಕಾರಿ ಎಂದು ಹೇಳಿಕೊಂಡು ಕೊಚ್ಚಿಯಲ್ಲಿರುವ ನೌಕಾನೆಲೆಗೆ ಕರೆ ಮಾಡಿ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯ ಬಗ್ಗೆ ಮಾಹಿತಿ ಕೇಳಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದು, ಕೋಜಿಕೋಡ್‌ನಿಂದ ಕೊಚ್ಚಿಗೆ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಲಾಗಿದ್ದು, ಬಂಧಿಸಲಾಗಿದೆ.
ಈತ ಕೊಚ್ಚಿ ನೌಕಾನೆಲೆಯ ಲ್ಯಾಂಡ್‌ಲೈನ್ ನಂಬರ್‌ಗೆ ಕರೆ ಮಾಡಿದ್ದು, ತಾನು ಪ್ರಧಾನಿ ಸಚಿವಾಲಯದ ಅಧಿಕಾರಿ, ಪ್ರಸ್ತುತ ಐಎನ್‌ಎಸ್ ವಿಕ್ರಾಂತ್ ಎಲ್ಲಿದೆ ಎಂದು ಕೇಳಿದ್ದಾನೆ. ಶುಕ್ರವಾರ ರಾತ್ರಿ 9 ಗಂಟೆಗೆ ಈ ಕರೆ ಬಂದಿದೆ. ಅಲ್ಲದೇ ಮುಜಿಬ್ ರೆಹಮಾನ್ ತನ್ನ ಹೆಸರನ್ನು ರಾಘವನ್ ಎಂದು ಹೇಳಿಕೊಂಡಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಚ್ಚಿ ನೌಕಾನೆಲೆಯ ಅಧಿಕಾರಿಗಳು ಅಲ್ಲಿನ ಹಾರ್ಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ನಂತರ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 319(2)ರ ಅಡಿ ಹಾಗೂ ಅಧಿಕಾರಿಗಳ ರಹಸ್ಯ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಈತನನ್ನು ಸ್ಥಳೀಯ ಪೊಲೀಸರು ನೌಕಾಪಡೆ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ತೀವ್ರವಾಗಿ ಉಲ್ಬಣಿಸಿದ ಸಮಯದಲ್ಲೇ ಈ ಕರೆ ಬಂದಿದೆ. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತೀವ್ರವಾಗಿ ವಿಚಾರಣೆ ನೆಸುವುದಕ್ಕೆ ಕಾರಣವಾಗಿದೆ.


