2021ರ ಐಟಿ ನಿಯಮಗಳ ಅನ್ವಯ, ಸುಳ್ಳು ಹಾಗೂ ಭಾರತ ವಿರೋಧಿ ಸುದ್ದಿಗಳ ಪ್ರಸಾರ ಮಾಡುತ್ತಿದ್ದ ಭಾರತ 7 ಹಾಗೂ ಪಾಕಿಸ್ತಾನದ ಒಂದು ಯೂ ಟ್ಯೂಬ್‌ ಚಾನೆಲ್‌ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.  ಒಟ್ಟಾರೆ 114 ಕೋಟಿ ವೀವ್ಸ್‌ಗಳು ಈ ಪುಟಗಳಿಗೆ ಸಿಕ್ಕಿದ್ದವು.

ನವದೆಹಲಿ (ಆ. 18): ಒಟ್ಟು 114 ಕೋಟಿ ವೀವ್ಸ್‌ಗಳನ್ನು ಹೊಂದಿದ್ದ ಎಂಟು ಯೂಟ್ಯೂಬ್‌ ಚಾನೆಲ್‌ ಅನ್ನು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಕಾರಣ ನೀಡಿ ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಎಂಟು ಯೂ ಟ್ಯೂಬ್‌ ಚಾನೆಲ್‌ಗಳ ಪೈಕಿ, ಭಾರತದ ಏಳು ಚಾನಲ್‌ಗಳು ಸೇರಿದ್ದರೆ, ಪಾಕಿಸ್ತಾನದ ಒಂದು ಚಾನೆಲ್‌ ಅನ್ನು ಬ್ಲಾಕ್‌ ಮಾಡಲಾಗಿದೆ. "ನಿರ್ಬಂಧಿತ ಚಾನಲ್‌ಗಳಿಂದ ನಕಲಿ, ಭಾರತ ವಿರೋಧಿ ವಿಷಯವ್ನನು ಹಂಚಿಕೆ ಮಾಡಲಾಗುತ್ತಿತ್ತು" ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಚಾನೆಲ್‌ಗಳು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಸರ್ಕಾರ ಹೇಳಿದೆ. "ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ಸೂಕ್ಷ್ಮವಾಗಿದೆ ಎಂದು ಗಮನಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಡಿಸೆಂಬರ್‌ನಿಂದ ಈವರೆಗೂ ಯೂಟ್ಯೂಬ್‌ನಲ್ಲಿ 102 ಚಾನಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಲೋಕತಂತ್ರ ಟಿವಿ, ಯು ಆಂಡ್‌ ವಿ ಟಿವಿ, ಎಎಂ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, ಸೀ ಟಾಪ್‌ 5 ಟಿಎಚ್, ಸರ್ಕಾರಿ ಅಪ್‌ ಡೇಟ್‌, ಸಬ್‌ ಕುಚ್ ದೇಕೋ ಎನ್ನುವ ಏಳು ಭಾರತೀಯ ಚಾನೆಲ್‌ಗಳನ್ನು ಸರ್ಕಾರ ನಿರ್ಭಂಧಿಸಿದ್ದರೆ. ನ್ಯೂಸ್ ಕಿ ದುನಿಯಾ ಪಾಕಿಸ್ತಾನ ಮೂಲದ ಚಾನೆಲ್ ಆಗಿದ್ದು ಅದನ್ನು ಕೂಡ ಸರ್ಕಾರ ನಿರ್ಬಂಧಿಸಿದೆ. ಸುಮಾರು 85 ಲಕ್ಷ ಬಳಕೆದಾರರು ಚಾನೆಲ್‌ಗಳಿಗೆ ಚಂದಾದಾರರಾಗಿದ್ದಾರೆ. ಇದಲ್ಲದೇ ಒಂದು ಫೇಸ್ ಬುಕ್ ಖಾತೆ ಮತ್ತು ಎರಡು ಫೇಸ್ ಬುಕ್ ಪೋಸ್ಟ್ ಗಳನ್ನು ಬ್ಲಾಕ್ ಮಾಡಲಾಗಿದೆ.

ಬಳಕೆದಾರನನ್ನು ತಪ್ಪುದಾರಿಗೆ ಎಳೆಯುವ ನಿಟ್ಟಿನಲ್ಲಿ ಹಾಗೂ ತಾವು ಹಾಕಿರುವ ಕಂಟೆಂಟ್‌ ಅನ್ನು ಅಧಿಕೃತ ಎಂದು ತೋರುವಂತೆ ಮಾಡಲು ಈ ಚಾನೆಲ್‌ಗಳು ಸಾಕಷ್ಟು ಬೇರೆ ಮಾರ್ಗವನ್ನು ಕಂಡುಕೊಂಡಿದ್ದವು. ಭಾರತಯ ಮೂಲದ ಈ ಏಳು ಚಾನೆಲ್‌ಗಳು, ನಕಲಿ ಹಾಗೂ ಪ್ರಚೋದನಕಾರಿ ಥಂಬ್‌ನೇಲ್‌ಅನ್ನು ಬಳಸಿಕೊಳ್ಳುವುದರೊಂದಿಗೆ ತಮ್ಮ ನ್ಯೂಸ್‌ ಆಂಕರ್‌ಗಳು ಹಾಗೂ ನ್ಯೂಸ್‌ ಚಾಲೆನ್‌ಗಳ ಲೋಗೋಗಳನ್ನು ಬಳಸಿಕೊಂಡು, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು ಎಂದುಸ ಸಚಿವಾಲಯವು ಹೇಳಿದೆ. ಸಚಿವಾಲಯದಿಂದ ನಿರ್ಬಂಧಿಸಲಾದ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿಕಾರಕವಾದ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ" ಎಂದು ಸರ್ಕಾರ ಒತ್ತಿಹೇಳಿದೆ.

ಭಾರತದ ವಿರುದ್ಧ ಸುಳ್ಳು ಮಾಹಿತಿ, 1 ವರ್ಷದಲ್ಲಿ 747 ವೆಬ್‌ಸೈಟ್, 94 ಯೂಟ್ಯೂಬ್‌ಗೆ ನಿರ್ಬಂಧ!

"ಭಾರತ ಸರ್ಕಾರವು ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್‌ಲೈನ್ ಸುದ್ದಿ ಮಾಧ್ಯಮ ಪರಿಸರವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ತಡೆಯುತ್ತದೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಹೊಸ ಐಟಿ ನಿಯಮವನ್ನು ಜಾರಿ ಮಾಡಿದ ಬಳಿಕ ಡಿಜಿಟಲ್‌ ಮಾಧ್ಯಮಗಳ ಮೇಲೂ ಸರ್ಕಾರ ಹದ್ದಿನ ಕಣ್ಣಿಡುತ್ತಿದೆ. ಹೊಸ ನಿಯಮದ ಅಡಿಯಲ್ಲಿ 2021ರ ನವೆಂಬರ್‌ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್‌ ಖಾತೆಗಳನ್ನು ಬ್ಲಾಕ್‌ ಮಾಡಲಾಗಿತ್ತು. ಸದ್ಯ ಭಾರತದಲ್ಲಿ 40 ಕೋಟಿಗೂ ಅಧಿಕ ವಾಟ್ಸಾಪ್‌ ಬಳಕೆದಾರರಿದ್ದಾರೆ. 

ಯೂಟ್ಯೂಬ್‌ ಚಾನೆಲ್‌ಗೆ ಜಾಸ್ತಿ ಸಬ್‌ಸ್ಕ್ರೈಬರ್ ಇಲ್ಲ ಅಂತ ಐಐಟಿ ಸ್ಟೂಡೆಂಟ್‌ ಸುಸೈಡ್

ಒಟ್ಟು 85.73 ಲಕ್ಷ ಸಬ್‌ ಸ್ಕ್ರೈಬರ್ಸ್‌: ಒಟ್ಟು ಈ ಎಂಟೂ ಯೂಟ್ಯೂಬ್‌ ಚಾನೆಲ್‌ಗಳಿಗೆ 85.73 ಲಕ್ಷ ಚಂದಾದಾರರಿದ್ದರು ಎಂದು ಮಾಹಿತಿ ನೀಡಿದೆ. ಲೋಕತಂತ್ರ ಟಿವಿ ಯೂ ಟ್ಯೂಬ್‌ ಚಾನಲ್‌ಗೆ 12.90 ಲಕ್ಷ ಚಂದಾದಾರದಿದ್ದರೆ, ಯು ಆಂಡ್‌ ವಿ ಟಿವಿ (10.20 ಲಕ್ಷ), ಎಎಂ ರಜ್ವಿ (95,900), ಗೌರವಶಾಲಿ ಪವನ್ ಮಿಥಿಲಾಂಚಲ್ (7 ಲಕ್ಷ), ಸೀ ಟಾಪ್‌ 5 ಟಿಎಚ್ (33.50 ಲಕ್ಷ), ಸರ್ಕಾರಿ ಅಪ್‌ ಡೇಟ್‌ (80,900), ಸಬ್‌ ಕುಚ್ ದೇಕೋ (19.40 ಲಕ್ಷ) ಕೂಡ ದೊಡ್ಡ ಮಟ್ಟದ ಚಂದಾದಾರರಿದ್ದಾರೆ ಇನ್ನು ಪಾಕಿಸ್ತಾನಿ ಮೂಲದ ನ್ಯೂಸ್‌ ಕಿ ದುನಿಯಾ ಸೇರಿದಂತೆ ಈ ಎಲ್ಲಾ ಚಾನೆಲ್‌ಗಳ ಸ್ಕ್ರೀನ್‌ ಶಾಟ್‌ಗಳನ್ನೂ ಕೂಡ ಸರ್ಕಾರ ಹಂಚಿಕೊಂಡಿದೆ. 100 ಕೋಟಿ ಹಿಂದೂಗಳು 40 ಕೋಟಿ ಮುಸ್ಲಿಮರನ್ನು ಕೊಲ್ಲುತ್ತಾರೆ ಮತ್ತು ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕು ಇಲ್ಲದಿದ್ದರೆ ಅವರನ್ನು ಕಗ್ಗೊಲೆ ಮಾಡಲಾಗುತ್ತದೆ ಎಂದು ಹೇಳುವ ಪಾಕಿಸ್ತಾನಿ ಮೂಲದ ಚಾನೆಲ್‌ನ ಸ್ಕ್ರೀನ್‌ಶಾಟ್‌ಅನ್ನು ಸರ್ಕಾರ ಪ್ರಕಟಿಸಿದೆ. ಇದೇ ಚಾನೆಲ್‌ನ ಇನ್ನೊಂದು ಸ್ಕ್ರೀನ್‌ ಶಾಟ್‌ನಲ್ಲಿ ಭಾರತದಲ್ಲಿ ಕುತುಬ್‌ ಮಿನಾರ್‌ ಅನ್ನು ಧ್ವಂಸ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದೆ.