ತನ್ನ ಯೂಟ್ಯೂಬ್‌ ಚಾನೆಲ್‌ ಅನ್ನು ಯಾರು ಲೈಕ್ ಮಾಡ್ತಿಲ್ಲ, ಸಬ್‌ಸ್ಕ್ರೈಬರ್‌ ಹೆಚ್ಚಾಗುತ್ತಿಲ್ಲ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌: ತನ್ನ ಯೂಟ್ಯೂಬ್‌ ಚಾನೆಲ್‌ ಅನ್ನು ಯಾರು ಲೈಕ್ ಮಾಡ್ತಿಲ್ಲ, ಸಬ್‌ಸ್ಕ್ರೈಬರ್‌ ಹೆಚ್ಚಾಗುತ್ತಿಲ್ಲ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಗ್ವಾಲಿಯರ್‌ನ ಭಾರತೀಯ ಮಾಹಿತಿ ತಂತ್ರಜ್ಞಾನ ಹಾಗೂ ನಿರ್ವಹಣಾ ಕಾಲೇಜಿನಲ್ಲಿ ((IIITM) ಅಧ್ಯಯನ ನಡೆಸುತ್ತಿದ್ದ 23 ವರ್ಷದ ಧೀನಾ ಎಂಬ ವಿದ್ಯಾರ್ಥಿ ತಾನು ವಾಸಿಸುತ್ತಿದ್ದ ಮನೆಯ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಮಹಡಿಯಿಂದ ಕೆಳಗೆ ಹಾರಿದ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಸಾವಿಗೆ ಶರಣಾಗಿದ್ದಾನೆ. ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಈ ವಿದ್ಯಾರ್ಥಿ ಸೆಲ್ಫ್‌ಲೋ (SeLFlo) ಎಂಬ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದ. ಅಲ್ಲಿ ಆತ ಗೇಮಿಂಗ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಆದರೆ ತನ್ನ ಚಾನೆಲ್‌ಗೆ ನಿರೀಕ್ಷಿಸಿದಷ್ಟು ಫಾಲೋವರ್ ಇಲ್ಲ ಎಂದು ಈ ಯುವಕ ಬೇಸರ ಗೊಂಡಿದ್ದ. ಅಲ್ಲದೇ ಇದರಿಂದಲೇ ಖಿನ್ನತೆಗೆ ಜಾರಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಇದುವೇ ನಿಜವಾದ ಕಾರಣವೇ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಈತ ಸೆಪ್ಟೆಂಬರ್‌ 2015ರಿಂದ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಅಲ್ಲದೇ ಈ ವಿದ್ಯಾರ್ಥಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ಗಂಟೆಗಳ ಮೊದಲು ತನ್ನ ಯೂಟ್ಯೂಬ್‌ ಚಾನೆಲ್‌ಗೆ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಿದ್ದ. ಅಲ್ಲದೇ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ತನ್ನ ಡೆತ್‌ನೋಟೊಂದನ್ನು ಪೋಸ್ಟ್ ಮಾಡಿದ್ದಾನೆ. ಇದರಲ್ಲಿ ಆತ ತನ್ನ ಬದುಕಿನಲ್ಲಿ ಆದ ಹಲವು ಘಟನೆಗಳ ಬಗ್ಗೆ ಹೇಳಿಕೊಂಡಿದ್ದು, ತಾನು ಖಿನ್ನತೆಗೆ ಒಳಗಾಗಿದ್ದಕ್ಕೆ ಕಾರಣ ಹಾಗೂ ಅದು ತನ್ನ ಜೀವವನ್ನೇ ತೆಗೆದುಕೊಳ್ಳುವಷ್ಟು ತೀವ್ರವಾದುದರ ಬಗ್ಗೆ ಬರೆದುಕೊಂಡಿದ್ದಾನೆ. 

Bengaluru Crime News: ಕಾಲೇಜು ಹಾಸ್ಟೆಲಲ್ಲಿ ಇಂಜಿನಿಯರಿಂಗ್ ಸ್ಟುಡೆಂಟ್ ಆತ್ಮಹತ್ಯೆ

ನನ್ನ ಸಾವನ್ನು ಹೆಚ್ಚು ದುಃಖದಿಂದ ನೆನಪಿಸಿಕೊಳ್ಳಲಾಗುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ತಾರ್ಕಿಕವಾಗಿ ಅಲ್ಲಿಗೆ ತಲುಪಿದ್ದೇನೆ. ನಾನೊಬ್ಬ ಸೆಲ್ಫ್‌ಲೊ ನಾನು ವ್ಯಕ್ತಿಯಲ್ಲ, ನಾನೊಂದು ಯುಟ್ಯೂಬ್ ಚಾನೆಲ್. ನನಗೆ ಮುಖವಿಲ್ಲ, ಆದರೆ ಧ್ವನಿ ಇದೆ. ನಾನು ಸಮುದಾಯದೊಂದಿಗೆ ಸಂವಹನ ನಡೆಸಲು ಇಷ್ಟಪಡುವವನು ಮತ್ತು ಸಮುದಾಯದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವವನು. ಕಳೆದ ಐದೂವರೆ ವರ್ಷಗಳಿಂದ ನಾನು ಉತ್ತಮವಾಗಿ ಬದುಕಲು ಬಯಸಿದೆ ಆದರೆ ಸಾಧ್ಯವಾಗಲಿಲ್ಲ ಎಂದು ಆತ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾನೆ.

ಕೆಲದಿನಗಳ ಹಿಂದೆ ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಇಂತಹದೇ ಇನ್ನೊಂದು ಪ್ರಕರಣದಲ್ಲಿ 16 ವರ್ಷದ ತರುಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಂಟರ್ ಮಿಡಿಯೇಟ್ ಓದುತ್ತಿದ್ದ ಅಂಜಲಿ ಪರೀಕ್ಷೆಯಲ್ಲಿ ಫೇಲ್ ಆದೇ ಎಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

Tumakuru; ಇಂಗ್ಲಿಷ್‌ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ!

ಇದು ಸಾಮಾಜಿಕ ಜಾಲತಾಣದ ಯುಗವಾಗಿದ್ದು, ಜನ, ಯುವ ಸಮೂಹ ವಾಸ್ತವ ಮರೆತು ಅಂತರ್ಜಾಲದಲ್ಲೇ ಕಲ್ಪನೆಯಲ್ಲೇ ಬದುಕುತ್ತಿರುವುದು ಹೆಚ್ಚಾಗಿದೆ. ಪರಿಣಾಮ ಯುವ ಸಮೂಹದಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ತನಗೆ ಲೈಕ್ಸ್ ಬರ್ಲಿಲ್ಲ, ಸಬ್‌ಸ್ಕ್ರೈಬರ್‌ ಇಲ್ಲ ಎಂಬಂತಹ ಸಣ್ಣ ಪುಟ್ಟ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿ ಜೀವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಕ್ಕಳ ಈ ವರ್ತನೆ ಪೋಷಕರು ಜೀವನ ಪೂರ್ತಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತಿದೆ. ಜೊತೆಗೆ ಲೈಕ್ಸ್ ಕಾಮೆಂಟ್‌ಗೋಸ್ಕರ ಇನ್ನಿಲ್ಲದ ಹರಸಾಹಸ ಮಾಡುವ ಮಕ್ಕಳು ಅವು ಸಿಗದೇ ಹೋದಾಗ ನಿರಾಶೆಗೆ ಜಾರುತ್ತಿದ್ದಾರೆ.