ಅಜಿತ್ ಪವಾರ್ ಅವರ ವಿಮಾನ ಅಪಘಾತದ ನಿಧನದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅವರ ಸಾವಿಗೂ ಮುನ್ನವೇ ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಡೇಟ್ ಆಗಿದೆ ಎಂಬ ಸ್ಕ್ರೀನ್‌ಶಾಟ್‌ಗಳು ಗೊಂದಲ ಸೃಷ್ಟಿಸಿದ್ದವು.ಇದರ ಹಿಂದಿರೋ ಅಸಲಿಯತ್ತು ಏನು?
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮೊನ್ನೆ 28ರಂದು ವಿಮಾನದ ದುರಂತದಲ್ಲಿ ನಿಧನರಾದರು. ವಿಮಾನ ಟೇಕಾಫ್ ಆದ ಮುಕ್ಕಾಲು ಗಂಟೆಯಲ್ಲಿ ಬಾರಾಮತಿಯಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ ಐವರೂ ಅಗ್ನಿಗೆ ಆಹುತಿಯಾಗಿದ್ದಾರೆ! (Ajit Pawars plane crash incident) ವಿಮಾನದಲ್ಲಿನ ದೋಷ, ಹವಾಮಾನ ವೈಪರೀತ್ಯ ಇತ್ಯಾದಿಗಳ ಬಗ್ಗೆ ಹೇಳಲಾಗುತ್ತಿದ್ದರೂ, ಈ ಘಟನೆಯ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಎನ್ನುವ ಬಗ್ಗೆಯೂ ವಿವಿಧ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ. ಇದರ ನಡುವೆಯೇ ಇದೀಗ ಆಘಾತಕಾರಿ ಎನ್ನುವಂಥ ವಿಷಯವೊಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಅದೇನೆಂದರೆ, ಇವರು ನಿಧನರಾಗುವ ಕೆಲ ಗಂಟೆಗಳ ಮೊದಲು ವಿಕಿಪಿಡಿಯಾದಲ್ಲಿ ಇವರ ನಿಧನದ ಸುದ್ದಿ ಪ್ರಕಟವಾಗಿದೆ.
ವಿಕಿಪಿಡಿಯಾದಲ್ಲಿ ಮೊದಲೇ ಸುದ್ದಿ!
ಈ ಎಐ ಯುಗದಲ್ಲಿ, ಬಹುತೇಕ ಎಲ್ಲರೂ ಏನೇ ವಿಷಯ ಬೇಕೆಂದರೂ ಗೂಗಲ್, ವಿಕಿಪಡಿಯಾ ಸರ್ಚ್ ಮಾಡುವುದು ಮಾಮೂಲು. ಅಜಿತ್ ಪವಾರ್ ಎಂದು ಟೈಪಿಸಿದಾಗ, ಕೆಲವು ಗಂಟೆಗಳ ಮೊದಲೇ ಇವರು ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ವಿಕಿಪಿಡಿಯಾದಲ್ಲಿ ತಿಳಿಸಲಾಗಿತ್ತು. ಇದರ ಸ್ಕ್ರೀನ್ಷಾಟ್ಗಳು ಹಂಗಾಮಾ ಸೃಷ್ಟಿಸಿದವು. ಅಜಿತ್ ಪವಾರ್ ಅವರದ್ದು ಸಾವಲ್ಲ, ಕೊ*ಲೆ ಎಂದೆಲ್ಲಾ ಚರ್ಚೆಗಳು ಶುರುವಾಗಿದೆ. ಆದರೆ ನಿಜಕ್ಕೂ ಆಗಿದ್ದೇನು? ವಿಕಿಪಿಡಿಯಾದಲ್ಲಿ ಮೊದಲೇ ಅಪ್‌ಡೇಟ್ ಆಗಿದ್ದು ನಿಜನಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸ್ಕ್ರೀನ್ಷಾಟ್ಗಳಲ್ಲಿನ ದಿನಾಂಕದ ಬಗ್ಗೆ ಈ ಗೊಂದಲವೇಕೆ ಎನ್ನುವುದು ಈಗ ಬಹಿರಂಗಗೊಂಡಿದೆ.
ಸಮಯದ ಬದಲಾವಣೆ ಏಕೆ?
ಇದರ ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದುಬಂದದ್ದು ಏನೆಂದರೆ, ವಿಕಿಪೀಡಿಯಾದಲ್ಲಿ ಬಳಸುವ ಸಮಯವು ಸಂಯೋಜಿತ ಸಾರ್ವತ್ರಿಕ ಸಮಯ (UTC -Coordinated Universal Time) ಆಗಿರುತ್ತದೆ. ಏಕೆಂದರೆ, ಒಂದು ದೇಶಕ್ಕೂ, ಇನ್ನೊಂದು ದೇಶಕ್ಕೂ ಇರುವ ಸಮಯದಲ್ಲಿ ಸಾಕಷ್ಟು ಅಂತರವಿದೆ. ವಿಕಿಪಿಡಿಯಾ ಅಪ್‌ಡೇಟ್ ಮಾಡುವ ಸಮಯಕ್ಕೂ, ಭಾರತದ ಸಮಯಕ್ಕೂ ಸುಮಾರು ಐದೂವರೆ ಗಂಟೆಗಳ ಅಂತರವಿದೆ. ಭಾರತದ ಸಮಯವನ್ನು ಭಾರತೀಯ ಪ್ರಮಾಣಿತ ಸಮಯ (Indian Standard Time- IST) ಎಂದು ಕರೆಯುತ್ತೇವೆ. ಇದೇ ಕಾರಣಕ್ಕೆ ಅಜಿತ್ ಪವಾರ್ ಅವರು ಭಾರತೀಯ ಕಾಲಮಾನದಲ್ಲಿ ಬೆಳಿಗ್ಗೆ 8.45ರ ಸುಮಾರಿಗೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರೆ, ಅದೇ ಸಮಯದಲ್ಲಿ ವಿಕಿಪಿಡಿಯಾ ಈ ವಿಷಯವನ್ನು ಅಲ್ಲಿಯ ಕಾಲಮಾನಕ್ಕೆ ಅಪ್‌ಡೇಟ್ ಮಾಡಿದರೆ, ಸಹಜವಾಗಿ ಭಾರತದ ಸಮಯಕ್ಕಿಂತ ಐದೂವರೆ ಗಂಟೆ ಮೊದಲು ತೋರಿಸುತ್ತದೆ. ಇದೇ ಆಗಿರುವ ಎಡವಟ್ಟು.
ಸ್ಕ್ರೀನ್ಷಾಟ್ ಎಡವಟ್ಟು
ಇನ್ನೊಂದು ದುರ್ದೈವದ ಸಂಗತಿಯೆಂದರೆ ಇದರ ಸ್ಕ್ರೀನ್ಷಾಟ್ ತೆಗೆದು ಅದನ್ನು ಎಡಿಟ್ ಮಾಡಿ ಕೆಲವು ಕಿಡಿಗೇಡಿಗಳು ಮತ್ತೊಂದಿಷ್ಟು ಎಡವಟ್ಟು ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. 'ಇನ್ಸ್‌ಪೆಕ್ಟ್ ಎಲಿಮೆಂಟ್' ಟೂಲ್ ಬಳಸಿಕೊಂಡು ಸಮಯವನ್ನು ಬದಲಾಯಿಸಿರುವುದು ಫ್ಯಾಕ್ಟ್ ಚೆಕ್ ತಂಡ ಬಹಿರಂಗಪಡಿಸಿದೆ. ಆ ಗಡಿಬಿಡಿಯಲ್ಲಿ ಕಿಡಿಗೇಡಿಗಳು, ಸಮಯವನ್ನು 2026 ಎಂದು ಮಾಡುವ ಬದಲು ಗಡಿಬಿಡಿಯಲ್ಲಿ 20266 ಎಂದು ಉಲ್ಲೇಖಿಸಿರುವುದನ್ನೂ ಈ ಸ್ಕ್ರೀನ್ಷಾಟ್ನಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಒಂದು ಸಾವು ಸಂಭವಿಸಿದಾಗ, ಇಂಥ ಕುಚೋದ್ಯ ಮೆರೆದು ವಿಕೃತ ಸಂತೋಷ ಪಡುವ ವರ್ಗವೂ ಇದೆ. ಆದರೆ, ಅದನ್ನು ಓದುವಾಗ, ನೋಡುವಾಗ ಜನರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಸೋಷಿಯಲ್ ಮೀಡಿಯಾದಲ್ಲಿ ಬಂದದ್ದೆಲ್ಲಾ ಸತ್ಯವಲ್ಲ ಎನ್ನುವುದು ಕೂಡ ಜನರು ತಿಳಿದುಕೊಳ್ಳಬೇಕಿದೆ.


