ಮಹಿಳೆಯೊಬ್ಬಳು ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್‌ನಲ್ಲಿ ವಿಶೇಷ ಚಿಪ್ ಅಳವಡಿಸಿಕೊಂಡು ಕ್ಯಾಸಿನೋದಲ್ಲಿ ಇಸ್ಪೀಟ್ ಆಟವಾಡಿ ಮೋಸ ಮಾಡುತ್ತಿದ್ದಳು. ಎದುರಾಳಿಗಳ ಕಾರ್ಡ್‌ಗಳನ್ನು ಪತ್ತೆಹಚ್ಚಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಈಕೆ, ದೂರಿನ ಮೇರೆಗೆ ಸಿಕ್ಕಿಬಿದ್ದಿದ್ದಾಳೆ.
ಪೊಲೀಸರು ಚಾಪೆ ಕೆಳಗೆ ನುಸುಳಿದ್ರೆ, ಕಳ್ಳರು ರಂಗೋಲಿ ಕೆಳಗೇ ನುಸುಳೋದನ್ನು ಚೆನ್ನಾಗಿ ಕಲಿತಿರುತ್ತಾರೆ ಎನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅದರಲ್ಲಿಯೂ ತಂತ್ರಜ್ಞಾನದ ಈ ಯುಗದಲ್ಲಂತೂ ಯಾರನ್ನು ನಂಬುವುದೂ ಕಷ್ಟ. ಚಿಕ್ಕ ಪುಟ್ಟ ಮಷಿನ್ ಇಟ್ಟುಕೊಂಡೇ ಏನುಬೇಕಾದರೂ ಚಾಲಕಿತನ ಮಾಡಬಹುದಾಗಿದೆ. ಹಿಡನ್ ಕ್ಯಾಮೆರಾ ಇಟ್ಟುಕೊಂಡು ಯಾರನ್ನು ಬೇಕಾದರೂ ಬಲೆಗೆ ಬೀಳಿಸಬಹುದಾಗಿದೆ. ಅದರಲ್ಲಿಯೂ ಹೆಚ್ಚಾಗಿ ಹನಿ ಟ್ರ್ಯಾಪ್ನಂಥ ಕೇಸ್ಗಳಲ್ಲಿ ರಾಜಕಾರಣಿಗಳನ್ನು ಹೆಣ್ಣುಮಕ್ಕಳು ಬಲೆ ಬೀಳಿಸುವುದಕ್ಕಾಗಿ ಇಂಥ ತಂತ್ರಜ್ಞಾನದ ಮೊರೆ ಹೋಗುವುದು ಇದೆ. ಇಂಥ ಅದೆಷ್ಟೋ ಪ್ರಕರಣಗಳು ನಡೆಯುತ್ತಲೇ ಇದ್ದರೂ, ಮರ್ಯಾದೆಗೆ ಅಂಜಿ ಎಷ್ಟೋ ಕೇಸ್ಗಳು ಹೊರಕ್ಕೆ ಬರುವುದೇ ಇಲ್ಲ. ಇದೇ ಕಳ್ಳಿಯರ ಬಂಡವಾಳ ಕೂಡ.
ಕಣ್ಣಲ್ಲಿ ಮಷಿನ್!
ಆದರೆ ಇಲ್ಲೊಬ್ಬ ಚಾಲಾಕಿ ಹನಿಟ್ರ್ಯಾಪ್ ಏನೂ ಮಾಡಿಲ್ಲ ಎನ್ನಿ. ಅವರು ಕಣ್ಣಿನಲ್ಲೇ ಕೊಂದು ಎಲ್ಲರನ್ನೂ ಒಳಗೆ ಹಾಕಿಕೊಂಡ್ರೆ, ಈ ಐನಾತಿ, ಕಣ್ಣಿನೊಳಗೆ ಚಿಪ್ ಒಂದನ್ನು ಅಳವಡಿಸಿಕೊಂಡು ಕ್ಯಾಸಿನೋದಲ್ಲಿ ಆಟವಾಡುವಾಗ ಮೋಸ ಮಾಡುತ್ತಿದ್ದಳು! ಇಸ್ಪಿಟ್ ಆಡುವ ಸಮಯದಲ್ಲಿ ಎದುರಾಳಿಗಳ ಬಳಿ ಯಾವ ಕಾರ್ಡ್ಗಳು ಇವೆ ಎನ್ನೋದನ್ನು ನೋಡಲು ಇದನ್ನು ಬಳಸುತ್ತಿದ್ದಳು. ಇದರಿಂದ ಮೋಸ ಮಾಡಿ ಕೋಟ್ಯಂತರ ರೂಪಾಯಿ ಬಾಚುತ್ತಿದ್ದಳು.
ಸಿಕ್ಕಿಬಿದ್ದ ಐನಾತಿ
ಕಳ್ಳ ಹಲವು ಬಾರಿ ತಪ್ಪು ಮಾಡಿದಾಗ, ಒಮ್ಮೆಯಲ್ಲ ಒಮ್ಮೆ ಸಿಕ್ಕಿಬೀಳಲೇಬೇಕಲ್ವಾ? ಅದೇ ರೀತಿ, ಪದೇ ಪದೇ ಈಕೆಗೆ ಗೆಲುವು ಸಾಧಿಸ್ತಿರೋದನ್ನು ನೋಡಿ ಘಟಾನುಘಟಿ ಆಟಗಾರರು ಸುಸ್ತಾಗಿ ಹೋದರು. ಇಲ್ಲೇನೋ ಸಮಸ್ಯೆ ಇದೆ ಎಂದು ಅವರಿಗೆ ತಿಳಿಯಿತು. ಆಕೆಯ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆಕೆ ಕಣ್ಣುಗಳನ್ನು ವಿಚಿತ್ರವಾಗಿ ತಿರುಗಿಸುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕಾಂಟ್ಯಾಕ್ಟ್ ಲೆನ್ಸ್
ಬಳಿಕ ಆಕೆಯನ್ನು ಪರೀಕ್ಷೆ ಮಾಡಿದಾಗ, ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್‌ನಲ್ಲಿ ವಿಶೇಷವಾದ ಚಿಪ್ ಒಂದನ್ನು ಇಟ್ಟುಕೊಂಡು, ಅದರಲ್ಲಿ ಕಾರ್ಡ್‌ಗಳನ್ನು ಸುಲಭವಾಗಿ ಪತ್ತೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಕೆಯ ಕಣ್ಣಿನಿಂದ ಆ ಕಾಂಟ್ಯಾಕ್ಟ್ ಲೆನ್ಸ್ ತೆಗೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಕೆ ಸಿಕ್ಕಿಬಿದ್ದಿದ್ದಾಳೆ ಅನ್ನೋದಕ್ಕಿಂತ ಹೆಚ್ಚಾಗಿ, ಹಲವರು ತಾವು ಪರೀಕ್ಷೆ ಬರೆಯುವಾಗ ಇದನ್ನು ಬಳಸಬಹುದೇ ಎಂದು ಕಮೆಂಟ್ ಸೆಕ್ಷನ್ನಲ್ಲಿ ಪ್ರಶ್ನಿಸುತ್ತಿದ್ದಾರೆ! ಅಂದಹಾಗೆ ಇದು ನಡೆದಿದ್ದು ಚೀನಾದಲ್ಲಿ. ಇದರ ವಿಡಿಯೋ ವೈರಲ್ ಆಗಿದೆ. tradersparadise.news ಶೇರ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ


