ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಅಮೆಜಾನ್, ಇತ್ತೀಚೆಗೆ 16,000 ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದರಿಂದ ಒಟ್ಟು ವಜಾ ಸಂಖ್ಯೆ 30,000ಕ್ಕೆ ಏರಿದೆ. ಈ ಉದ್ಯೋಗ ಕಡಿತವು ಭಾರತದ ಮೇಲೂ ಪರಿಣಾಮ ಬೀರಿದ್ದು, ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಹೂಡಿಕೆ ಕಾರಣಗಳಾಗಿವೆ.

ತಂತ್ರಜ್ಞಾನ ಬೆಳೆದಂತೆಲ್ಲಾ ಮಾನವ ಕೆಲಸಕ್ಕೆ ಕತ್ತರಿ ಬೀಳುತ್ತಲೇ ಇದೆ. ಅದರಲ್ಲಿಯೂ ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನ ಬಂದ ಹಿನ್ನೆಲೆಯಲ್ಲಿ, ಹಲವರು ಮಾಡುವ ಕೆಲಸವನ್ನು ಈ ಒಂದೇ ಮಷಿನ್​ ಮಾಡಿ ಮುಗಿಸುವ ಕಾರಣದಿಂದ ಉದ್ಯೋಗಿಗಳು ಮನೆಗೆ ಹೋಗುವುದು ಹೆಚ್ಚಾಗುತ್ತಲೇ ಇದೆ. ಇದೀಗ ಅಂಥದ್ದೇ ಭಾರಿ ಉದ್ಯೋಗ ಕಡಿತವನ್ನು ಮಾಡಿದೆ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿಯಾದ ಅಮೆಜಾನ್. ಇದು ನಿನ್ನೆ 16 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಕಳೆದ ಅಕ್ಟೋಬರ್​ನಿಂದ ಹೋಲಿಸಿದರೆ ಇಲ್ಲಿಯವರೆಗೆ ಅಮೆಜಾನ್​ 30 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ. ಇದು ಭಾರತದ ಉದ್ಯೋಗಿಗಳ ಮೇಲೂ ಪ್ರಭಾವ ಬೀರಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಕಾರಣ ಕೊಟ್ಟ ಉಪಾಧ್ಯಕ್ಷೆ

ಅಮೆಜಾನ್‌ನ ಹಿರಿಯ ಉಪಾಧ್ಯಕ್ಷೆ ಬೆತ್ ಗ್ಯಾಲೆಟ್ಟಿ ಈ ಬಗ್ಗೆ ದೃಢಪಡಿಸಿದ್ದಾರೆ. ಈ ಉದ್ಯೋಗ ಕಡಿತದ ಉದ್ದೇಶವು ನಿರ್ವಹಣೆಯ ಪದರಗಳನ್ನು ಕಡಿಮೆ ಮಾಡುವುದು, ಹೊಣೆಗಾರಿಕೆಯನ್ನು ಹೆಚ್ಚಿಸುವುದು ಮತ್ತು ಕಂಪೆನಿಯೊಳಗಿನ ಅಧಿಕಾರಶಾಹಿಯನ್ನು ತೊಡೆದುಹಾಕುವುದು ಎಂದು ಹೇಳಿದ್ದಾರೆ. ಕಂಪೆನಿಯು ತನ್ನ ಉದ್ಯೋಗಿಗಳು ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಗ್ರಾಹಕರಿಗೆ ಹೊಸತನವನ್ನು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ಬಯಸುತ್ತದೆ. ಆದ್ದರಿಂದ ಅರ್ಹರನ್ನಷ್ಟೇ ಉಳಿಸಿಕೊಳ್ಳುವ ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

2023 ರಿಂದ ಅತಿದೊಡ್ಡ ವಜಾಗೊಳಿಸುವಿಕೆ

COVID-19 ಸಾಂಕ್ರಾಮಿಕ ರೋಗದ ನಂತರ 2022-2023ರಲ್ಲಿ ಅಮೆಜಾನ್ 27 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ನಂತರದ ಅತಿದೊಡ್ಡ ವಜಾಗೊಳಿಸುವಿಕೆ ಇದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವಜಾಗಳು ಪ್ರಾಥಮಿಕವಾಗಿ ಅಮೆಜಾನ್‌ನ ಕಾರ್ಪೊರೇಟ್ ಮತ್ತು ಕಚೇರಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತವೆ. ಅಮೆಜಾನ್ ವಿಶ್ವಾದ್ಯಂತ ಸುಮಾರು ಮೂರೂವರೆ ಲಕ್ಷ ಉದ್ಯೋಗಿಗಳನ್ನು ಹೊಂದಿದೆ, ಅವರಲ್ಲಿ ಸುಮಾರು 10% ಅಥವಾ 30 ಸಾವಿರ ಉದ್ಯೋಗಿಗಳು ಈಗ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ. ಆದಾಗ್ಯೂ, ಈ ಕಡಿತವು ತನ್ನ ಗೋದಾಮು ಮತ್ತು ವಿತರಣಾ ಜಾಲದಲ್ಲಿ ಕೆಲಸ ಮಾಡುವ 1.5 ಮಿಲಿಯನ್ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

AI ನಲ್ಲಿ ಹೂಡಿಕೆ ಪರಿಣಾಮ

ಅಕ್ಟೋಬರ್‌ನಲ್ಲಿ ಮೊದಲು ವಜಾಗೊಳಿಸುವ ಸುದ್ದಿ ಬಂದಾಗ, ಕಂಪೆನಿಯು ಪ್ರತಿಕ್ರಿಯಿಸಲು ನಿರಾಕರಿಸಿತ್ತು. ತಜ್ಞರು ಹೇಳುವಂತೆ ಅಮೆಜಾನ್ ಈಗ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ. ಕಂಪೆನಿಯು ಅದಕ್ಕೆ ಅನುಗುಣವಾಗಿ ತನ್ನ ಕಾರ್ಯಪಡೆಯನ್ನು ಹೊಂದಿಸುತ್ತಿದೆ. ಯಾವ ಇಲಾಖೆಗಳಿಂದ ಎಷ್ಟು ಜನರನ್ನು ವಜಾಗೊಳಿಸಲಾಗುವುದು ಎಂಬುದನ್ನು ಅಮೆಜಾನ್ ಇನ್ನೂ ಸ್ಪಷ್ಟಪಡಿಸಿಲ್ಲ.