ಪಂಚರಾಜ್ಯಗಳ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ತೀವ್ರ ಪೈಪೋಟಿ ಇರುವುದನ್ನು ಸೂಚಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದ್ದು, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ನವದೆಹಲಿ: ಪಂಚರಾಜ್ಯಗಳ ಚುನಾವಣೆಗಳು ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು 3 ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರೆಯುವ, ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳುವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತುರುಸಿನ ಹೋರಾಟದ ಸುಳಿವು ನೀಡಿವೆ.

ಪಶ್ಚಿಮ ಬಂಗಾಳ ಎಕ್ಸಿಟ್ ಪೋಲ್:

ಪಶ್ಚಿಮ ಬಂಗಾಳಲ್ಲಿ ಈ ಬಾರಿ ಟಿಎಂಸಿ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು 4 ಸಮಿಕ್ಷೆಗಳು ಹೇಳಿದ್ದರೆ 2 ಸಮೀಕ್ಷೆಗಳು ಸತತ 4ನೇ ಬಾರಿಗೆ ಮಮತಾರ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಕಳೆದ ಚುನಾವಣೆಯಲ್ಲೂ ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದವಾದರೂ ಅದು ಸುಳ್ಳಾಗಿತ್ತು. ಹೀಗಾಗಿ ಈ ಬಾರಿ ಫಲಿತಾಂಶ ಏನಾಗಬಹುದು ಎಂಬ ಭಾರೀ ಕುತೂಹಲ ಮೂಡಿದೆ.

ತಮಿಳುನಾಡು:

ಡಿಎಂಕೆ, ಅಣ್ಣಾಡಿಎಂಕೆ ಮತ್ತು ವಿಜಯ್‌ರ ಟಿವಿಕೆ ನಡುವಿನ ಕದನಕ್ಕೆ ಸಾಕ್ಷಿಯಾಗಿದ್ದ ತಮಿಳುನಾಡಲ್ಲಿ ಡಿಎಂಕೆ ಕುರ್ಚಿ ಭದ್ರವಾಗಿದೆ ಎಂದು 6 ಸಮೀಕ್ಷೆಗಳು ಸುಳಿವು ನೀಡಿದ್ದರೆ, 1 ಸಮೀಕ್ಷೆ ಅಣ್ಣಾಡಿಎಂಕೆ- ಬಿಜೆಪಿ ಕೂಟದ ಗೆಲುವಿನ ಭವಿಷ್ಯ ನುಡಿದಿವೆ. ಇನ್ನು ಭಾರೀ ಅಬ್ಬರ ಮೂಡಿಸಿದ್ದ ವಿಜಯ್‌ ಅವರ ಟಿವಿಕೆ ಪಕ್ಷ ಹೆಚ್ಚೇನೂ ಸಾಧನೆ ಮಾಡದು ಎಂದು 5 ಸಮೀಕ್ಷೆಗಳು ಹೇಳಿದ್ದರೆ, ಒಂದು ಸಮೀಕ್ಷೆ ಮಾತ್ರ ವಿಜಯ್‌ ಪಕ್ಷ 120 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಅಸ್ಸಾಂ:

ರಾಜ್ಯ ವಿಧಾನಸಭೆಯ 126 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬುಧವಾರ ಪ್ರಕಟವಾದ ಬಹುತೇಕ ಚುನಾವಣಾ ಸಮೀಕ್ಷೆಗಳು ಹೇಳಿವೆ. ಇದು ಖಚಿತವಾದರೆ ಹಾಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

ಕೇರಳ:

ಸತತ 10 ವರ್ಷಗಳಿಂದ ರಾಜ್ಯವನ್ನು ಆಳಿದ್ದ, ಹಲವು ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಕೇರಳದಲ್ಲಿ ಎಡಪಕ್ಷಗಳ ಎಲ್‌ಡಿಎಫ್‌ ಮೈತ್ರಿಕೂಟ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ನಡುವೆ ಕಳೆದ ಬಾರಿ ರಾಜ್ಯ ವಿಧಾನಸಭೆಯಲ್ಲಿ ಒಂದೂ ಸ್ಥಾನ ಹೊಂದಿರದಿದ್ದ ಬಿಜೆಪಿ ಈ ಬಾರಿ ದಾಖಲೆಯ 10-14 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಪುದುಚೇರಿ:

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆಲ್‌ ಇಂಡಿಯಾ ಎನ್‌ ಆರ್‌ ಕಾಂಗ್ರೆಸ್‌(ಎಐಎನ್‌ಆರ್‌ಸಿ) ಮತ್ತು ಬಿಜೆಪಿ ಕೂಟ ಅಧಿಕಾರಕ್ಕೆ ಮರಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಮೂಲಕ ಇನ್ನೊಂದು ವರ್ಷವೂ ಈ ಕೂಟದ ಆಡಳಿತವೇ ನಡೆಯಲಿದೆ.