ಇಪಿಎಫ್‌ಒ ಮಂಡಳಿಯು ನೌಕರರು ಮತ್ತು ನಿವೃತ್ತರಿಗೆ ಅನುಕೂಲವಾಗುವ ಹೊಸ ನಿಯಮಗಳನ್ನು ಪ್ರಕಟಿಸಿದೆ. ಪಿಎಫ್ ಖಾತೆಯ ಕನಿಷ್ಠ ಬ್ಯಾಲೆನ್ಸ್ ಶೇ.10ಕ್ಕೆ ಇಳಿಕೆಯಾಗಿದ್ದು, ಕಾಯುವಿಕೆ ಅವಧಿಯನ್ನು 2 ತಿಂಗಳಿಗೆ ಕಡಿಮೆ ಮಾಡಲಾಗಿದೆ. ನಿವೃತ್ತರು ತಮ್ಮ ಹಣವನ್ನು ಮಾಸಿಕ ಕಂತುಗಳಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಪಿಟಿಐ ನವದೆಹಲಿ (ನ.20): ಗುರುವಾರ ನಡೆದ ಇಪಿಎಫ್‌ಒ (ಭವಿಷ್ಯ ನಿಧಿ) ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ನೌಕರರು, ನಿವೃತ್ತರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗುವಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಇತ್ತೀಚೆಗೆ ಕಠಿಣ ಪಿಎಫ್‌ ನಿಯಮಾವಳಿಗಳ ವಿರುದ್ಧ ಸಿಡಿದೆದ್ದಿದ್ದ ನೌಕರ ವರ್ಗವನ್ನು ತಣಿಸಲು ಸರ್ಕಾರ ಮುಂದಾಗಿದೆ.

ನಿವೃತ್ತಿಯ ನಂತರ ಪಿಎಫ್ ಖಾತೆಯಲ್ಲಿರುವ ಪೂರ್ತಿ ಹಣವನ್ನು ಒಂದೇ ಬಾರಿಗೆ ಪಡೆಯುವ ಬದಲು, ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಕಂತುಗಳಲ್ಲಿ ಹಿಂಪಡೆಯುವ ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಗೆ ಅನುಮತಿಸಲಾಗಿದೆ. ಖಾತೆಯಲ್ಲಿ ಉಳಿಯುವ ಮೊತ್ತಕ್ಕೆ ಇಪಿಎಫ್ ಬಡ್ಡಿ ದರ ಮುಂದುವರಿಯಲಿದೆ. ಸುಮಾರು 6.32 ಲಕ್ಷ ನಿವೃತ್ತ ಉದ್ಯೋಗಿಗಳಿಗೆ ಇದರ ನೇರ ಪ್ರಯೋಜನ ಸಿಗಲಿದೆ.

ಬ್ಯಾಲೆನ್ಸ್‌ ಶೇ.10ಕ್ಕಿಳಿಕೆ:

ಇಪಿಎಫ್ ಖಾತೆಯಲ್ಲಿ ಕಾಯ್ದುಕೊಳ್ಳಬೇಕಾದ ಕನಿಷ್ಠ ಬ್ಯಾಲೆನ್ಸ್ ಪ್ರಮಾಣವನ್ನು ಶೇ. 25 ರಿಂದ ಶೇ.10ಕ್ಕೆ ಇಳಿಸಲಾಗಿದೆ. ಇದರಿಂದ ಸದಸ್ಯರು ತಮ್ಮ ಉಳಿತಾಯದ ಶೇ. 90 ರಷ್ಟು ಹಣವನ್ನು ಸುಲಭವಾಗಿ ಹಿಂಪಡೆಯಬಹುದು.

ಕಾಯುವಿಕೆ ಅವಧಿ 2 ತಿಂಗಳಿಗೆ:

ಉದ್ಯೋಗ ಕಳೆದುಕೊಂಡ ನಂತರ ಪೂರ್ಣ ಪಿಎಫ್ ಹಣವನ್ನು ಪಡೆಯಲು ಇದ್ದ 12 ತಿಂಗಳ ಕಾಯುವ ಅವಧಿಯನ್ನು ಇಪಿಎಫ್‌ಒ ಮಂಡಳಿಯು ಮತ್ತೆ 2 ತಿಂಗಳಿಗೆ ಇಳಿಸಿದೆ. ಪಿಂಚಣಿ ಹಣ (ಇಪಿಎಸ್) ಹಿಂಪಡೆಯಲು 36 ತಿಂಗಳ ಅವಧಿ ಮುಂದುವರಿಯಲಿದೆ.

ಆಟೋ ಸೆಟ್ಲ್‌ಮೆಂಟ್:

₹5 ಲಕ್ಷದವರೆಗಿನ ಅರ್ಹ ಮುಂಗಡ ಕ್ಲೈಮ್‌ಗಳು ಸುಮಾರು 3 ಕೆಲಸದ ದಿನಗಳಲ್ಲಿ ಸ್ವಯಂಚಾಲಿತವಾಗಿ ಇತ್ಯರ್ಥಗೊಳ್ಳುತ್ತವೆ.

ನಾಮಿನಿಗಳಿಗೆ ಅನುಕೂಲ:

ಪಿಂಚಣಿದಾರರು ಅಥವಾ ಸದಸ್ಯರು ಮೃತಪಟ್ಟರೆ, ಅವರ ನಾಮಿನಿಗಳು ಉಳಿದ ಹಣವನ್ನು ಒಂದೇ ಬಾರಿಗೆ ಪಡೆಯಬಹುದು ಅಥವಾ ಕಂತುಗಳ ರೂಪದಲ್ಲಿ ಪಡೆಯುವುದನ್ನು ಮುಂದುವರಿಸಬಹುದು.