ಛತ್ತೀಸ್‌ಗಢದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಮದ್ಯ ಹಗರಣದಲ್ಲಿ 2,883 ಕೋಟಿ ರೂ. ಅಕ್ರಮ ಗಳಿಕೆಯಾಗಿದೆ ಎಂದು ಇ.ಡಿ. ತಿಳಿಸಿದೆ. ಇದರಲ್ಲಿ ಸುಮಾರು 880 ಕೋಟಿ ರೂ. ಹಣವನ್ನು ರಾಯ್ಪುರದ ಕಾಂಗ್ರೆಸ್ ಕಚೇರಿಗೆ ರವಾನಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ರಾಯ್ಪುರ: ಛತ್ತೀಸ್‌ಗಢದಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣದಿಂದ ಸಂಗ್ರಹವಾದ ಸುಮಾರು 860ರಿಂದ 880 ಕೋಟಿ ರು.ಗಳಷ್ಟು ಹಣವನ್ನು, ಪಕ್ಷದ ಪದಾಧಿಕಾರಿಗಳ ಮೂಲಕ ರಾಯ್ಪುರದಲ್ಲಿರುವ ಪಕ್ಷದ ಕಚೇರಿಗೆ ತಲುಪಿಸಲಾಗಿತ್ತು ಎಂದು ಎಂಬ ಆಘಾತಕಾರಿ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಸೋಮವಾರ ಬಹಿರಂಗಪಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ಮಾಜಿ ಖಜಾಂಚಿ ರಾಮ್‌ಗೋಪಾಲ್ ಅಗರ್ವಾಲ್ ವಿರುದ್ಧ ಅ.9ರಂದು ವಿಶೇಷ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ಚಾರ್ಜ್‌ಶೀಟ್ ದಾಖಲಿಸಿದೆ. ಅಗರ್ವಾಲ್‌ಗೆ ಸೇರಿದ 2 ಫ್ಲಾಟ್‌ಗಳನ್ನು ಅ.10ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯದ ಆರೋಪಗಳು ಏನು?

2019-2023ರ ಅವಧಿಯಲ್ಲಿ ಮದ್ಯ ಸಿಂಡಿಕೇಟ್ ರಾಜ್ಯದ ಅಬಕಾರಿ ಇಲಾಖೆ ಹಾಗೂ ಮಾರುಕಟ್ಟೆ ನಿಗಮವನ್ನು ನಿಯಂತ್ರಿಸಿತ್ತು. ನಕಲಿ ಹೊಲೊಗ್ರಾಮ್‌ಗಳ ಮೂಲಕ ಸರ್ಕಾರದ ಮಳಿಗೆಗಳಲ್ಲಿ ಮದ್ಯ ಮಾರಾಟ, ಡಿಸ್ಟಿಲರಿಗಳಿಂದ ವಾರ್ಷಿಕ ಕಮಿಷನ್ ಹಾಗೂ ವಿದೇಶಿ ಮದ್ಯದ ಪರವಾನಗಿಗಳ ಮೂಲಕ ಒಟ್ಟು 2,883 ಕೋಟಿ ರು.ಗಳಿಗೂ ಅಧಿಕ ಆದಾಯವನ್ನು ಅಕ್ರಮವಾಗಿ ಪಡೆಯಲಾಗಿದೆ.

ಈ ಮೊತ್ತದ ಸಿಂಹಪಾಲನ್ನು ಲಕ್ಷ್ಮೀ ನಾರಾಯಣ್ ಬನ್ಸಾಲ್ ಅಲಿಯಾಸ್ ಪಪ್ಪು ಬನ್ಸಾಲ್ ಮೂಲಕ ಕಾಂಗ್ರೆಸ್ ಕಚೇರಿ ರಾಜೀವ್ ಭವನ್‌ಗೆ ತಲುಪಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ.

ಇದುವರೆಗೆ 7 ಚಾರ್ಜ್‌ಶೀಟ್‌ ದಾಖಲಿಸಿರುವ ಜಾರಿ ನಿರ್ದೇಶನಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಚಾರ್ಜ್‌ಶೀಟ್‌ಗಳನ್ನು ದಾಖಲಿಸಿರುವ ಇ.ಡಿ., ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್, ಮಾಜಿ ಅಬಕಾರಿ ಸಚಿವ ಕವಾಸಿ ಲಕ್ಮಾ, ಮಾಜಿ ಐಎಎಸ್ ಅಧಿಕಾರಿ ಅನಿಲ್ ತುಟೇಜಾ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಿದೆ. ಇಲ್ಲಿಯವರೆಗೆ 610 ಕೋಟಿ ರು. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.