ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ, ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿಗೆ ಸಿಎಂ ಪಟ್ಟ ಒಲಿದಿದೆ.

ಪಾಟ್ನಾ (ಏ.14) ನಿತೀಶ್ ಕುಮಾರ್ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಇದೀಗ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಸರ್ವಾನುತಮತದಿಂದ ಆಯ್ಕೆಯಾಗಿದ್ದಾರೆ. ಬಿಹಾರ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ನಾಲ್ಕು ಗಂಟೆಗೆ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸರ್ವಾನುಮತದಿಂದ ಸಾಮ್ರಾಟ್ ಚೌಧರಿಯನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ನಾಳೆ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Add Asianetnews Kannada as a Preferred SourcegooglePreferred

ನಾಳೆ ಪ್ರಮಾಣವಚನ ಸ್ವೀಕಾರ

57ರ ಹರೆಯದ ಸಾಮ್ರಾಟ್ ಚೌಧರಿ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೊದಲು ಸಚಿವ ಸಂಪುಟ ವಿಸರ್ಜನೆ ಮಾಡಿದ್ದರು. ನಾಳೆ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಸಚಿವ ಸಂಪುಟ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜೊತೆ ಉಪಮುಖ್ಯಮಂತ್ರಿ ಸ್ಥಾನ ಪ್ರಮಾಣವಚನವೂ ನಡೆಯುವ ಸಾಧ್ಯತೆ ಇದೆ.

2023-24ರ ಅವಧಿಯಲ್ಲಿ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಸಾಮ್ರಾಟ್ ಚೌಧರಿ ಹೊಸ ಅಲೆ ಸೃಷ್ಟಿಸಿದ್ದರು. 2022ರಲ್ಲಿ ಬಿಜೆಪಿ ಸೇರಿಕೊಂಡ ಸಾಮ್ರಾಟ್ ಚೌಧರಿ ಬಿಹಾರದ ಪ್ರಮುಖ ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿದ್ದರು. 1999ರಲ್ಲಿ ಬಿಹಾರ ವಿಧಾನಸಭೆ ಪ್ರವೇಶಿಸಿದ ಸಾಮ್ರಾಟ್ ಚೌಧರಿ ಕೃಷಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಬಿಹಾರದಲ್ಲಿ ಮೊದಲ ಬಿಜೆಪಿ ಮುಖ್ಯಮಂತ್ರಿ

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಆಡಳಿತ ಯಶಸ್ವಿಯಾಗಿದೆ. ಬಿಜೆಪಿ ಬೆಂಬಲದೊಂದಿಗೆ ಜೆಡಿಯು ಸರ್ವೋಚ್ಚ ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಆದರೆ ಇದುವರೆಗೆ ಬಿಜೆಪಿಗೆ ಮುಖ್ಯಮಂತ್ರಿ ಪದವಿ ಸಿಕ್ಕಿಲ್ಲ. ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಪಡೆದಿದೆ.

ಪ್ರಮಾಣವಚನದಲ್ಲಿ ಪ್ರಧಾನಿ ಮೋದಿ ಭಾಗಿ

ಸಾಮ್ರಾಟ್ ಚೌಧರಿ ನಾಳೆ (ಏ.15) ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ಜೊತೆ ಕೇಂದ್ರ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.