ಉದ್ಯೋಗಿಯೊಬ್ಬರು ಕಳುಹಿಸಿದ ಎರಡು ಸಾಲಿನ ರಾಜೀನಾಮೆ ಪತ್ರ ಮತ್ತು ಅದಕ್ಕೆ ಮ್ಯಾನೇಜರ್ ನೀಡಿದ ಅಷ್ಟೇ ಚುಟುಕಾದ, ಪ್ರೀತಿಯ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವು ಆರೋಗ್ಯಕರ ಕೆಲಸದ ವಾತಾವರಣ ಮತ್ತು ರಾಜೀನಾಮೆ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು ಕಂಪೆನಿಯಲ್ಲಿ ಸುದೀರ್ಘ ಕೆಲಸ ಮಾಡಿದಾಗ, ಅವರು ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ, ಹಗಲು ಇರುಳು ಶ್ರಮಿಸಿದರೂ, ಕುಟುಂಬವನ್ನೂ ಪಕ್ಕಕ್ಕಿಟ್ಟು ತಮ್ಮ ಸಂಸ್ಥೆಗಾಗಿ ದುಡಿದರೂ ಅವರು ರಾಜೀನಾಮೆ ಕೊಡುವ ಸಮಯದಲ್ಲಿ ಹಲವು ಕಂಪೆನಿಗಳು ಅವರನ್ನು ನಡೆಸಿಕೊಳ್ಳುವ ರೀತಿ ಇದಾಗಲೇ ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಕಂಪೆನಿಗಾಗಿ ಜೀವ ಸವೆಸಿದ್ದರೂ, ಅವರು ರಾಜೀನಾಮೆ ಕೊಡುತ್ತಿದ್ದಾರೆ ಎಂದು ಗೊತ್ತಾದಾಗ ಅವರನ್ನು ಕನಿಷ್ಠ ಪ್ರೀತಿಯಿಂದ ಬೀಳ್ಕೊಡುವ ವ್ಯವಸ್ಥೆ ಬಹಳ ಕಡಿಮೆಯೇ ಎನ್ನಬಹುದು.
ವೈರಲ್ ರಾಜೀನಾಮೆ-ರಿಪ್ಲೈ
ಅದೇ ಇನ್ನೊಂದೆಡೆ ರಾಜೀನಾಮೆ ಸಲ್ಲಿಸುವಾಗಲೂ ಬಹುತೇಕ ಜನರು ಸುದೀರ್ಘ ಪತ್ರ, ಇ-ಮೇಲ್ ಸಂದೇಶ ಕಳುಹಿಸುವುದು ಉಂಟು. ಇದೀಗ ಎರಡೇ ಎರಡು ಲೈನ್ನ ರಾಜೀನಾಮೆ ಪತ್ರ ಹಾಗೂ ಅದಕ್ಕೆ ಅಷ್ಟೇ ಪ್ರೀತಿಯಿಂದ ಮ್ಯಾನೇಜರ್ ಚುಟುಕಾಗಿ ಉತ್ತರಿಸಿದ ರೀತಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದು ವೈರಲ್ ಆಗಿರುವ ಪರಿಯನ್ನು ನೋಡಿದ್ರೆ, ಎಷ್ಟು ಮಂದಿ ರಾಜೀನಾಮೆ ಕೊಟ್ಟಾಗ ಅನುಭವಿಸಿರುವ ನೋವು ತಿಳಿದುಬರುತ್ತದೆ. ಇದೇ ಕಾರಣಕ್ಕೆ ಈ ರಾಜೀನಾಮೆ ಪತ್ರ ಇಷ್ಟೊಂದು ಖುಷಿಯಿಂದ ಎಲ್ಲರೂ ಶೇರ್ ಮಾಡುತ್ತಿದ್ದಾರೆ.
ಈ ವೈರಲ್ ಪೋಸ್ಟ್ ಆರೋಗ್ಯಕರ ಕೆಲಸದ ಸಂಬಂಧಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಅನೇಕರು ಉದ್ಯೋಗಿಯ ನೇರ ಸಂದೇಶ ಮತ್ತು ವ್ಯವಸ್ಥಾಪಕರ ಬೆಚ್ಚಗಿನ ಪ್ರತಿಕ್ರಿಯೆ ಎರಡನ್ನೂ ಶ್ಲಾಘಿಸುತ್ತಿದ್ದಾರೆ. X ಬಳಕೆದಾರರು ಇಮೇಲ್ ವಿನಿಮಯದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ನಂತರ ಮತ್ತು "ನಾನು ನೋಡಿದ ಅತ್ಯುತ್ತಮ ರಾಜೀನಾಮೆ" ಎಂದು ಶೀರ್ಷಿಕೆ ನೀಡಿದ ನಂತರ ಚರ್ಚೆ ಪ್ರಾರಂಭವಾಗಿದೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
ಇಮೇಲ್‌ನಲ್ಲಿ, ಉದ್ಯೋಗಿ ಬರೆದಿದ್ದಾರೆ: "ಪ್ರಿಯ ಸರ್, ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಲ್ಲದಕ್ಕೂ ಧನ್ಯವಾದಗಳು." (Dear Sir, I’ve decided to resign. Thank you for everything) ಇಷ್ಟೇ ಇದೆ. ಇದಕ್ಕಿಂತಲೂ ಹೆಚ್ಚು ಗಮನ ಸೆಳೆದದ್ದು ಸೌರಭ್ ಗುಪ್ತಾ ಎಂದು ಗುರುತಿಸಲ್ಪಟ್ಟ ಮ್ಯಾನೇಜರ್ ಕಳುಹಿಸಿರುವ ರಿಪ್ಲೈ. "ರಾಜೀನಾಮೆ ಸ್ವೀಕರಿಸಲಾಗಿದೆ. ಆದರೆ ನೆನಪಿಡಿ, ನೀವು ಹಿಂತಿರುಗಲು ಬಾಗಿಲು ಯಾವಾಗಲೂ ತೆರೆದಿರುತ್ತದೆ." (Resignation accepted. But remember, the door is always open for you to come back."). ಈ ಪೋಸ್ಟ್ ಒಂದೇ ದಿನದಲ್ಲಿ 13 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ, ಬಳಕೆದಾರರು ಸಕಾರಾತ್ಮಕ ರಾಜೀನಾಮೆಗಳನ್ನು ಹೇಗೆ ಸಾಮಾನ್ಯಗೊಳಿಸಬೇಕು ಎಂಬುದನ್ನು ಚರ್ಚಿಸುತ್ತಿದ್ದಾರೆ.


