ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಇದು ಮ್ಯಾನೇಜರ್‌ಗೆ ಉದ್ಯೋಗಿ ಕಳುಹಿಸಿದ ಲೀವ್ ಅಪ್ಲೀಕೇಶನ್ ಇಮೇಲ್. ಈ ಮೆಸೇಜ್‌ಗೆ ಕಂಪನಿ ಮ್ಯಾನೇಜರ್ ಮಾಡಿದ್ದೇನು? ರಜೆ ಅನುಮತಿಸಿದ್ರಾ, ಇಲ್ಲಾ ನೋ ಎಂದ್ರಾ?
ಭಾರತದಲ್ಲಿ ವರ್ಕ್ ಕಲ್ಚರ್ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಬ್ರಿಟೀಷರ ಕಾಲದಿಂದಲೂ ಈ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ ಅನಾರೋಗ್ಯ ಇದ್ದರೂ ರಜೆ ಕೊಡಲಿಲ್ಲ, ಆಪ್ತರು ಆಸ್ಪತ್ರೆಯಲ್ಲಿರುವಾಗ ಕೆಲಸ ಮಾಡಲು ಸೂಚಿಸಿದರು, ಹೀಗೆ ಸಾಕಷ್ಟು ಘಟನೆಗಳು ವರದಿಯಾಗಿದೆ. ಭಾರತದಲ್ಲಿ ರಜೆಗೆ ಭಿಕ್ಷೆ ಬೇಡಬೇಕು, ವಿದೇಶದಲ್ಲಿ ತಿಳಿಸಿದರೆ ಸಾಕು ಎಂದು ಇತ್ತೀಚೆಗೆ ಭಾರತೀಯ ಮೂಲದ ಉದ್ಯೋಗಿಯೊಬ್ಬರ ಪೋಸ್ಟ್ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಇದರ ನಡುವೆ ಭಾರತದಲ್ಲೂ ಉತ್ತಮ ವರ್ಕ್ ಕಲ್ಚರ್ ಇರುವ ಸಾಕಷ್ಟು ಕಂಪನಿಗಳಿವೆ. ಈ ಪೈಕಿ ಒಂದು ಕಂಪನಿಯ ಬಾಸ್ ಇದೀಗ ತಮ್ಮ ನಿರ್ಧಾರದ ಮೂಲಕ ಚರ್ಚೆಯಾಗಿದ್ದಾರೆ. ಉದ್ಯೋಗಿ ತನ್ನ ಗೆಳತಿಯೊಂದಿಗೆ ಒಂದು ದಿನ ಕಳೆಯಲು ರಜೆ ಕೊಡುವಂತೆ ಮ್ಯಾನೇಜರ್‌ಗೆ ಇಮೇಲ್ ಮಾಡಿದ್ದಾನೆ. ಈ ಇಮೇಲ್ ಹಾಗೂ ಮ್ಯಾನೇಜರ್ ನಿರ್ಧಾರ ಇದೀಗ ಚರ್ಚೆಯಾಗುತ್ತಿದೆ.
ಉದ್ಯೋಗಿ ಕಳುಹಿಸಿದ ರಜಾ ಮನವಿಯಲ್ಲಿ ಏನಿದೆ?
ಡಿಸೆಂಬರ್ 16ರಂದು ನನಗೆ ರಜೆ ನೀಡಬೇಕು ಎಂದು ನಿಮ್ಮಲ್ಲಿ ಮನವಿ ಮಾಡತ್ತಿದ್ದೇನೆ, ಕಾರಣ ನನ್ನ ಗರ್ಲ್‌ಫ್ರೆಂಡ್ ಡಿಸೆಂಬರ್ 17 ರಂದು ಆಕೆಯ ತವರೂರಾದ ಉತ್ತರಖಂಡ್‌ಗೆ ತೆರಳುತ್ತಿದ್ದಾಳೆ. ಜನವರಿ ಆರಂಭಿಕ ಕೆಲ ವಾರಗಳವರೆಗೆ ಆಕೆ ಅಲ್ಲಿ ಇರತ್ತಾಳೆ. ಹೀಗಾಗಿ ಆಕೆ ಊರಿಗೆ ಮರಳುವ ಮೊದಲು ಆಕೆಯ ಜೊತೆ ಒಂದು ದಿನ ಕಳೆಯಲು ಬಸುತ್ತೇನೆ. ಈ ರಜೆ ಸಾಧ್ಯವೇ ಎಂದು ನನಗೆ ತಿಳಿಸಿ ಎಂದು ಉದ್ಯೋಗಿ ಕಂಪನನಿಯ ಡೈರೆಕ್ಟರ್‌ಗೆ ಇಮೇಲ್ ಸಂದೇಶ ರವಾನಿಸಿದ್ದಾನೆ.
ಇಮೇಲ್ ಬಹಿರಂಗಪಡಿಸಿದ ಕಂಪನಿ ಡೈರೆಕ್ಟರ್
ಒರಲ್ ಕೇರ್ ಬ್ರ್ಯಾಂಡ್‌ನ ನಿರ್ದೇಶಕ ವೀರೇನ್ ಖುಲ್ಲರ್, ತಮ್ಮ ಕಂಪನಿಯ ಉದ್ಯೋಗಿಯ ರಜೆಗಾಗಿ ಮಾಡಿದ ಮನವಿಯ ಇಮೇಲ್ ಬಹಿರಂಗಪಡಿಸಿದ್ದಾರೆ. ವೀರೇನ್ ಖುಲ್ಲರ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ನನ್ನ ಇನ್‌ಬಾಕ್ಸ್‌ಗೆ ಈ ಇಮೇಲ್ ಬಂದಿತ್ತು. ಕೆಲ ವರ್ಷಗಳ ಹಿಂದೆ ಆಗಿದ್ದರೆ, 9.15ಕ್ಕೆ ನನಗೆ ತೀವ್ರ ಅನಾರೋಗ್ಯದ ಕಾರಣ ಕಚೇರಿಗೆ ಬರಲು ಆಗುತ್ತಿಲ್ಲ ಎಂದು ಸಿಕ್ ಲೀವ್ ಕೇಳುವ ಮೆಸೇಜ್ ಸಾಮಾನ್ಯವಾಗಿತ್ತು. ಆದರೆ ಈಗ ಅತ್ಯಂತ ಪಾರದರ್ಶಕತೆಯಿಂದ ಕೂಡಿದ ಹಾಗೂ ಮೊದಲೇ ತಿಳಿಸಿದ ಇಮೇಲ್ ಇದಾಗಿತ್ತು. ಸಮಯ ಬದಲಾಗಿದೆ ಎಂದು ಉದ್ಯೋಗಿ ಕಳುಹಿಸಿದ ಇಮೇಲ್ ಹಂಚಿಕೊಂಡಿದ್ದಾರೆ. ಸತ್ಯವನ್ನು ತಿಳಿಸಿದ ಈ ಮನವಿಯನ್ನು ನಾನು ಪುರಸ್ಕರಿಸುತ್ತೇನೆ. ಪ್ರೀತಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಅದು ಸಾಧ್ಯವೇ? ರಜೆ ನೀಡಲಾಗಿದೆ ಎಂದು ವೀರೇನ್ ಖುಲ್ಲರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಡೈರೆಕ್ಟರ್ ಮಾಡಿದ ಪೋಸ್ಟ್‌ಗೆ ಹಲವು ಕಂಪನಿ ನಿರ್ದೇಶಕರು, ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ. ಇಂದಿನ ಪೀಳಿಗೆ ಸಂವಹನದಲ್ಲಿ ನೇರ ಹಾಗೂ ಸ್ಪಷ್ಟತೆ ಇದೆ. ಈ ಪಾರದರ್ಶಕತೆ ಉತ್ತಮ ಬೆಳವಣಿಗೆ. ಇದರಿಂದ ಕಂಪನಿ ಮ್ಯಾನೇಜರ್ ಅಥವಾ ಟೀಮ್ ಲೀಡ್‌ಗಳಿಗೆ ಮೊದಲೇ ಪ್ಲಾನ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಉದ್ಯೋಗಿ ಮೇಲೆನ ಭರವಸೆ, ನಂಬಿಕೆ ಹೆಚ್ಚಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಈ ರೀತಿಯ ಪಾದರ್ಶಕ ಮನವಿಗಳು ಮ್ಯಾನೇಜರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದಿದ್ದಾರೆ. ಹೊಸ ವೆಬ್ ಸೀರಿಸ್ ನೋಡಲು ರಜೆ ಬೇಕು, ಹೊಸ ಐಫೋನ್ ಖರೀದಿಸಲು ಸರದಿ ಸಾಲಿನಲ್ಲಿ ನಿಲ್ಲಬೇಕು, ಹೀಗಾಗಿ ರಜೆ ಬೇಕು, ನನ್ನ ಸಾಕು ಪ್ರಾಣಿ ಆರೋಗ್ಯ ಸರಿಯಿಲ್ಲ ರಜೆ ಕೊಡಿ ಎಂದು ಕೇಳಿದಾಗ ಪಾರದರ್ಶಕತೆ ಪ್ರಶ್ನೆಯನ್ನು ಪರಿಗಣಿಸಬೇಕಾ ಅಥವಾ ವೃತ್ತಿಪರತೆಯನ್ನು ಪರಿಗಣಿಸಬೇಕಾ ಅನ್ನೋ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ ಎಂದು ಕೆಲ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಮತ್ತೆ ಕೆಲ ಕಂಪನಿ ಪ್ರಮುಖರು, ಉದ್ಯೋಗಿಳಲ್ಲಿ ರಜೆಗೆ ಕಾರಣ ಕೇಳಬಾರದು ಎಂದು ಸಲಹೆ ನೀಡಿದ್ದಾರೆ.


