ಪಾಕ್ ಪರ ಗೂಢಚರ್ಯೆ ನಡೆಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಯುಎಇ ಮೂಲದ ವೀಗೋ ಸಂಸ್ಥೆ ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಹಿಸಾರ್ (ಹರ್ಯಾಣ): ಪಾಕ್ ಪರ ಗೂಢಚರ್ಯೆ ನಡಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ತನ್ನ ಪ್ರವಾಸಕ್ಕೆ ಹಲವಾರು ಪ್ರಾಯೋಜಕತ್ವ ಪಡೆಯುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಲು ಆಕೆಗೆ ಯುಎಇ ಮೂಲದ ವೀಗೋ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ, ವೇದಿಕೆಯಲ್ಲಿ ಸುಮಾರು 4 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ಅವರು 1,32,000 ಅನುಯಾಯಿಗಳನ್ನು ಹೊಂದಿದ್ದಾಳೆ.
4 ದಿನ ಕಸ್ಟಡಿ ವಿಸ್ತರಣೆ: ಈ ನಡುವೆ, ಹರ್ಯಾಣ ಪೊಲೀಸರ ವಶದಲ್ಲಿರುವ ಜ್ಯೋತಿ ಕಸ್ಟಡಿಯನ್ನು ಕೋರ್ಟು ಇನ್ನೂ 4 ದಿನ ವಿಸ್ತರಿಸಿದೆ.
ಪಾಕ್ ಪರ ಗೂಢಚರ್ಯೆ: ವಾರಾಣಸಿಯಲ್ಲಿ ಒಬ್ಬನ ಸೆರೆ
ವಾರಾಣಸಿ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ವಾರಣಾಸಿಯ ತುಫೈಲ್‌ರ ಮಕ್ಸೂದ್ ಆಲಂ ಎಂಬಾತನನ್ನು ಯುಪಿ ಎಟಿಎಸ್ ಬಂಧಿಸಿದೆ.ಭಾರತದ ಆಂತರಿಕ ಭದ್ರತೆಯ ಬಗ್ಗೆ ಆತ ಪಾಕಿಸ್ತಾನದೊಂದಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಈ ವಿಷಯ ಗುಪ್ತದಳದ ಗಮನಕ್ಕೆ ಬಂದು ಎಟಿಎಸ್ ವಾರಾಣಸಿ ಘಟಕಕ್ಕೆ ಮಾಹಿತಿ ನೀಡಿತು. ಆಗ ಆತನನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್‌ನ ನಾಯಕ ಮೌಲಾನಾ ಶಾ ರಿಜ್ವಿಯ ವೀಡಿಯೊಗಳನ್ನು ಈತ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅಲ್ಲದೆ, ಬಾಬ್ರಿ ಮಸೀದಿ ಧ್ವಂಸದ ಸೇಡು ಮತ್ತು ಭಾರತದಲ್ಲಿ ಶರಿಯತ್ ಅನ್ನು ಜಾರಿಗೆ ತರುವ ‘ಘಜ್ವಾ-ಇ-ಹಿಂದ್’ಗೆ ಕರೆ ನೀಡುವ ಸಂದೇಶಗಳನ್ನೂ ಆತ ಹಂಚಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇಡಿಗೆ ಸೇಡು: ಪಾಕ್‌ನಿಂದ ಭಾರತ ದೂತಾವಾಸ ಸಿಬ್ಬಂದಿ ವಜಾ
ಇಸ್ಲಾಮಾಬಾದ್: ಭಾರತವು ಪಾಕ್ ದೂತಾವಾಸದ ಒಬ್ಬ ಸಿಬ್ಬಂದಿಯನ್ನು ದೇಶದಿಂದ ಹೊರಹೋಗಲು ಆದೇಶಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಗುರುವಾರ ಭಾರತೀಯ ಹೈಕಮಿಷನ್ ಸಿಬ್ಬಂದಿಯೊಬ್ಬರನ್ನು ಹೊರಹಾಕಿರುವುದಾಗಿ ಘೋಷಿಸಿದೆ.‘ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರ ಸ್ಥಾನದಿಂದ ವಜಾಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ನಿರ್ದೇಶಿಸಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಗೂಢಚರ್ಯೆಯಲ್ಲಿ ತೊಡಗಿರುವ ಆರೋಪದ ಮೇಲೆ ದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರನ್ನು ಬುಧವಾರ ಭಾರತ ಹೊರಹಾಕಿತ್ತು. ಅವರಿಗೆ ಭಾರತ ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಮೇ 13ರಂದು ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದಲ್ಲಿ ಭಾರತ ಮತ್ತೊಬ್ಬ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿತ್ತು. ಭಾರತದ ಕ್ರಮದ ನಂತರ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿದ್ದ ಸಿಬ್ಬಂದಿಯನ್ನು ಹೊರಹಾಕಿದೆ.
ಪಹಲ್ಗಾಂ ದಾಳಿಗೆ 1 ತಿಂಗಳು; ಇನ್ನೂ ಹಂತಕರ ಪತ್ತೆಯಿಲ್ಲ
ಪಹಲ್ಗಾಂ: ಪಹಲ್ಗಾಂ ಉಗ್ರ ದಾಳಿಗೆ 26 ಅಮಾಯಕ ನಾಗರಿಕರು ಬಲಿಯಾಗಿ ಮೇ 22ಕ್ಕೆ ಒಂದು ತಿಂಗಳು ಕಳೆದಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ನಾಗರಿಕರನ್ನು ಕೊಂದ ಉಗ್ರರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ನರಮೇಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದ 100ಕ್ಕೂ ಹೆಚ್ಚು ಶಂಕಿತರನ್ನು ಪ್ರಶ್ನಿಸಿದೆ.
ಘಟನೆ ನಡೆದ ಬೈಸರನ್ ಹುಲ್ಲುಗಾವಲಿನ ಆಹಾರ ಮಳಿಗೆ ಮಾಲೀಕರು, ಜಿಪ್‌ಲೈನ್ ನಿರ್ವಾಹಕರು, ಕುದುರೆ ಸವಾರರು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದವರನ್ನು ಪರಿಶೀಲಿಸಲಾಗಿದೆ.ದಾಳೆ ನಡೆಸಿದ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿ, ಅವರ ಮಾಹಿತಿ ನೀಡಿದವರಿಗೆ 20 ಲಕ್ಷ ರು. ಬಹುಮಾನ ಘೋಷಿಸಲಾಗಿದೆ. ಪಹಲ್ಗಾಂ ಸುತ್ತಮುತ್ತಲಿನ ಮೊಬೈಲ್ ಡೇಟಾ, ದಾಳಿ ವೇಳೆ ಪ್ರವಾಸಿಗರು ಸೆರೆಹಿಡಿದ ವಿಡಿಯೋಗಳನ್ನು ತನಿಖಾಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಸುಮಾರು 100 ಜನರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿವಿಧ ಜೈಲುಗಳಿಗೆ ಕಳುಹಿಸಲಾಗಿದೆ. ಈಗಾಗಲೇ ಶಿಕ್ಷೆ ಅನುಭವಿಸಿದ ಉಗ್ರಗಾಮಿಗಳನ್ನು ಸಹ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಆದರೂ ಯಾವುದೇ ಪ್ರಯತ್ನ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹಂತಕರು ಇಲ್ಲಿಯವರೆಗೆ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾವು ಅವರನ್ನು ಹಿಡಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


