ಹೈದರಾಬಾದ್‌ನಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದ ಆಟೋ ಚಾಲಕನೊಬ್ಬ, ಕೇಸ್‌ನಿಂದ ತಪ್ಪಿಸಿಕೊಳ್ಳಲು ಸತ್ತ ಹಾವನ್ನು ತೋರಿಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆತಂಕಗೊಂಡ ಸಮಯವನ್ನು ಬಳಸಿಕೊಂಡು, ಚಾಲಕ ತನ್ನ ಆಟೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
ಹೈದರಾಬಾದ್: ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಯುವಕನೋರ್ವ ತನ್ನನ್ನು ಹಿಡಿದ ಪೊಲೀಸರಿಗೆ ಸತ್ತಿರುವ ಹಾವು ತೋರಿಸಿ ಬೆದರಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸರು ಮಾಮೂಲಿಯಂತೆ ಡ್ರಿಂಕ್ & ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಈ ಕುಡುಕ ಆಟೋ ರಿಕ್ಷಾ ಚಾಲಕ, ಸತ್ತ ಹಾವನ್ನು ತೋರಿಸಿ ಪೊಲೀಸರಿಗೆ ಹೆದರಿಸಲು ಯತ್ನಿಸಿದ್ದಾರೆ.
ಹೈದರಾಬಾದ್ ಓಲ್ಡ್ ಸಿಟಿಯ ಚಂದ್ರಯನಗುಟ್ಟದಲ್ಲಿ ಈ ಘಟನೆ ನಡೆದಿದೆ. ಆತ ಕುಡಿದಿರಬಹುದು ಎಂಬ ಅನುಮಾನದ ಮೇಲೆಯೇ ಪೊಲೀಸರು ಆತನನ್ನು ಹಿಡಿದಿದ್ದಾರೆ. ಈ ವೇಳೆ ಆತನಿಗೆ ತಪಾಸಣೆ(breathalyser test) ಮಾಡಿದಾಗ ಆತ ಕುಡಿದಿರುವುದು ಖಚಿತವಾಗಿದೆ. ಈ ವೇಳೆ ತಪಾಸಣೆ ಮಾಡುವ ಉಪಕರಣ 150 ತೋರಿಸುತ್ತಿತ್ತು. ಇದು ಕಾನೂನಾತ್ಮಕ ಲಿಮಿಟ್‌ಗಿಂತಲೂ ಅಧಿಕವಾಗಿತ್ತು. ನಂತರ ಪೊಲೀಸರು ಆತನ ವಿರುದ್ದ ಕೇಸ್ ಹಾಕಿ ಅವನ ತ್ರಿಚಕ್ರವಾಹನವಾದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದರು.
ಈ ವೇಳೆ ಟ್ರಾಫಿಕ್ ಪೊಲೀಸರು ರಿಕ್ಷಾದಲ್ಲಿರುವ ನಿನ್ನ ಸಾಮಾನು ಸರಂಜಾಮುಗಳನ್ನು ತೆಗೆಯುವುಂತೆ ಆತನಿಗೆ ಹೇಳಿದಾಗ ಆತ ಒಮ್ಮೆಲೆ ಸತ್ತಿರುವ ಹಾವೊಂದನ್ನು ತೆಗೆದು ಅವರಿಗೆ ಹೆದರಿಸಲು ಮುಂದಾಗಿದ್ದಲ್ಲದೇ ಕೇಸು ದಾಖಲಿಸದೇ ಆಟೋವನ್ನು ಬಿಟ್ಟು ಬಿಡುವಂತೆ ಒತ್ತಾಯ ಮಾಡಿದ್ದಾನೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಆತ ಟ್ರಾಫಿಕ್ ಪೊಲೀಸರ ಹತ್ತಿರ ಹೋಗಿ ತನ್ನ ಕೈಗೆ ಸುತ್ತಿಕೊಂಡಿದ್ದ ಹಾವನ್ನು ತೆಗೆದು ಪೊಲೀಸ್ ಅಧಿಕಾರಿಯ ಮುಖದ ಮುಂದೆ ಹಿಡಿಯುವುದನ್ನು ನೋಡಬಹುದು.
ಇದನ್ನೂ ಓದಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ: ಬಾವಿಗೆ ಬಿದ್ದು ರೈತ ಚಿರತೆ ಇಬ್ಬರೂ ಸಾವು
ಕೂಡಲೇ ಕೆಲ ಕ್ಷಣ ತುಸು ಆತಂಕಗೊಂಡ ಪೊಲೀಸ್ ಅಧಿಕಾರಿ ಆತನನ್ನು ದೂರ ಹೋಗುವಂತೆ ಹೇಳುತ್ತಾರೆ. ಆದರೆ ಆತ ಆ ಹಾವನ್ನು ಮತ್ತೆ ಕೈಗೆ ಸುತ್ತಿಕೊಂಡು ಅಲ್ಲಿಗೆ ಬಂದಿದ್ದಾನೆ. ಅಲ್ಲಿದ್ದ ಅನೇಕರು ಇದು ನಿಜವಾದ ಹಾವೇ ಎಂದು ಕೂಗಾಡುತ್ತಾ ಕೇಳುವುದನ್ನು ನೋಡಬಹುದಾಗಿದೆ. ಹೀಗಾಗಿ ಹಾನಿತಡೆಯುವುದಕ್ಕೆ ಪೊಲೀಸರು ಅಲ್ಲಿಸೇರಿದ ಜನರನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಈ ಸಮಯ ನೋಡಿ ಆ ಕುಡುಕ ಆಟೋ ಚಾಲಕ ಅಲ್ಲಿಂದ ತನ್ನ ಆಟೋ ಹಾಗೂ ಹಾವಿನೊಂದಿಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಮದುವೆ ಮನೆಯಲ್ಲೇ ಎಎಪಿ ನಾಯಕನ ಭೀಕರ ಹತ್ಯೆ: ಅತಿಥಿಗಳ ಮುಂದೆಯೇ ಗುಂಡಿಕ್ಕಿದ ದುಷ್ಕರ್ಮಿಗಳು
ನ್ಯೂ ಇಯರ್ ಸಂಭ್ರಮಾಚರಣೆಗಾಗಿ ಹೈದರಾಬಾದ್‌ನಲ್ಲಿ ಭಾರಿ ಭದ್ರತೆ ಏರ್ಪಡಿಸಿದ ಸಮಯದಲ್ಲೇ ಈ ಘಟನೆ ನಡೆದಿದೆ. ಹೊಸವರ್ಷದಂದು ಹೈದರಾಬಾದ್ ಪೊಲೀಸರು ಒಟ್ಟು 2,731 ಚಾಲಕರ ಮೇಲೆ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಸೈಬರಾಬಾದ್‌ನಲ್ಲಿ 928,ರಾಚಕೊಂಡದಲ್ಲಿ 605 ಪ್ರಕರಣ ಹಾಗೂ ಹೈದರಾಬಾದ್ ನಗರದಲ್ಲಿ 1198 ಪ್ರಕರಣ ದಾಖಲಾಗಿದೆ.


