ಬೆಂಗಳೂರು[ನ.20]: ಮಳೆ, ಗಾಳಿ, ಬಿಸಿಲು ಎನ್ನದೆ ನಗರದ ಸುಗಮ ಸಂಚಾರಕ್ಕೆ ದಣಿಯುವ ಸಂಚಾರ ವಿಭಾಗದ ಪೊಲೀಸರಲ್ಲಿ ಆಹ್ಲಾದಕರ ಭಾವನೆ ಮೂಡಿಸಲು ಅಧಿಕಾರಿಗಳು ಇದೀಗ ಠಾಣೆಗಳಲ್ಲೇ ಪೊಲೀಸರಿಗೆ ಮಸಾಜ್‌ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದಾರೆ.

ಈ ಸಂಬಂಧ ಕೆಲ ಸರ್ಕಾರಿ ಹಾಗೂ ಖಾಸಗಿ ಆಯುರ್ವೇದಿಕ್‌ ಚಿಕಿತ್ಸಾ ಕೇಂದ್ರಗಳ ಜೊತೆ ಮೌಖಿಕವಾಗಿ ಮಾತುಕತೆ ನಡೆಸಿರುವ ಅಧಿಕಾರಿಗಳು, ಶೀಘ್ರವೇ ಲಿಖಿತವಾಗಿ ಪ್ರಸ್ತಾವನೆ ಕಳುಹಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿ ದಿನ ಜನರ ಓಡಾಟಕ್ಕೆ ತೊಂದರೆ ಉಂಟಾಗದಂತೆ ನಗರದ 44 ಠಾಣೆಗಳ ಪೊಲೀಸರು ಶ್ರಮಿಸುತ್ತಾರೆ. ತುಮಕೂರು, ಹೊಸೂರು, ಮೈಸೂರು ಹೆದ್ದಾರಿಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತಾರೆ. ತಾಸುಗಟ್ಟಲೇ ನಿಂತಲ್ಲೇ ನಿಂತು ಸಂಚಾರ ನಿರ್ವಹಿಸುವ ಪೊಲೀಸರು ಆಯಾಸಗೊಳ್ಳುತ್ತಾರೆ. ಈ ದೈಹಿಕ ಶ್ರಮದಿಂದ ಕೆಲವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ವಿಚಾರ ಮನಗಂಡಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಗೂ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಬಿ.ಆರ್‌.ರವಿಕಾಂತೇಗೌಡ ಅವರು, ಸಂಚಾರ ಪೊಲೀಸರಿಗೆ ಠಾಣೆಗಳಲ್ಲಿ ವಾರಕ್ಕೊಮ್ಮೆಯಾದರೂ ಮಸಾಜ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಮಲ್ಲೇಶ್ವರ ಠಾಣೆಯಲ್ಲಿ ಮಸಾಜ್‌:

ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರಿಗೆ ಸೋಮವಾರ ಉಚಿತವಾಗಿ ಮಸಾಜ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಯುರ್ವೇದಿಕ್‌ ಚಿಕಿತ್ಸಾ ಕೇಂದ್ರ ಹೊಂದಿರುವ ದಿನೇಶ್‌ ಎಂಬುವರು, ಪೊಲೀಸರಿಗೆ ಠಾಣೆಯಲ್ಲೇ ಮಸಾಜ್‌ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟುಚರ್ಚೆ ನಡೆದು, ಜನರಿಂದ ಪ್ರಶಂಸೆ ಸಹ ವ್ಯಕ್ತವಾಯಿತು. ಇದರ ಮಾಹಿತಿ ತಿಳಿದು ರವಿಕಾಂತೇಗೌಡ ಅವರು, ನಗರದ ಎಲ್ಲ ಸಂಚಾರ ಠಾಣೆಗಳಲ್ಲಿ ಸಹ ಮಸಾಜ್‌ ವ್ಯವಸ್ಥೆಗೆ ಮುಂದಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಬಹಳ ದಿನಗಳಿಂದ ನನಗೆ ದಿನೇಶ್‌ ಪರಿಚಯವಿದೆ. ಈ ವೈಯಕ್ತಿಕ ಸ್ನೇಹದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿಗೆ ಅವರು ಉಚಿತವಾಗಿ ಮಸಾಜ್‌ ಮಾಡಿದ್ದಾರೆ. ಇದರಿಂದ ಪೊಲೀಸರು ಸಹ ರಿಲ್ಯಾಕ್ಸ್‌ ಆಗಿದ್ದಾರೆ’ ಎಂದು ಮಲ್ಲೇಶ್ವರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಅನಿಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪ್ರತಿ ದಿನ ಸಂಚಾರ ನಿರ್ವಹಣೆ ಸಲುವಾಗಿ ತಾಸುಗಟ್ಟಲೇ ರಸ್ತೆಯಲ್ಲೇ ನಿಂತು ಸಂಚಾರ ಪೊಲೀಸರು ದಣಿಯುತ್ತಾರೆ. ಆಯಾಸಗೊಳ್ಳುವ ಅವರ ಮನ್ಸಸಿನಲ್ಲೂ ಉಲ್ಲಾಸ ತುಂಬಲು ಮಸಾಜ್‌ ಮೊರೆ ಹೋಗಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಸಹ ವರದಿ ಪಡೆದಿದ್ದಾರೆ ಎಂದು ಇನ್‌ಸ್ಪೆಕ್ಟರ್‌ ಹೇಳಿದರು.