ಮಿತಿ ಮೀರಿದ ವಾಯು ಮಾಲಿನ್ಯದಿಂದ ಕಂಗೆಟ್ಟದೆಹಲಿ ಸರ್ಕಾರ ವಾಯು ಮಾಲಿನ್ಯ ಇಳಿಕೆಗೆ ಹರಸಾಹಸ ಪಡುತ್ತಿದೆ. ಹಾಗಾಗಿಯೇ 12 ದಿನಗಳ ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ಯೋಜನೆಯನ್ನು ಸೋಮವಾರದಿಂದ ಮತ್ತೆ ಅನುಷ್ಠಾನಗೊಳಿಸಿದೆ.

ಸಮ-ಬೆಸ ಸಚಾರಿ ವ್ಯವಸ್ಥೆಯು ರಾಷ್ಟ್ರ ರಾಜಧಾನಿಯಲ್ಲಿ ನ.15 ರವರೆಗೆ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ದೆಹಲಿ ಮಾಲಿನ್ಯಕ್ಕೆ ವಾಹನಗಳೆಷ್ಟುಕಾರಣ, ಸಮ-ಬೆಸ ನಿಯಮದಿಂದ ನಿಜಕ್ಕೂ ದೆಹಲಿ ಮಾಲಿನ್ಯವನ್ನು ಕಡಿಮೆ ಮಾಡುತ್ತಾ ಎಂಬ ವಿವರ ಇಲ್ಲಿದೆ.

ದಿಲ್ಲಿಯಲ್ಲಿ ಮತ್ತೆ ಸಮ- ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ

ಏನಿದು ಸಮ-ಬೆಸ ಸಂಚಾರ ಯೋಜನೆ?

ದೆಹಲಿ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆಂದೇ 2016ರ ಜನವರಿಯಲ್ಲಿ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಸಮ-ಬೆಸ ಸಂಚಾರ ನಿಯಮವನ್ನು ಮೊಟ್ಟಮೊದಲ ಬಾರಿಗೆ ಜಾರಿಗೆ ತಂದಿತು. ಈ ಯೋಜನೆಯಂತೆ ನೋಂದಣಿ ಸಂಖ್ಯೆಯ ಕೊನೆಯಲ್ಲಿ ಬೆಸ ಅಂಕಿಗಳನ್ನು ಹೊಂದಿರುವ ವಾಹನಗಳನ್ನು ನಗರ ರಸ್ತೆಗಳಲ್ಲಿ ಬೆಸ ದಿನಾಂಕಗಳಲ್ಲಿ ಅನುಮತಿಸಲಾಗುವುದು.

ಅಂತೆಯೇ ನೋಂದಣಿ ಸಂಖ್ಯೆಯ ಕೊನೆಯಲ್ಲಿ ಸಮ ಅಂಕಿಗಳನ್ನು ಹೊಂದಿರುವ ವಾಹನಗಳನ್ನು ಸಮ ಸಂಖ್ಯೆ ಹೊಂದಿರುವ ದಿನಾಂಕಗಳಲ್ಲಿ ಅನುಮತಿಸಲಾಗುತ್ತದೆ. ಈ ಯೋಜನೆ ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10ರವರೆಗೆ ಅನ್ವಯಿಸುತ್ತದೆ. ಸಮ-ಬೆಸ ಸಂಖ್ಯೆ ಯೋಜನೆ ಉಲ್ಲಂಘಿಸಿದರೆ 4,000 ರೂ. ದಂಡ ತೆರಬೇಕಾಗುತ್ತದೆ.

ಮುಖ್ಯಮಂತ್ರಿಗೂ ಅನ್ವಯ

ಇತರ ರಾಜ್ಯಗಳಿಂದ ಬರುವ ವಾಹನಗಳಿಗೂ ಸಮ-ಬೆಸ ಯೋಜನೆ ಅನ್ವಯಿಸುತ್ತದೆ. ಆದರೆ, ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಇದರಿಂದ ನೀಡಲಾಗಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಸಚಿವರಿಗೂ ಯೋಜನೆ ಅನ್ವಯಿಸುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್‌, ಕೇಂದ್ರ ಸಚಿವರು, ರಾಜ್ಯಸಭೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು, ಯುಪಿಎಸ್ಸಿ ಅಧ್ಯಕ್ಷರು, ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರು, ಮಹಾಲೇಖಪಾಲರು, ರಾಜ್ಯಸಭೆ ಉಪಸಭಾಪತಿ, ಲೋಕಸಭೆ ಉಪಾಧ್ಯಕ್ಷರು, ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌, ದೆಹಲಿ ಹೈಕೋರ್ಟ್‌ ನ್ಯಾಯಾಧೀಶರು, ಲೋಕಾಯುಕ್ತರು ಮತ್ತು ತುರ್ತು ಸೇವೆಗಳ ನ್ಯಾಯಾಧೀಶರ ವಾಹನಗಳಿಗೆ ಬೆಸ-ಸಮ ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.

ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

ಸಮ-ಬೆಸ ಸಂಚಾರದಿಂದ ದೆಹಲಿ ಮಾಲಿನ್ಯ ಇಳಿಯುತ್ತಾ?

ಸಮ-ಬೆಸ ಸಂಚಾರ ನಿಯಮದಿಂದ ದೆಹಲಿ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆಯೇ ಎನ್ನುವುದನ್ನು ಇಷ್ಟುಬೇಗ ನಿರ್ಧರಿಸುವುದು ಕಷ್ಟ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಸಮ-ಬೆಸ ವಾಹನ ಸಂಚಾರದಿಂದ ದೆಹಲಿ ಮಾಲಿನ್ಯ 10-13% ಕಡಿಮೆಯಾಗಬಹುದು ಎಂದು ಅಂದಾಜಿಸಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಣಕ್ಕೆಂದೇ 2016ರ ಜನವರಿಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೊದಲ ಬಾರಿಗೆ ಸಮ-ಬೆಸ ವಾಹನ ಸಂಚಾರ ನಿಯಮ ಆರಂಭಿಸಿದರು. ಆಗ ದೆಹಲಿ ಮಾಲಿನ್ಯ ನಿಯಂತ್ರಿಸುವಲ್ಲಿ ಇದು ಅಷ್ಟೇನೂ ಫಲಕಾರಿಯಾಗಿರಲಿಲ್ಲ.

2016 ರ ಜನವರಿ ಮತ್ತು ಏಪ್ರಿಲ್‌ನಲ್ಲಿ ವಾಯು ಗುಣಮಟ್ಟತೀರಾ ಕಳಪೆ ಮಟ್ಟಕ್ಕೆ ಕುಸಿದಾಗ ಈ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ದೆಹಲಿಯ ವಾಯು ಗುಣಮಟ್ಟಸೂಚ್ಯಂಕದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ದೆಹಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ, ಸಮ-ಬೆಸ ವಾಹನ ಸಂಚಾರದಿಂದ ಸಂಚಾರ ದಟ್ಟಣೆ ಇಳಿಕೆಯೊಂದಿಗೆ ಅಲ್ಪ ಮಟ್ಟಿಗೆ ಮಾಲಿನ್ಯ ತಗ್ಗುತ್ತದಷ್ಟೆ. ಆದರೆ ಸಂಪೂರ್ಣ ಮಾಲಿನ್ಯ ನಿಂಯಂತ್ರಣ ಇದೊಂದರಿಂದಲೇ ಸಾಧ್ಯವಿಲ್ಲ ಎಂದಿತ್ತು.

ಹೆಚ್ಚುವರಿ ಬಸ್‌ನಿಂದ ದೆಹಲಿ ಮಾಲಿನ್ಯ ಕಡಿಮೆಯಾಗುತ್ತಾ?

ರಾಷ್ಟ್ರ ರಾಜಧಾನಿಯಾಗಿರುವ ದೆಹಲಿ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದು. ಹಲವಾರು ಕಾರಣಗಳಿಂದ ದೆಹಲಿ ಪ್ರತಿ ವರ್ಷ ವಾಯು ಮಾಲಿನ್ಯದಿಂದ ನಲುಗುತ್ತದೆ. ಇಲ್ಲಿನ ವಾಯು ಮಾಲಿನ್ಯ ಇಳಿಕೆಗೆ ಸಾರ್ವಜನಿಕ ಸಂಚಾರಿ ವ್ಯವಸ್ಥೆಗೆ ಉತ್ತೇಜನ ನೀಡಲೇಬೇಕಾದ ತುರ್ತು ಇದೆ. ಅಲ್ಲಿ ಈಗಾಗಲೇ ಮೆಟ್ರೋ ಆರಂಭವಾಗಿದ್ದರೂ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಇಲ್ಲ. ಅಲ್ಲದೆ ಮೆಟ್ರೋಗಳಿಗೆ ನಿರ್ದಿಷ್ಟಮಾರ್ಗ ಇದ್ದು, ಅದಷ್ಟರಲ್ಲಿ ಮಾತ್ರ ಅವು ಸಂಚರಿಸುತ್ತವೆ. ಆದರೆ ಬಸ್ಸುಗಳು ಮೂಲೆ ಮೂಲೆಗೆ ಜನರನ್ನು ತಲುಪಿಸುತ್ತವೆ.

ಆದರೆ ದೆಹಲಿಯಲ್ಲಿ ಅಗತ್ಯವಿರುವಷ್ಟುಬಸ್ಸುಗಳು ಇಲ್ಲ. ದೆಹಲಿ ಸಹಕಾರ ಸಾರಿಗೆ ಬಳಿ ಬರೀ 4000 ಬಸ್ಸುಗಳಿವೆ. ಒಟ್ಟು 5594 ಬಸ್ಸುಗಳಿವೆ. ಉಳಿದವು ಖಾಸಗಿ ಬಸ್ಸುಗಳು. ಆದರೆ ದೆಹಲಿಗೆ ನಿಷ್ಠ 11000 ಬಸ್ಸುಗಳ ಅಗತ್ಯವಿದೆ. ಹಾಗಾಗಿ ದೆಹಲಿಯಲ್ಲಿ ಹೆಚ್ಚುವರಿ 2000 ಬಸ್ಸು (ಸಿಎನ್‌ಜಿ ಅಥವಾ ವಿದ್ಯುತ್‌ ಚಾಲಿತ)ಗಳನ್ನು ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. 1998ರಲ್ಲಿ ಸುಪ್ರೀಂಕೋರ್ಟ್‌ ಕೂಡ ದೆಹಲಿ ಸಂಚಾರಕ್ಕೆ ಬಸ್ಸುಗಳ ಸಂಖ್ಯೆಯನ್ನು 5000ದಿಂದ 10,000ಕ್ಕೆ ಹೆಚ್ಚಿಸಬೇಕೆಂದು ನಿರ್ದೇಶಿಸಿತ್ತು.

ವಿದ್ಯುತ್‌ ಚಾಲಿತ ಬಸ್ಸುಗಳು ದೆಹಲಿ ಮಾಲಿನ್ಯಕ್ಕೆ ಪರಿಹಾರವೇ?

ಮಿತಿ ಮೀರಿರುವ ದೆಹಲಿ ಮಾಲಿನ್ಯನಿಯಂತ್ರಣಕ್ಕೆ ವಿದ್ಯುತ್‌ ಚಾಲಿತ ಬಸ್ಸುಗಳು ಖಂಡಿತಾ ಮದ್ದಾಗುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ಅವುಗಳ ಸಾಮರ್ಥ್ಯ ಕಡಿಮೆ. ದಿನಕ್ಕೆ 250-300 ಕಿ.ಮೀ ಮಾತ್ರ ಸಂಚರಿಸಬಲ್ಲವು. ಹಾಗಾಗಿ ಇಂಥ ದೆಹಲಿಗೆ 6000 ಬಸ್ಸುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ 500 ಹೆಚ್ಚುವರಿ ವಿದ್ಯುತ್‌ ಚಾಲಿತ ಬಸ್ಸುಗಳ ಖರೀದಿಗೆ ಚಿಂತಿಸುತ್ತಿದೆ. ದೆಹಲಿ ಸರ್ಕಾರ ಅಲ್ಲಿನ ವಾಹನಗಳಿಗೆ ಎನ್ವಿರಾನ್‌ಮೆಂಟ್‌ ಸೆಸ್‌ ವಿಧಿಸುತ್ತದೆ. ಈ ಹಣ ಬಸ್ಸುಗಳ ಉದ್ದ ಹೆಚ್ಚಿಸುವುದಕ್ಕೆ ಮಾತ್ರ ಇದುವರೆಗೆ ಬಳಕೆಯಾಗುತ್ತಿದೆ. ಈ ತೆರಿಗೆಯಿಂದ ಒಟ್ಟು 787ಕೋಟಿ ಸಂಗ್ರಹವಾಗಿದ್ದು, ಇದುವರೆಗೆ 93 ಲಕ್ಷ ರು.ವನ್ನು ಮಾತ್ರ ಬಳಕೆ ಮಾಡಿಕೊಂಡಿದೆ. ಉಳಿದ ಹಣದಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳನ್ನು ಕೊಂಡುಕೊಳ್ಳಲು ಅಲ್ಲಿನ ಸರ್ಕಾರ ಚಿಂತಿಸುತ್ತಿದೆ.

ರಾಜಧಾನಿ ಮಾಲಿನ್ಯ: ಸರ್ಕಾರದ ವಿರುದ್ಧ ಸುಪ್ರೀಂ

ಬಸ್ಸುಗಳ ಓಡಾಟ ಹೆಚ್ಚಾದರೆ ಬಸ್‌ ದರವೂ ಜಾಸ್ತಿಯಾಗುತ್ತೆ!

ಹೈಕೋರ್ಟ್‌ ಸಲಹೆಯಂತೆ ದೆಹಲಿ ಸರ್ಕಾರ ಹೆಚ್ಚು ಬಸ್ಸುಗಳನ್ನು ಖರೀದಿಸಿ ಓಡಾಟ ಹೆಚ್ಚಿಸಿದಲ್ಲಿ ಪ್ರಯಾಣಿಕರ ಬಸ್‌ ದರ ಕೂಡ ಹೆಚ್ಚು ಮಾಡಬೇಕಾಗುತ್ತದೆ. ಆದರೆ ಸದ್ಯ ದೆಹಲಿಯಲ್ಲಿ ಎಸಿ ರಹಿತ ಬಸ್ಸುಗಳ ದರ 5-15ರು. ಒಳಗಿದೆ. ಎಸಿ ಬಸ್ಸುಗಳ ದರ 10-25 ರು. ಒಳಗಿದೆ.

ಅಧ್ಯಯನಗಳು ಏನು ಹೇಳುತ್ತವೆ?

ದೆಹಲಿಯ ವಾಯುಗುಣಮಟ್ಟಕಳಪೆಯಾಗಲು ಪಂಜಾಬ್‌ ಮತ್ತು ಹರಾರ‍ಯಣ ರೈತರು ಕೃಷಿ ತ್ಯಾಜ್ಯ ಸುಡುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದರೂ ದೆಹಲಿಯ ವಾಹನಗಳೂ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಸಮ-ಬೆಸ ವಾಹನ ಸಂಚಾರ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ದೆಹಲಿ ಗಾಳಿ ಕಲುಷಿತಗೊಳ್ಳಲು ಅಲ್ಲಿನ ವಾಹನಗಳೆಷ್ಟುಕಾರಣ ಎಂದು ಹಲವು ಸಮೀಕ್ಷೆಗಳೂ ದೃಢಪಡಿಸಿವೆ.

ಕೇಂದ್ರ ಸರ್ಕಾರ, 2003

2003ರಲ್ಲಿ ಕೇಂದ್ರ ಪರಿಸರ ಸಚಿವಾಲಯ 1970-2001ರ ವರೆಗಿನ 3 ದಶಕಗಳ ಕಾಲ ದೆಹಲಿ ವಾಹನಗಳು ಹೊರಸೂಸುವ ಹೊಗೆಯಲ್ಲಿ ಪರ್ಟಿಕ್ಯೂಲೇಟ್‌ ಮ್ಯಾಟರ್‌ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಐಐಟಿ ದೆಹಲಿ, 2007

2007ರಲ್ಲಿ ಐಐಟಿ ದೆಹಲಿ ಡೀಸೆಲ್‌ ಟ್ರಕ್‌, ಟೆಂಪೋ, ಮೂರು ಚಕ್ರ ವಾಹನಗಳು ಮತ್ತು ಇತರ ವಾಣಿಜ್ಯ ವಾಹನಗಳಿಂದ ದೆಹಲಿಯಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆ ಅಧ್ಯಯನ ಮಾಡಿತ್ತು. ಅದು ಟೆಂಪೋಗಳು ಅತಿ ಹೆಚ್ಚು ಪರ್ಟಿಕ್ಯುಲೇಟ್‌ ಮ್ಯಾಟರನ್ನು ಬಿಡುಗಡೆ ಮಾಡುತ್ತಿದೆ ಎಂದಿದೆ. ಅಂದರೆ ಟೆಂಪೋಗಳು 58%, ಟ್ರಕ್‌ಗಳು 24%, ಬಸ್‌ಗಳು 12%, ಕಾರು/ಟ್ಯಾಕ್ಸಿ 9.7%, ಸಣ್ಣ ಟ್ರಕ್‌ಗಳು 3.7% ಮತ್ತು ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ 0.18% ಪಿಎಂ ಅನ್ನು ಬಿಡುಗಡೆ ಮಾಡುತ್ತವೆ ಎಂದು ಹೇಳಿತು.

2008 ರಲ್ಲಿ ಎನ್‌ಇಇಆರ್‌ಐ, ನಾಗ್ಪುರ

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನ್ಯಾಷನಲ್‌ ಎನ್ವಿರಾನ್‌ಮೆಂಟ್‌ ಇಂಜಿನಿಯರಿಂಗ್‌ ರೀಸಚ್‌ರ್‍ ಇನ್‌ಸ್ಟಿಟ್ಯೂಟ್‌ (ಎನ್‌ಇಇಆರ್‌ಐ) ಜಂಟಿಯಾಗಿ ದೆಹಲಿ ಮಾಲಿನ್ಯಕ್ಕೆ ವಾಹನಗಳೆಷ್ಟುಕಾರಣ ಎಂಬ ಬಗ್ಗೆ ಸಮೀಕ್ಷೆ ಕೈಗೊಂಡಿದ್ದವು. ಅದರಲ್ಲಿ ದೆಹಲಿ ಗಾಳಿಯಲ್ಲಿ ಕಂಡುಬರುತ್ತಿರುವ ಪರ್ಟಿಕ್ಯೂಲೇಟ್‌ ಮ್ಯಾಟರ್‌ನ ಮೂಲ ಇರುವುದೇ ಅಲ್ಲಿನ ಧೂಳಿನಲ್ಲಿ. ಅಂದರೆ ದೆಹಲಿ ಧೂಳಿನಲ್ಲಿ 52% ಪಿಎಂ ಅಂಶ ಇದೆ ಎಂದು ಹೇಳಿತ್ತು. ಹಾಗೆಯೇ ವಾಹನಗಳಿಂದಾಗಿಯೇ ಕಾರ್ಬನ್‌ ಮೋನಾಕ್ಸೈಡ್‌ ಮತ್ತು ಹೈಡ್ರೋಕಾರ್ಬನ್‌ ಗಾಳಿ ಸೇರುತ್ತಿದೆ ಎಂದು ಹೇಳಿತ್ತು.

2011 ರಲ್ಲಿ ಎಸ್‌ಎಎಫ್‌ಎಆರ್‌

2010ರಲ್ಲಿ ದೆಹಲಿಯಲ್ಲಿ ಕಾಮನ್‌ ವೆಲ್ತ್‌ ಕ್ರೀಡಾಕೂಟ ಆಯೋಜಿಸಿದ್ದಾಗ ದೆಹಲಿ ಗಾಳಿಯಲ್ಲಿ ಪಿಎಂ 2.5 ಮತ್ತು ಪಿಎಂ 10ಅಂಶ ಪತ್ತೆಯಾಗಿತ್ತು. ಎಸ್‌ಎಫ್‌ಎಆರ್‌ ಕೈಗೊಂಡ ಸಮೀಕ್ಷೆಯಲ್ಲಿ ದೆಹಲಿ ವಾಯು ಕಳಪೆಯಾಗುತ್ತಿರಲು ಅವ್ಯವಸ್ಥಿತ ರಸ್ತೆಗಳಿಂದ ಉಂಟಾಗುತ್ತಿರುವ ಧೂಳೇ ಪ್ರಮುಖ ಕಾರಣ ಎಂದಿತ್ತು.

ಐಐಟಿ ಕಾನ್ಪುರ

2016ರಲ್ಲಿ ಐಐಟಿ ಕಾನ್ಪುರ ದೆಹಲಿ ದೆಹಲಿ ಮಾಲಿನ್ಯ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ಸಮಗ್ರ ಅಧ್ಯಯನ ಮಾಡಿ ದೆಹಲಿ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸಿತ್ತು. ಇತ್ತೀಚೆಗೆ ನಡೆಸಿದ ಸಮೀಕ್ಷೆ ಇದಾಗಿದ್ದು, ರಸ್ತೆ ಧೂಳು ಮತ್ತು ವಾಹನಗಳ ಹೊಗೆ ದೆಹಲಿ ಮಾಲಿನ್ಯಕ್ಕೆ ಅರ್ಧಕ್ಕರ್ದ ಕೊಡುಗೆ ನೀಡುತ್ತಿವೆ ಎಂದು ಹೇಳಿದೆ. ದೆಹಲಿ ಗಾಳಿಯಲ್ಲಿರುವ ಪಿಎಂ 2.5ಗೆ ಮೂಲ ಕಾರಣ ರಸ್ತೆ ಧೂಳು (38%), ವಾಹನ ಮಾಲಿನ್ಯ (20%), ಕೈಗಾರಿಕಾ ಮೂಲಗಳು (11%), ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು (3%) ಎಂದು ಹೇಳಿದೆ.