ನವದೆಹಲಿ [ನ.05]:  ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಸರ್ಕಾರಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಸೋಮವಾರ ಕೆಂಡಕಾರಿದೆ. ‘ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ಆದರೆ ಇಲ್ಲಿ ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತಿದೆ’ ಎಂದಿರುವ ನ್ಯಾಯಪೀಠ, ಪರಿಸರ ಮಾಲಿನ್ಯದಿಂದ ಜನರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಜನರನ್ನು ನೀವು (ಸರ್ಕಾರಗಳು) ಸಾಯಲು ಬಿಡುತ್ತಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ. ತಪ್ಪಿನ ಹೊಣೆಯನ್ನು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತಗಳೇ ಹೊರಬೇಕು ಎಂದು ತಾಕೀತು ಮಾಡಿದೆ.

‘ತಕ್ಷಣದಿಂದ ಜಾರಿಯಾಗುವಂತೆ ಒಂದೇ ಒಂದು ಬೆಳೆ ತ್ಯಾಜ್ಯ ಸುಡುವ ಪ್ರಕರಣಗಳೂ ನಡೆಯಕೂಡದು. ತ್ಯಾಜ್ಯ ಸುಡುವವರಿಗೆ/ಈ ಅವಧಿಯಲ್ಲಿ ಕಟ್ಟಡ ನಿರ್ಮಿಸುವವರಿಗೆ ಮತ್ತು ನೆಲಸಮ ಮಾಡುವವರಿಗೆ ತಲಾ 1 ಲಕ್ಷ ರು. ದಂಡ ಹಾಗೂ ಅಕ್ರಮವಾಗಿ ದಿಲ್ಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ ಕಸ ಸುರಿಯುವವರ ಮೇಲೆ 5 ಸಾವಿರ ರು. ದಂಡ ವಿಧಿಸಬೇಕು. ಕೋರ್ಟ್‌ ನಿರ್ದೇಶನಗಳ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸಬೇಕು. ತ್ಯಾಜ್ಯ ಸುಡುವುದನ್ನು ನಿಲ್ಲಿಸದೇ ಹೋದರೆ ಗ್ರಾಮ ಪ್ರಧಾನರನ್ನು ಸರ್ಕಾರ ವಜಾ ಮಾಡಬೇಕು’ ಎಂದು ಸರ್ಕಾರಗಳಿಗೆ ಆದೇಶಿಸಿದೆ.

ಜನರನ್ನು ಸಾಯಲು ಬಿಟ್ಟಿದ್ದೀರಿ:

‘ಸರ್ಕಾರವು ಜನರನ್ನು ಸಾಯಲು ಬಿಟ್ಟಿದೆ. ಈ ವಾತಾವರಣದಲ್ಲಿ ನಾವು ಇರಲು ಸಾಧ್ಯವೇ? ಇದು ಜೀವಿಸುವ ವಿಧಾನವಲ್ಲ’ ಎಂದು ನ್ಯಾ.ಅರುಣ್‌ ಮಿಶ್ರಾ ಹಾಗೂ ನ್ಯಾ.ದೀಪಕ್‌ ಗುಪ್ತಾ ಅವರ ನ್ಯಾಯಪೀಠ ಚಾಟಿ ಬೀಸಿತು.

‘ದಿಲ್ಲಿ ಪ್ರತಿವರ್ಷ ವಾಯುಮಾಲಿನ್ಯದಿಂದ ತತ್ತರಿಸುತ್ತಿದೆ. ಆದರೂ ನಮಗೆ ಏನೂ ಮಾಡಲು ಆಗುತ್ತಿಲ್ಲ. ಪ್ರತಿ ವರ್ಷ ಹೀಗಾಗುತ್ತಿದೆ ಏಕೆ? ನಾಗರಿಕ ದೇಶವೊಂದರಲ್ಲಿ ಈ ರೀತಿ ಆಗುವುದಕ್ಕೆ ಬಿಡಲು ಸಾಧ್ಯವಿಲ್ಲ. ಈಗಿನ ತುರ್ತು ಪರಿಸ್ಥಿತಿಗಿಂತ ಅಂದಿನ ತುರ್ತು ಪರಿಸ್ಥಿತಿಯೇ (1975) ಚೆನ್ನಾಗಿತ್ತು’ ಎಂದು ಪೀಠ ಹೇಳಿತು.

ಪಂಜಾಬ್‌, ಹರ್ಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರತಿ ವರ್ಷ ಕಟಾವು ಮಾಡಿದ ಬಳಿಕ ಒಣಗಿದ ಬೆಳೆ ತ್ಯಾಜ್ಯ ಸುಡಲಾಗುತ್ತದೆ. ಇದನ್ನು ಪ್ರತಿ ವರ್ಷ ಸಹಿಸಿಕೊಂಡು ಕೂಡಲು ಆಗುವುದಿಲ್ಲ. ರಾಜ್ಯಗಳಿಗೆ ಈ ಬಗ್ಗೆ ಗೊತ್ತಿದೆ. ಆದರೆ ಈ ಬಗ್ಗೆ ಅವು ಕ್ರಮ ವಹಿಸದೇ ಸುಮ್ಮನಿವೆ’ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

‘ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಮನೆ ಒಳಗೂ ಕೂಡಲು ಆಗುತ್ತಿಲ್ಲ. ಇದು ಅತಿಯಾಯಿತು. ಮನೆಒಳಗೂ ದಿಲ್ಲಿಯಲ್ಲಿ ಯಾರೂ ಸುರಕ್ಷಿತರಲ್ಲ. ಮನೆಯಿಂದ ಹೊರಬರಬೇಡಿ ಎಂದು ಸರ್ಕಾರವು ಜನರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದೆ. ಈ ತಪ್ಪಿಗೆ ರಾಜ್ಯ ಸರ್ಕಾರಗಳೇ ಹೊಣೆ’ ಎಂದು ಕೋರ್ಟ್‌ ಕಿಡಿಕಾರಿತು.

‘ನೀವು ಜನರನ್ನು ಸಾಯಲು ಬಿಡುತ್ತಿದ್ದೀರಿ. ನಿಮ್ಮ ರಾಜ್ಯಗಳು (ಪಂಜಾಬ್‌ ಮತ್ತು ಹರ್ಯಾಣ) ಅತ್ಯಂತ ಕೆಟ್ಟದಾಗಿ ಬಾಧಿತವಾಗಿವೆ. ಪಂಜಾಬ್‌ ಮತ್ತು ಹರ್ಯಾಣದಲ್ಲಿ ನಡೆಯುತ್ತಿರುವ ಆಡಳಿತ ಇದೇನಾ? ರಾಜ್ಯಗಳು ಹಾಗೂ ಪಂಚಾಯಿತಿಗಳ ಮೇಲೂ ಇದರ ಹೊಣೆ ಹೊರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿತು. ಪಂಜಾಬ್‌, ಹರಾರ‍ಯಣ, ಉತ್ತರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನ.6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತು.

ಇದೇ ವೇಳೆ ದಿಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಸಮ-ಬೆಸ’ ಸಂಚಾರ ವ್ಯವಸ್ಥೆಯನ್ನೂ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ‘ಇದರಿಂದ ಯಾವ ಫಲಿತಾಂಶ ಬಂದಿದೆ ಎಂಬುದನ್ನು ಅಂಕಿ-ಅಂಶ ಸಮೇತ ಸಲ್ಲಿಸಿ’ ಎಂದು ತಾಕೀತು ಮಾಡಿತು.

ಮಾಲಿನ್ಯ ತಡೆಗೆ ಕೋರ್ಟ್‌ ಸೂಚನೆಗಳು

ಬೆಳೆ ತ್ಯಾಜ್ಯ ಸುಡುವ ಒಂದೂ ಪ್ರಕರಣ ನಡೆಯಬಾರದು

ಸುಡುವವರಿಗೆ, ಕಟ್ಟಡ ನಿರ್ಮಿಸುವವರಿಗೆ 1 ಲಕ್ಷ ದಂಡ ಹಾಕಿ

ತ್ಯಾಜ್ಯ ದಹನ ನಿಲ್ಲದಿದ್ದರೆ ಗ್ರಾಮ ಪ್ರಧಾನರನ್ನು ವಜಾ ಮಾಡಿ

ಕಸ ಸುರಿಯುವವರಿಗೆ 5000 ರು. ದಂಡ ವಿಧಿಸಿ

ದಿಲ್ಲಿಯಲ್ಲಿ ಸಮ-ಬೆಸ ಜಾರಿ

ನವದೆಹಲಿ: ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ‘ಸಮ-ಬೆಸ ಸಂಚಾರ ವ್ಯವಸ್ಥೆ’ಯನ್ನು ಸೋಮವಾರ ಮರುಜಾರಿ ಮಾಡಲಾಗಿದೆ. ನವೆಂಬರ್‌ 15ರವರೆಗೆ ಇದು ಜಾರಿಯಲ್ಲಿರಲಿದೆ. ಮೊದಲ ದಿನ ಸಿಎಂ ಕೇಜ್ರಿವಾಲ್‌ ತಮ್ಮ ಕಾರ್‌ ಬಿಟ್ಟು ಸಚಿವರ ಜತೆ ಅವರ ಕಾರಿನಲ್ಲಿ ಕಚೇರಿಗೆ ಬಂದರು. ಡಿಸಿಎಂ ಸಿಸೋಡಿಯಾ ಸೈಕಲ್‌ನಲ್ಲಿ ಆಗಮಿಸಿದರು.