ನಮ್ಮ ರಾಜ್ಯಪಾಲ ಬಿಹಾರಿಗಳ ರೀತಿ ಪಾನಿಪೂರಿ ಮಾರೋಕ್ಕೆ ಲಾಯಕ್ಕು ಎಂದ ಡಿಎಂಕೆ ನಾಯಕ!
ತಮಿಳಗಂ ಗದ್ದಲದ ನಡುವೆ, ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಅವರು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿಯನ್ನು ಬಿಹಾರದ ವಲಸೆ ಕಾರ್ಮಿಕರಿಗೆ ಹೋಲಿಸಿದ್ದಾರೆ ಮತ್ತು ಜಯಲಲಿತಾ ಬದುಕಿದ್ದರೆ ಅವರನ್ನು ಹೊಡೆಯದೆ ಬಿಡುತ್ತಿರಲಿಲ್ಲ ಟೀಕೆ ಮಾಡಿದ್ದಾರೆ.
ಚೆನ್ನೈ (ಜ.14): ಉತ್ತರ ಭಾರತೀಯರು ತಮಿಳುನಾಡಿನಲ್ಲಿ ಪಾನಿಪುರಿ ಮಾರುತ್ತಾರೆ ಮತ್ತು ರಾಜ್ಯಪಾಲರು ಕೂಡ ಅವರಂತೆಯೇ ಇದ್ದಾರೆ ಎಂದು ಹೇಳುವ ಮೂಲಕ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ರಾಜ್ಯಪಾಲರನ್ನು ಬಿಹಾರದ ವಲಸೆ ಕಾರ್ಮಿಕರಿಗೆ ಹೋಲಿಸಿದ ಅವರು, ಜಯಲಲಿತಾ ಬದುಕಿದ್ದರೆ ಅವರನ್ನು ಹೊಡೆಯದೆ ಬಿಡುತ್ತಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ. ಸೋನ್ ಪಾಪ್ಡಿ ಮತ್ತು ಪಾನಿಪುರಿ ಮಾರುವವರಿಗೆ ತಮಿಳುನಾಡಿನ ಹೆಮ್ಮೆ ಏನೆಂದು ಗೊತ್ತಿಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ, ನಾನು ಇದನ್ನು ಸಭೆಯಲ್ಲಿ ಹೇಳಿದ್ದೇನೆ. ಬಿಹಾರದಿಂದ ಅನೇಕರು ನಮ್ಮ ರಾಜ್ಯಕ್ಕೆ ಪಾನಿಪೂರಿ ಮಾರಲು ಬರುತ್ತಾರೆ ಎನ್ನುವುದು ನಮಗೆ ಗೊತ್ತಿರುವ ವಿಚಾರ. ರಾಜ್ಯಪಾಲರು (ಆರ್‌ಎನ್ ರವಿ) ಕೂಡ ಅದೇ ರೀತಿ ರೈಲಿನಲ್ಲಿ ಬಂದಿದ್ದಾರೆ' ಎಂದು ಡಿಎಂಕೆ ನಾಯಕ ಭಾರತಿ ಸೋಮವಾರ ಸಂಜೆ ಸಾರ್ವಜನಿಕ ಸಭೆಯಲ್ಲಿ ಇದನ್ನು ಹೇಳಿದ್ದಾರೆ.
ರಾಜ್ಯಪಾಲರು "ಅನುಮೋದಿತ ಪಠ್ಯದಿಂದ ಹೊರಗುಳಿದ ಭಾಷಣ ಮಾಡಿದ್ದಾರೆ" ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದ ನಂತರ ಏಕಾಏಕಿ ಅವರ ಮೇಲೆ ಆಕ್ರೋಶ ಹೆಚ್ಚಾಗಿದೆ. "ರಾಜ್ಯಪಾಲರು ಅನುಮೋದಿತ ಭಾಷಣದಿಂದ ಹೊರತಾದ ಮಾತನಾಡಲು ಕಾರಣವೇನು ಎಂದು ಭಾರತಿ ಪ್ರಶ್ನಿಸಿದರು. ಹಳ್ಳಿಗಳಲ್ಲಿ ಒಂದು ಗಾದೆ ಮಾತಿದೆ, ತಿಂದ ಬಾಳೆ ಎಲೆಯನ್ನು (ಊಟಕ್ಕೆ ಬಳಸುವ ಬಾಳೆ ಎಲೆ) ಆಯಲು ಹೇಳಿದರೆ, ಎಲೆ ಎಷ್ಟಿದೆ ಎಂದು ಎಣಿಸಬಾರದು ಅಂತಾ. ರಾಜ್ಯಪಾಲರ ಕೆಲಸ ಕೂಡ ಬಾಳೆ ಎಲೆಗಳನ್ನು ಆಯುವ ರೀತಿಗೆ ಹೋಲುತ್ತದೆ' ಎಂದು ಡಿಎಂಕೆ ನಾಯಕ ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಝಡ್ ಪ್ಲಸ್ ಭದ್ರತೆ
ರಾಜ್ಯಪಾಲರ ಭಾಷಣ ಎಂದರೆ, ಬಾಳೆ ಎಲೆಯ ಮೇಲಿರುವ ಆಹಾರಗಳಂತೆ, ನೀವು (ರಾಜ್ಯಪಾಲುರು) ಅಡುಗೆ ಮಾಡುವವರು ಮಾತ್ರ. ನೀವು ಇದನ್ನು ಬೇಯಿಸಿರಬಹುದು. ಆದರೆ, ಅದೀಗ ಬಾಳೆ ಎಲೆಯ ಮೇಲಿದೆ. ಈಗೇನಾದರೂ ನಿಮಗೆ ಬೇರೆ ಯೋಚನೆ ಬಂದರೆ, ಬಾಳೆ ಎಲೆಯ ಮುಂದೆ ಕುಳಿತು ಊಟ ಮಾಡುತ್ತಿರುವವರು ಎದ್ದು ಸುಮ್ಮನೆ ಎದ್ದು ಹೋಗಬೇಕೇ? ನಾನು ಹೆಮ್ಮೆಪಡುತ್ತಿಲ್ಲ. ಹಾಗೇನಾದರೂ ಇಂದು ಜಯಲಲಿತಾ ಅವರು ಆಡಳಿತ ಮಾಡುತ್ತಿದ್ದರೆ, ಅವರನ್ನು (ರಾಜ್ಯಪಾಲರು) ಖಂಡಿತಾ ಹೊಡೆಯುತ್ತಿದ್ದರು. ಆ ಪಕ್ಷದ ಯಾರೊಬ್ಬರೂ ಕೂಡ ಸುಮ್ಮನಿರುತ್ತಿರಲಿಲ್ಲ ಎಂದಿದ್ದಾರೆ.
ತಮಿಳುನಾಡು ರಾಜ್ಯಪಾಲ ರವಿ ಮತ್ತೊಂದು ವಿವಾದ: ಗೆಟ್ ಔಟ್ ರವಿ ಬ್ಯಾನರ್ ಹಿಡಿದು ಡಿಎಂಕೆ ಪ್ರೊಟೆಸ್ಟ್..!
ಸೋಮವಾರ, ತಮಿಳುನಾಡು ವಿಧಾನಸಭೆಯು ಕೆಟ್ಟ ಸಂಗತಿಗಳಿಂದ ಸುದ್ದಿ ಮಾಡಿತ್ತು. ಮುಖ್ಯಮಂತ್ರಿ ಸ್ಟಾಲಿನ್ ಅವರು ಮಂಡಿಸಿದ ನಿರ್ಣಯವನ್ನು ಅಂಗೀಕರಿಸಿದ ನಂತರ ಗವರ್ನರ್ ರವಿ ಅವರು ಸಿಟ್ಟಿನಿಂದ ಹೊರನಡೆದಿದ್ದರು. ಮತ್ತು ಅದನ್ನು ಸದನದ ದಾಖಲೆಗಳಿಂದ ಹೊರಹಾಕಲು ಪ್ರಯತ್ನಿಸಿದರು. ಇನ್ನೊಂದೆಡೆ ಆಡಳಿತಾರೂಢ ಸರ್ಕಾರ, ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ಭಾಷಣದ ಹೊರತಾದ ಮಾತುಗಳನ್ನು ರಾಜ್ಯಪಾಲರು ಆಡಲು ಬಯಸಿದ್ದರು ಎಂದು ದೂರಿದೆ.