Viral 20 Rupee Note: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ 20 ರೂಪಾಯಿ ನೋಟಿನ ಮೇಲಿನ ವಿಚಿತ್ರ ಬರಹ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಅನಂತಪುರದ ದೇವಸ್ಥಾನವೊಂದರ ಹುಂಡಿಯಲ್ಲಿ 20 ರೂಪಾಯಿ ನೋಟೊಂದು ಸಿಕ್ಕಿದೆ. ಅದರ ಮೇಲಿದ್ದ ಬರಹ ಓದಿ ಎಲ್ಲರೂ ಶಾಕ್ ಆಗಿದ್ದಾರೆ. ತನ್ನ ಚಿಕ್ಕಮ್ಮನಿಗೆ ಬೇಗ ಸಾವು ಕೊಡು ಅಂತಾ ಭಕ್ತನೊಬ್ಬ ದೇವರಲ್ಲಿ ವಿಚಿತ್ರವಾಗಿ ಬೇಡಿಕೊಂಡಿದ್ದಾನೆ. ಈ ನೋಟು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾನ್ಯವಾಗಿ ದೇವಸ್ಥಾನದ ಹುಂಡಿಗಳಲ್ಲಿ ಭಕ್ತರು ದುಡ್ಡು ಹಾಕೋದರ ಜೊತೆಗೆ, ತಮ್ಮ ಕೋರಿಕೆಗಳನ್ನ ಚೀಟಿಯಲ್ಲಿ ಬರೆದು ಹಾಕೋದು ಕಾಮನ್. ಕೆಲವರು ಒಳ್ಳೆ ಕೆಲ್ಸ ಕೊಡು, ಮದುವೆ ಮಾಡು, ಆರೋಗ್ಯ ಕೊಡು ಅಂತಾ ಬೇಡ್ಕೋತಾರೆ. ಆದ್ರೆ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸಿಕ್ಕ ಒಂದು ಕೋರಿಕೆ ಪತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪಂಪನೂರಿನ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡುವಾಗ ಸಿಬ್ಬಂದಿಗೆ 20 ರೂಪಾಯಿ ನೋಟೊಂದು ಸಿಕ್ಕಿದೆ. ಅದರ ಮೇಲಿದ್ದ ಬರಹ ಓದಿ ಎಲ್ಲರೂ ದಂಗಾಗಿದ್ದಾರೆ. ಈ ನೋಟು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
20 ರೂಪಾಯಿ ನೋಟಿನ ಮೇಲೆ ವಿಚಿತ್ರ ಪ್ರಾರ್ಥನೆ
ದೇವಸ್ಥಾನದ ಆಡಳಿತ ಮಂಡಳಿ ಪ್ರಕಾರ, ಹುಂಡಿ ಎಣಿಕೆ ಮಾಡುವಾಗ ಈ 20 ರೂಪಾಯಿ ನೋಟು ಸಿಕ್ಕಿದೆ. ಈ ನೋಟಿನ ಮೇಲೆ ಭಕ್ತರೊಬ್ಬರು ತಮ್ಮ ಕುಟುಂಬದ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ. 'ನನ್ನ ಚಿಕ್ಕಮ್ಮನಿಂದ ತುಂಬಾ ಕಿರಿಕಿರಿ ಆಗ್ತಿದೆ, ಅವಳಿಗೆ ಬೇಗ ಸಾವು ಕೊಡು ದೇವ್ರೇ' ಅಂತಾ ಬರೆದು ಹುಂಡಿಗೆ ಹಾಕಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಸಾಮಾನ್ಯವಾಗಿ ಪಾಸಿಟಿವ್ ಆಗಿ ಬೇಡಿಕೊಳ್ಳುತ್ತಾರೆ. ಆದ್ರೆ, ಹೀಗೆ ಒಬ್ಬರ ಸಾವಿಗೆ ಪ್ರಾರ್ಥನೆ ಮಾಡಿರೋದು ನೋಡಿ ಸಿಬ್ಬಂದಿ ಹಾಗೂ ಸ್ಥಳೀಯರು ಶಾಕ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಈ ನೋಟಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗ್ತಿದ್ದಂತೆ, ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು, 'ಇದು ಕೌಟುಂಬಿಕ ಒತ್ತಡ ಮತ್ತು ಮಾನಸಿಕ ಸಂಕಟದ ಪರಿಣಾಮ' ಅಂತಾ ಹೇಳಿದ್ರೆ, ಇನ್ನು ಕೆಲವರು 'ಯಾರ ಸಾವನ್ನೂ ಬಯಸೋದು ಯಾವತ್ತೂ ಸರಿ ಅಲ್ಲ' ಅಂತಾ ಅಭಿಪ್ರಾಯಪಟ್ಟಿದ್ದಾರೆ. 'ಪೂರ್ತಿ ವಿಷಯ ತಿಳಿಯದೆ ಒಬ್ಬರ ಬಗ್ಗೆ ತೀರ್ಮಾನ ಮಾಡೋದು ತಪ್ಪು' ಅಂತಾ ಹಲವರು ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರಿಂದ ತಮಾಷೆಯ ಕಾಮೆಂಟ್‌ಗಳು
ಇನ್ನು ಕೆಲವರು ಈ ಘಟನೆಯನ್ನು ತಮಾಷೆಯಾಗಿಯೂ ತೆಗೆದುಕೊಂಡಿದ್ದಾರೆ. 'ದೇವರಿಗೆ ಬಹುಶಃ ಇದೇ ಮೊದಲ ಬಾರಿಗೆ ಇಂಥದ್ದೊಂದು ಅರ್ಜಿ ಬಂದಿರಬೇಕು' ಅಂತಾ ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, 'ಇದು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಕಲಹ ಮತ್ತು ಸಂಬಂಧಗಳಲ್ಲಿ ಉಂಟಾಗುತ್ತಿರುವ ಬಿರುಕಿಗೆ ಹಿಡಿದ ಕನ್ನಡಿ' ಎಂದು ಹೇಳಿದ್ದಾರೆ.


