ಮೂರು ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಶೌಚಾಲಯ ಬಳಸಲು ಕೇಳಿದ ಗಿಗ್ ವರ್ಕರ್‌ಗೆ ಗ್ರಾಹಕರೊಬ್ಬರು ಅನುಮತಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಕಳಪೆ ರೇಟಿಂಗ್ ನೀಡಿ, ಆಕೆಗೆ ಐದು ದಿನಗಳ ಕಾಲ ಕೆಲಸ ಸಿಗದಂತೆ ಮಾಡಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಗಿಗ್ ವರ್ಕರ್‌ಗಳ ಸ್ಥಿತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಮನೆ, ಕಚೇರಿಗಳನ್ನು ಶುಚಿಯಾಗಿಟ್ಟುಕೊಳ್ಳಲು, ತಮ್ಮಿಂದ ಸಾಧ್ಯವಾಗದ ಕೆಲಸ ಮಾಡಲು ಕೆಲವು ಮಧ್ಯಮ ವರ್ಗದವರು, ಶ್ರೀಮಂತರು ಎನ್ನಿಸಿಕೊಂಡವರಿಗೆ ಕೆಲಸದವರು ಬೇಕು. ಆಗ ಜಾತಿ, ಪಾತಿ, ಧರ್ಮ-ಗಿರ್ಮ ಯಾವುದೂ ಬರುವುದಿಲ್ಲ. ಏಕೆಂದರೆ, ಆ ಕೆಲಸ ಅವರಿಗೆ ಮಾಡಲು ಬಂದಿರುವುದಿಲ್ಲ, ಬಂದರೂ ಅದು ಅತ್ಯಂತ ಕನಿಷ್ಠ ಕೆಲಸ ಎನ್ನುವ ಭ್ರಮೆಯಲ್ಲಿ ತೇಲಾಡುವ ಮಂದಿ ಇವರು. ಇಂಥದ್ದೇ ಒಂದು ಪ್ರಕರಣದಲ್ಲಿ ಹೇಗೆ, ಅಧಿಕಾರದ ಮದದಲ್ಲಿ, ಗಿಗ್ ವರ್ಕರ್ ಒಬ್ಬರ ಕೆಲಸವನ್ನು ಒಬ್ಬ ವ್ಯಕ್ತಿ ಕಸಿದುಕೊಂಡರು ಎನ್ನುವಂಥ ಶಾಕಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ಒಬ್ಬರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಅಲ್ಲಿಯ ಶೌಚಾಲಯ ಬಳಸಲು ಅನುಮತಿ ಕೇಳಿದ ಒಂದೇ ಕಾರಣಕ್ಕೆ, ಆ ಪುಣ್ಯಾತ್ಮ ವಾಷ್ರೂಮ್ ಬಳಸಲು ಅನುಮತಿ ನಿರಾಕರಿಸಿದ್ದೂ ಅಲ್ಲದೇ, ತಮ್ಮ ಮನೆಯ ವಾಷ್ರೂಮ್ ಕೇಳಿದ್ದಾರೆ ಎನ್ನುವ ಸೊಕ್ಕಿನಿಂದ ಆ ಮಹಿಳಾ ಗಿಗ್ ವರ್ಕರ್‌ಗೆ ಕಳಪೆ ರೇಟಿಂಗ್ ನೀಡಿ ಐದು ದಿನಗಳ ಕಾಲ ಕೆಲಸವೇ ಸಿಗದಂತೆ ಮಾಡಲಾಗಿದೆ! ಇದರ ವಿಡಿಯೋ ಒಂದನ್ನು ಅರ್ಬನ್ ಕಂಪೆನಿಯ ಸೇವಾ ವೃತ್ತಿಪರರೊಬ್ಬರು ಶೇರ್ ಮಾಡಿಕೊಂಡಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಶ್ರೀಮಂತಿಕೆಗೆ ಅಹಂಕಾರ
ತಮ್ಮ ಮಹಿಳಾ ಸಹೋದ್ಯೋಗಿಯೊಬ್ಬರನ್ನು ಗ್ರಾಹಕರೊಬ್ಬರು ಹೇಗೆ ನಡೆಸಿಕೊಂಡರು ಎನ್ನುವ ಬಗ್ಗೆ ವಿಡಿಯೋದಲ್ಲಿ ತಿಳಿಸಲಾಗಿದೆ. ಗ್ರಾಹಕರ ಮನೆಯಲ್ಲಿ ಮಹಿಳೆ ಮೂರು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ, ಶೌಚಾಲಯಕ್ಕೆ ಅನುಮತಿ ಕೇಳಿದಾಗ ಅದನ್ನು ನಿರಾಕರಿಸಲಾಗಿದೆ. ಅಷ್ಟಕ್ಕೂ ಆ ಗ್ರಾಹಕನ ಐಷಾರಾಮಿ ಶೌಚಾಲಯವನ್ನೇನೂ ಈ ಮಹಿಳೆ ಕೇಳಿರಲಿಲ್ಲ. ಬದಲಿಗೆ ಅವರ ಮನೆಯ ಭದ್ರತಾ ಸಿಬ್ಬಂದಿಯ ಶೌಚಾಲಯವನ್ನು ಬಳಸಲು ಕೇಳಿಕೊಂಡಿದ್ದರು ಅಷ್ಟೇ. ಆದರೆ ಶ್ರೀಮಂತಿಕೆಯ ಮದದಿಂದ ನಿರಾಕರಿಸಿದ್ದೂ ಅಲ್ಲದೇ, ಇದೇ ಕಾರಣಕ್ಕೆ ಆಕೆಗೆ ಕಳಪೆ ರೇಟಿಂಗ್ ನೀಡುವಂಥ ಅಹಂಕಾರ ಮೆರೆದಿದ್ದಾರೆ ಆ ಗ್ರಾಹಕ.
ಪ್ಲೀಸ್ ಹಾಗೆ ಮಾಡಬೇಡಿ-ಮನವಿ
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ದೆಹಲಿಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳುತ್ತದೆ. X ನಲ್ಲಿ ಹಂಚಿಕೊಂಡಿರುವ ವೀಡಿಯೊದ ಶೀರ್ಷಿಕೆಯ ಪ್ರಕಾರ, ಅರ್ಬನ್ ಕಂಪೆನಿಯ ಉದ್ಯೋಗಿ ಮೂರು ಗಂಟೆಗಳ ಕೆಲಸ ಮುಗಿದ ನಂತರ ಗ್ರಾಹಕರ ಶೌಚಾಲಯವನ್ನು ಬಳಸಲು ಅನುಮತಿ ಕೇಳಿದರು. ಗ್ರಾಹಕರು ನಿರಾಕರಿಸಿದರು, ಭದ್ರತಾ ಸಿಬ್ಬಂದಿಯ ಶೌಚಾಲಯವನ್ನು ಬಳಸಲು ಕೇಳಿದರು. ಇದೇ ಕಾರಣಕ್ಕೆ ಒನ್ ಸ್ಟಾರ್ ರೇಟಿಂಗ್ ನೀಡಲಾಗಿದೆ.
ಕಳಪೆ ರೇಟಿಂಗ್ ಕಾರಣ, ಉದ್ಯೋಗಿಗೆ ಐದು ದಿನಗಳವರೆಗೆ ಕೆಲಸ ಸಿಗಲಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಅರ್ಬನ್ ಕಂಪೆನಿಯ ಮತ್ತೊಬ್ಬ ಉದ್ಯೋಗಿ ಘಟನೆಯ ಬಗ್ಗೆ ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ, ಕಳೆದ ಆರು ವರ್ಷಗಳಿಂದ ನೂರಾರು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅಂತಹ ನಡವಳಿಕೆಯನ್ನು ತಾನು ಎಂದಿಗೂ ಎದುರಿಸಿಲ್ಲ ಎಂದು ಹೇಳಿದ್ದಾರೆ. "ಯಾರಾದರೂ ನಿಮ್ಮ ಮನೆಗೆ ಕೆಲಸ ಮಾಡಲು ಬಂದರೆ, ಕನಿಷ್ಠ ಅವರಿಗೆ ನಿಮ್ಮ ಶೌಚಾಲಯವನ್ನು ಬಳಸಲು ಬಿಡಿ" ಎಂದು ಅವರು ಕೇಳಿಕೊಂಡಿದ್ದಾರೆ.
ತಮ್ಮ ಸಹೋದ್ಯೋಗಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, "ಆ ಹುಡುಗಿಗೆ ಆ ಐದು ದಿನಗಳವರೆಗೆ ಯಾವುದೇ ಆದಾಯವಿಲ್ಲದ ಕಾರಣ ನನಗೆ ತುಂಬಾ ಕೆಟ್ಟದಾಗಿದೆ. ಆಕೆಗೆ ಎಷ್ಟು ಒತ್ತಡವಿರಬೇಕು ಎಂದು ಊಹಿಸಿ" ಎಂದು ಪ್ರಶ್ನಿಸಿದ್ದಾರೆ. ಗಿಗ್ ಕೆಲಸಗಾರರ ಬಗ್ಗೆ ಹೆಚ್ಚು ಸಹಾನುಭೂತಿ ಹೊಂದಲು ಉದ್ಯೋಗಿ ಗ್ರಾಹಕರನ್ನು ಒತ್ತಾಯಿಸಿದರು, ಪ್ರತಿ ಬುಕಿಂಗ್ ಮತ್ತು ರೇಟಿಂಗ್‌ನ ಮೇಲೆ ಸೇವಾ ವೃತ್ತಿಪರರು ಎಷ್ಟು ಅವಲಂಬಿತರಾಗಿದ್ದಾರೆಂದು ಅನೇಕ ಜನರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡರು.


