ಡೆಲ್ಲಿ ಮಂಜು

ನವದೆಹಲಿ(ಮಾ.29) : `ಎಡ'ದಿಂದ `ಬಲ'ಕ್ಕೆ ಪೂರ್ತಿ ಶಿಫ್ಟ್ ಆಗ್ತಾರಾ ಬಂಗಾಳಿಗರು ? ಅಥವಾ ಜಾತ್ಯಾತೀತ ಅಸ್ತ್ರದ ಕಂಕಣ ತೊಟ್ಟಿರುವ ದೀದಿಯನ್ನು ಮತ್ತೆ ಕೈ ಹಿಡೀತಾರಾ ? ಈ ಪ್ರಶ್ನೆಗೆ ಮೊದಲ ಹಂತದ ಮತದಾನ ಅಡಿಪಾಯ ಹಾಕಿದೆ. 1ನೇ ಹಂತ ಮುಗಿದಿದ್ದರೂ ಇಡೀ ಪಶ್ಚಿಮ ಬಂಗಾಳದ ಚುನಾವಣೆ ರಂಗೇರುವುದು 2ನೇ ಹಂತದಲ್ಲಿ. ಎಂಟು ಹಂತಗಳಲ್ಲಿ ಎಲೆಕ್ಷನ್ ನಡೆದರೂ 2ನೇ ಹಂತ ಮಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಕಾರಣ- ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಮತ್ತು `ಬಂಗಾಳದ ಬೇಟಿ' ದೀದಿ.

ಹೆಚ್ಚು ಕಮ್ಮಿ ಒಂದೂವರೆ ದಶಕದ ಹಿಂದೆ ದೀದಿ ಮಮತಾ ಬ್ಯಾನರ್ಜಿ `ಬಂಗಾಳದ ಬೇಟಿ'ಯಾಗಿ ಮಾರ್ಪಟ್ಟಿದ್ದು ಇದೇ ನಂದಿಗ್ರಾಮದಲ್ಲಿ ಅನ್ನೋದು ಹಿಸ್ಟರಿ ಹೇಳುತ್ತೆ. ಹಿಸ್ಟರಿ ಆ ಪುಟಗಳಲ್ಲಿ ದಾಖಲಾಗಿರುವ ಆ ಹೋರಾಟವನ್ನು ನೆನಪು ಮಾಡಿಕೊಳ್ಳತ್ತಾ ಇದೀಗ ಮೊದಲ ಬಾರಿಗೆ ದೀದಿ ಅದೇ ಕ್ಷೇತ್ರವನ್ನು ತಮ್ಮ ರಾಜಕೀಯದ ಅಖಾಡವನ್ನು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹಾಗಾಗಿ ಇಡೀ ಪಶ್ಚಿಮ ಬಂಗಾಳದ ರಾಜ್ಯ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಾಶಸ್ಯ ಪಡೆದಿರುವುದು ನಂದಿಗ್ರಾಮ ವಿಧಾನಸಭಾ ಕ್ಷೇತ್ರ.

ತಮ್ಮ ಗೆಲುವಿಗಾಗಿ ಬಿಜೆಪಿ ನಾಯಕನ ಮೊರೆ ಹೋದ ಮಮತಾ

ನಂದಿಗ್ರಾಮ : 1951 ಅಂದರೆ ದೇಶದ ಮೊದಲ ಚುನಾವಣೆಯಿಂದಲೂ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಇದ್ದೇ ಇದೆ. 1962ರ ಚುನಾವಣೆಯ ತನಕ ನಂದಿಗ್ರಾಮ ನಾರ್ತ್ ಮತ್ತು ನಂದಿಗ್ರಾಮ ಸೌತ್ ಕ್ಷೇತ್ರಗಳಾಗಿ ವಿಂಗಡಣೆಯಾಗಿತ್ತು. ಬಳಿಕ 1967ರಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಅಗಿ ಜನ್ಮತಾಳಿತು. ಅಂದಿನಿಂದ ಇಂದಿನ ತನಕ ಅಂದರೆ 2021ರ ತನಕ  ಒಂದು ಬೈ ಎಲೆಕ್ಷನ್ ಸೇರಿ 15 ಚುನಾವಣೆಗಳನ್ನು ಈ ಕ್ಷೇತ್ರ ಕಂಡಿದೆ.  1967 ರಿಂದ ಈತನಕ ಸಿಪಿಐ ಪಕ್ಷ 8 ಬಾರಿ, ಕಾಂಗ್ರೆಸ್ 2 ಬಾರಿ ಹಾಗು 2009ರಲ್ಲಿ ನಡೆದ ಬೈ ಎಲೆಕ್ಷನ್‍ನಿಂದ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಂಡ ತೃಣಮೂಲ ಕಾಂಗ್ರೆಸ್ ತನ್ನ ತಕ್ಕೆಯಲ್ಲಿ ಇಟ್ಟುಕೊಂಡಿದೆ. ತೃಣಮೂಲ ಕಾಂಗ್ರೆಸ್‍ನಿಂದ ಫೈರೋಜ್ ಬಿಬಿ ಮತ್ತು ಹಾಲಿ ಶಾಸಕ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ.

ಅಭ್ಯರ್ಥಿಗಳು ಪಕ್ಷ ಬದಲಾಯಿಸಿ ಚುನಾವಣಾ ಅಖಾಡಕ್ಕೆ ಇಳಿಯುವುದು ನಂದಿಗ್ರಾಮ ಕ್ಷೇತ್ರಕ್ಕೇನು ಹೊಸದಲ್ಲ. ಈ ಹಿಂದೆ 60ರ ದಶಕದಲ್ಲಿ ಕೂಡ ಇದೇ ರೀತಿ ನಡೆದಿದೆ. ಕಮ್ಯೂನಿಸ್ಟ್ ಪಕ್ಷದ ಕಟ್ಟಾಳು ಕಂ ಅಭ್ಯರ್ಥಿಯಾಗಿದ್ದ ಭೂಪಾಲ್ ಚಂದ್ರ ಪಂಡಾ ಅವರು ಒಮ್ಮೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ 1971ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದೇ ರೀತಿಯ ಸನ್ನಿವೇಶಕ್ಕೆ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿಯೂ ಕೂಡ ಬಂದಿದೆ. ಈ ಹಿಂದೆ ತೃಣಮೂಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿದ್ದ ಸುವೇಂದು ಅಧಿಕಾರಿ ಇದೀಗ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅದು ಕೂಡ ಒಂದು ರೀತಿಯಲ್ಲಿ ತಮ್ಮ ರಾಜಕೀಯ ಗುರು ಅನ್ನಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೇ ಸ್ಪರ್ಧಿಸಿದ್ದಾರೆ.

'ದೇಶದ ಕೈಗಾರಿಕೆಗಳು ನಿಷ್ಕ್ರಿಯ, ಮೋದಿ ಗಡ್ಡ ಮಾತ್ರ ಅಭಿವೃದ್ಧಿ'

ಪೂರ್ವ ಮಿಡ್ನಾಪುರ್ ಜಿಲ್ಲೆಯಲ್ಲಿ ಬರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಹೆಚ್ಚು ಪ್ರಮಾಣದಲ್ಲಿ ಆಗುತ್ತೆ. 2016ರಲ್ಲಿ ನಡೆದ ಚುನಾವಣೆಯಲ್ಲಿ 2 ಲಕ್ಷಕ್ಕೂ ಹೆಚ್ಚು  ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಅಂದರೆ ಶೇ.86.97 ಪ್ರಮಾಣ ಮತದಾನ ಆಗಿತ್ತು. ಇದರಲ್ಲಿ 1,34 ಲಕ್ಷ ಮತಗಳು ಅಂದರೆ ಶೇ.67 ರಷ್ಟು ಮತಗಳನ್ನು ಸುವೇಂದು ಅಧಿಕಾರಿ ಪಡೆದು ತೃಣಮೂಲ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. ಆಗ ಬಿಜೆಪಿ ಪಕ್ಷ ಕೇವಲ 10 ಸಾವಿರ ಮತಗಳನ್ನು ಮಾತ್ರ ಪಡೆದಿತ್ತು. ವಿಚಿತ್ರವೆಂದರೆ ಈ ಬಾರಿ ಅದೇ ಪಕ್ಷ ಅಂದರೆ ಬಿಜೆಪಿಯಿಂದ ಸುವೇಂದು ಕಣಕ್ಕೆ ಇಳಿದಿದ್ದಾರೆ.

ನಂದಿಗ್ರಾಮ ಮತ್ತು ದೀದಿ :

ಅತ್ಯಾಪ್ತ ಅನ್ನಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಿಜೆಪಿ ಕಡೆ ವಾಲಿದ್ದಾರೆ ಅನ್ನೋ ಮಾಹಿತಿ ತಿಳಿದ ಕೂಡಲೇ `ನನ್ನ ಸ್ಪರ್ಧೆ ಆತನ ವಿರುದ್ಧವೇ. ಅದು ಕೂಡ ಆತನ ವಿಧಾನಸಭಾ ಕ್ಷೇತ್ರ (ನಂದಿಗ್ರಾಮ)ದಿಂದಲೇ' ಅಂಥ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದಾಗ ಎಲ್ಲರಲ್ಲೂ ಆಶ್ಚರ್ಯ. ಯಾವಾಗಲೂ ಭವಾನಿಪುರದಿಂದ ಗೆದ್ದು ಬರುತ್ತಿದ್ದ ದೀದಿ, ಈ ಬಾರಿ ನಂದಿಗ್ರಾಮ ಆಯ್ಕೆ ಮಾಡಿಕೊಂಡಿರೋ ಹಿಂದಿರೋ ತಂತ್ರವೇನು ಅನ್ನೋದೆ ಬಹುಚರ್ಚಿತ ವಿಷಯವಾಯ್ತು.

ಮೋದಿ ಬಾಂಗ್ಲಾ ಭೇಟಿ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ!

ನಂದಿಗ್ರಾಮಕ್ಕೂ ಮತ್ತು ಮಮತಾ ಬ್ಯಾನರ್ಜಿ ಅವಿನಾಭಾವ ಸಂಬಂಧ ಇದೆ. ಒಂದು ರೀತಿಯಲ್ಲಿ ದೀದಿಯ ರಾಜಕೀಯ ರಹದಾರಿ ಅಂದರೆ ಪಶ್ಚಿಮ ಬಂಗಾಳದ ಶಕ್ತಿಸೌಧ `ರೈಟರ್ಸ್ ಬಿಲ್ಡಿಂಗ್'ನಲ್ಲಿ ಅಧಿಕಾರದ ಸೀಟ್‍ನಲ್ಲಿ ಕೂರಲು ಮೊದಲು ಮೆಟ್ಟಿಲು ಇದೇ ನಂದಿಗ್ರಾಮ ಆಯ್ತು. ಸಿಂಗೂರ್ ಬಳಿ ಉಳುವ ಭೂಮಿಯನ್ನು ಕೈಗಾರಿಕಾ ಭೂಮಿಯಾಗಿ ಪರಿವರ್ತಿಸಿ ಉದ್ದಿಮೆದಾರರಿಗೆ ನೀಡಲು ಮುಂದಾದ ಅಂದಿನ ಎಡರಂಗದ ಬುದ್ದದೇವ ಭಟ್ಟಾಚಾರ್ಯ ಅವರ ಸರ್ಕಾರದ ಕ್ರಮವನ್ನು ಖಂಡಿಸಿ ಹೋರಾಟಕ್ಕೆ ಇಳಿದ ದೀದಿಗೆ ಅಧಿಕಾರದ ಅದೃಷ್ಟವನ್ನು ತಂದುಕೊಟ್ಟ ಕ್ಷೇತ್ರವೂ ಇದೆ. ಇದೀಗ ಹೆಚ್ಚು ಕಮ್ಮಿ ಒಂದೂವರೆ ದಶಕ ಕಳೆದಿದೆ. ಈ ಅವಧಿಯಲ್ಲಿ ಒಂದು ದಶಕ ದೀದಿ ಸಿಎಂ ಆಗಿ ಅಧಿಕಾರವನ್ನೂ ಅನುಭವಿಸಿದರು. ಈಗ ಮತ್ತೆ ತಮ್ಮ ರಾಜಕೀಯದ ಅದೃಷ್ಟವನ್ನು ಇದೇ ಮೊದಲ ಬಾರಿ ಈ ಕ್ಷೇತ್ರದಲ್ಲಿ ಪರೀಕ್ಷೆಗೆ ಒಳಪಡಿಸಿಕೊಂಡಿದ್ದಾರೆ.

ಈತನಕ ಲೋಕಲ್ ಪಕ್ಷಗಳ ಚುನಾವಣೆ ತಂತ್ರಗಾರಿಕೆಗಳನ್ನು ಎದುರಿಸಿ 10 ವರ್ಷಗಳ ಅಧಿಕಾರ ಅನುಭವಿಸಿದ ದೀದಿಗೆ ಈ ಬಾರಿ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ತೀರ್ಮಾನವನ್ನು ಬಿಜೆಪಿ ಮಾಡಿದಾಗ ತಮ್ಮ ಹಳೇ ರಾಜಕೀಯ ದಾಳವನ್ನು ದೀದಿ ಉರುಳಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಂದಿಗ್ರಾಮ ಆಯ್ಕೆ ಮಾಡಿಕೊಂಡರು ಎನ್ನಲಾಗಿದೆ. ಇತ್ತ ದೀದಿ ಎಲ್ಲಿಂದ ಅಧಿಕಾರಕ್ಕೆ ಬಂದರೋ ಅದೇ ಸ್ಥಳದಲ್ಲಿ ಪ್ರತಿಸ್ಫರ್ಧಿಯೊಡ್ಡುವ ಮೂಲಕ ದೀದಿಯ ಆಟಕ್ಕೆ ಫುಲ್ ಸ್ಟಾಪ್ ಹಾಕಬೇಕು ಅಂತಲೇ ಬಿಜೆಪಿ ದೀದಿಯ ಅತ್ಯಾಪ್ತನನ್ನೇ ಅವರ ವಿರುದ್ಧವೇ ಎದುರಾಳಿಯಾಗಿ ಕಣಕ್ಕೆ ಇಳಿಸಿದೆ.

'ನೀವೇ ನಿಜವಾದ ಆಸ್ತಿ' ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕರಿಸಿದ ಮೋದಿ!

ಇದೇ ಹೊತ್ತಿನಲ್ಲಿ ಬಿಜೆಪಿಯ ಮಂತ್ರವನ್ನು ಬಿಜೆಪಿಗೇ ತಿರುಗುಬಾಣವನ್ನಾಗಿಸಲು ದೀದಿ ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದರು ಅನ್ನೋದು ರಾಜಕೀಯ ಲೆಕ್ಕಾಚಾರ. 2014ರಲ್ಲಿ ಪ್ರಧಾನಿ ಮೋದಿಯವರು ವಾರಣಾಸಿಯಿಂದ ಸ್ಪರ್ಧೆ ಮಾಡಿದರೆ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತೆ ಅನ್ನೋ ಅದೇ ಫಾರ್ಮುಲ ದೀದಿ ಕೂಡ ಈ ಬಾರಿ ಅನುಸರಿಸಿದ್ದಾರೆ. ನೈರುತ್ಯ ಬಂಗಾಳದ ಜಂಗಲ್ ಮಹಲ್ ಪ್ರಾಂತ್ಯದಲ್ಲಿ ಟಿಎಂಸಿ ಹೆಚ್ಚು ಹಿಡಿತ ಸಾಧಿಸಬಹುದು ಅನ್ನೋ ಕಾರಣಕ್ಕೆ ಈ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ಹಾಗು ದೀದಿಯ ರಾಜಕೀಯ ಕ್ಷೇತ್ರವೂ ಆಗಿರುವ ನಂದಿಗ್ರಾಮವನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ನಂದಿಗ್ರಾಮದಲ್ಲಿ ತಾವು ನಿಂತರೆ ತಮ್ಮ ಕೇಡರ್‍ಗಳಿಗೆ ಗಟ್ಟಿ ಸಂದೇಶ ರವಾನಿಸಿದಂತೆ ಆಗುತ್ತೆ. ಹಾಗಾಗಿಯೇ ನಂದಿಗ್ರಾಮವನ್ನು ಚುನಾವಣಾ ಕರ್ಮಭೂಮಿಯಾಗಿ ದೀದಿ ಆಯ್ಕೆ ಮಾಡಿಕೊಂಡರು ಅಂತಾರೆ ರಾಜಕೀಯ ಪಂಡಿತರು.

ಈ ಸೂತ್ರ ಯಶಸ್ಸು ತಂದುಕೊಡ್ತಾ ಅಥವಾ ಇಲ್ಲವಾ ಅನ್ನೋ ತೀರ್ಮಾನ ಮೇ 2 ಎರಡಕ್ಕೆ ಹೊರಬೀಳುತ್ತಾದ್ರೂ ಇದೇ ರಾಜಕೀಯ ಅಖಾಡದಲ್ಲಿ ಏಪ್ರಿಲ್ 1 ರಂದು ನಡೆಯುವ ಮತದಾನ ಮಾತ್ರ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಅನ್ನೋದಂತು ಸತ್ಯ.