ಕೋಲ್ಕತಾ (ಮಾ.28): ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮಾಜಿ ಆಪ್ತ, ಹಾಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಕಣಕ್ಕೆ ಇಳಿದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ನಾಯಕರೊಬ್ಬರ ನೆರವು ಕೋರಿದ ಘಟನೆ ನಡೆದಿದೆ. 

ಈ ಕುರಿತ ಆಡಿಯೋ ಸಂಭಾಷಣೆಯೊಂದನ್ನು ಬಿಜೆಪಿ ನಾಯಕರು ಶನಿವಾರ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಈ ಕುರಿತು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದು, ಅಧಿಕಾರ ದುರ್ಬಳಕೆ ಮೂಲಕ ಮಮತಾ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿ ಬಾಂಗ್ಲಾ ಪ್ರವಾಸಕ್ಕೆ ಕೆರಳಿದ ಮಮತಾ; ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ! .

ಈ ಹಿಂದೆ ಟಿಎಂಸಿಯಲ್ಲಿದ್ದು ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದ ಪ್ರಳಯ್‌ ಪಾಲ್‌ ಎಂಬುವವರಿಗೆ ದೂರವಾಣಿ ಕರೆ ಮಾಡಿದ್ದ ಮಮತಾ ‘ನೀವು ನನಗೆ ನಂದಿಗ್ರಾಮ ಗೆಲ್ಲಲು ನೆರವಾಗಬೇಕು. ನೋಡಿ, ನೀವು ಕೆಲವೊಂದು ದೂರುಗಳನ್ನು ಹೊಂದಿದ್ದೀರಿ ಎಂಬುದು ನನಗೆ ಗೊತ್ತು. ಆದರೆ ಅದಕ್ಕೆಲ್ಲಾ ಕಾರಣ, ಅಧಿಕಾರಿ ಕುಟುಂಬ ಸದಸ್ಯರು ನನಗೆ ನಂದಿಗ್ರಾಮಕ್ಕಾಗಲೀ ಅಥವಾ ಮಿಡ್ನಾಪುರಕ್ಕಾಗಲಿ ಭೇಟಿ ನೀಡಲು ಅವಕಾಶ ನೀಡದೇ ಇದ್ದಿದ್ದು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲಾ ಸಮಸ್ಯೆಗಳನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತ್ಯುತ್ತರ ನೀಡಿರುವ ಪಾಲ್‌ ‘ದೀದಿ, ನೀವು ನನಗೆ ಕರೆ ಮಾಡಿದ್ದೀರಿ ಅದು ಗೌರವಪೂರ್ಣ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಅಧಿಕಾರಿಗಳಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ನನ್ನೆಲ್ಲಾ ಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ’ ಎನ್ನುವ ಮೂಲಕ ಮಮತಾರ ಆಫರ್‌ ತಿರಸ್ಕರಿಸಿದ್ದಾರೆ.

ಈ ಆಡಿಯೋದ ಸಾಚಾಚನವನ್ನು ಟಿಎಂಸಿ ನಾಯಕರು ಪ್ರಶ್ನಿಸಿದ್ದಾರಾದರೂ, ಪಾಲ್‌ ಈ ಹಿಂದೆ ಟಿಎಂಸಿಯಲ್ಲೇ ಇದ್ದವರು. ಅವರನ್ನು ಮರಳಿ ಪಕ್ಷಕ್ಕೆ ಸೆಳೆಯುವುದರಲ್ಲಿ ತಪ್ಪೇನಿಲ್ಲ ಎನ್ನುವ ಮೂಲಕ ಮಮತಾ ಸಂಭಾಷಣೆ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ.