ಒಂದು ವಾರದಲ್ಲಿ ಎರಡನೇ ಬಾರಿಗೆ ಸತ್ಯೇಂದ್ರ ಜೈನ್‌ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು.

ನವದೆಹಲಿ (ಮೇ 25, 2023) : ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಳೆದ ವರ್ಷದಿಂದ ಬಂಧನದಲ್ಲಿರುವ ದೆಹಲಿ ಸರ್ಕಾರದ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಹಾರ್ ಜೈಲಿನ ಬಾತ್ ರೂಂನಲ್ಲಿ ಕುಸಿದು ಬಿದ್ದ ಕಾರಣ ಎಎಪಿಯ ಸತ್ಯೇಂದ್ರ ಜೈನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವಾರದಲ್ಲಿ ಎರಡನೇ ಬಾರಿಗೆ ಸತ್ಯೇಂದ್ರ ಜೈನ್‌ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಜೈಲಿನ ಬಾತ್ರೂಮ್‌ನಲ್ಲಿ ಈ ಹಿಂದೆಯೂ ಬಿದ್ದಿದ್ದ ಕಾರಣ ಬೆನ್ನುಮೂಳೆಯ ಗಾಯವಾಗಿದ್ದ ಅವರನ್ನು ರಾಷ್ಟ್ರ ರಾಜಧಾನಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಆಪ್‌ ಸೇನಾನಿಗಳು ಜೈಲಿಗೆ: ಉಡುಗಿದ ಸೇನೆಯ ಮಹಾದಂಡನಾಯಕನ ಜಂಘಾಬಲ..!

ನಿಶ್ಶಕ್ತರಾಗಿ ಕಾಣುವ ಸತ್ಯೇಂದ್ರ ಜೈನ್ ಅವರು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಕಾಣಿಸಿಕೊಂಡರು, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಂಧನದ ನಂತರ ಸುಮಾರು 35 ಕೆಜಿ ತೂಕವನ್ನು ಕಳೆದುಕೊಂಡಿರುವ ಮಾಜಿ ಸಚಿವರು ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದಾರೆ ಮತ್ತು ಮಲಗುವಾಗ ಅವರಿಗೆ BiPAP ಯಂತ್ರದ ಅಗತ್ಯವಿದೆ ಎಂದು ಎಎಪಿ ಕೆಲ ದಿನಗಳ ಹಿಂದೆ ತಿಳಿಸಿದ್ದರು. . 

ಅದಕ್ಕೂ ಮೊದಲು, ಸತ್ಯೇಂದ್ರ ಜೈನ್ ಅವರನ್ನು ಶನಿವಾರದಂದು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸೇರಿದಂತೆ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಆದರೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜೈಲು ಮುಖ್ಯ​ಸ್ಥನ ಜತೆ ಸೆಲ್‌​ನಲ್ಲೇ ಸತ್ಯೇಂದ್ರ ಜೈನ್‌ ಭೇಟಿ..!

ಇನ್ನು, ಈ ಸಂಬಂಧ ದೆಹಲಿಯ ತಿಹಾರ್‌ ಕಾರಾಗೃಹದ ಅಧಿಕಾರಿಗಳು ಮಾಹಿತಿ ನೀಡಿದ್ದು, "ಬೆಳಿಗ್ಗೆ 6 ಗಂಟೆ ಸುಮಾರಿಗೆ ವಿಚಾರಣಾ ಕೈದಿ ಸತ್ಯೇಂದ್ರ ಜೈನ್ ಸಿಜೆ -7 ರ ಆಸ್ಪತ್ರೆಯ ಎಂಐ ರೂಂನ ಬಾತ್‌ರೂಮಿನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಅಲ್ಲಿ ಅವರನ್ನು ಸಾಮಾನ್ಯ ದೌರ್ಬಲ್ಯಕ್ಕಾಗಿ ಗಮನಿಸಲಾಯಿತು. ನಂತರ, ಅವರು ವೈದ್ಯರು ಪರೀಕ್ಷಿಸಿದಾಗ ಅವರ ಜೀವಾಣುಗಳು ಸಾಮಾನ್ಯವಾಗಿದ್ದವು. ಅವರು ಬೆನ್ನಿನ, ಎಡಗಾಲು ಮತ್ತು ಭುಜದ ನೋವಿನ ಬಗ್ಗೆ ದೂರು ನೀಡಿದ್ದರಿಂದ ಅವರನ್ನು DDU ಆಸ್ಪತ್ರೆಗೆ ರೆಫರ್‌ ಮಾಡಲಾಯಿತು’’ ಎಂದು ಹೇಳಿಕೆ ನೀಡಿದ್ದಾರೆ.

ಆದರೆ, ಸತ್ಯೇಂದ್ರ ಜೈನ್‌ ಅವರ ಆರೋಗ್ಯದ ಬಗ್ಗೆ ಅವರ ಪಕ್ಷದ ಸಹೋದ್ಯೋಗಿಗಳು ಮತ್ತು ಬೆಂಬಲಿಗರು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುವ ಹಾಗೂ ಆಮ್ ಆದ್ಮಿ ಪಕ್ಷವನ್ನು ವಿರೋಧಿಸುವ ಬಿಜೆಪಿ ಅವರನ್ನು "ಕೊಲ್ಲಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಸಾಜ್‌ ಅಷ್ಟೇ ಅಲ್ಲ..! ಜೈಲಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಸಲಾಡ್‌, ಹಣ್ಣು, ಭರ್ಜರಿ ಔತಣಕೂಟ..!

ಈ ಆರೋಪಗಳಿಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಸತ್ಯೇಂದ್ರ ಜೈನ್ ಬಂಧನಕ್ಕೂ ಮುನ್ನ ಅಧಿಕ ತೂಕ ಹೊಂದಿದ್ದರು ಮತ್ತು ಅವರು ತೂಕ ಇಳಿಸಿಕೊಂಡಿರುವುದು "ಒಳ್ಳೆಯದು" ಎಂದು ಹೇಳಿದೆ. ಹಾಗೂ, ಧಾರ್ಮಿಕ ನಂಬಿಕೆಗಳ ಪ್ರಕಾರ ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುವುದರಿಂದ ತೂಕ ನಷ್ಟಕ್ಕೆ ಕಾರಣವಾಗಿದೆ ಎಂದು ದೆಹಲಿಯ ಬಿಜೆಪಿ ನಾಯಕ ವಿಜೇಂದ್ರ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!