ಆಪ್ ಸೇನಾನಿಗಳು ಜೈಲಿಗೆ: ಉಡುಗಿದ ಸೇನೆಯ ಮಹಾದಂಡನಾಯಕನ ಜಂಘಾಬಲ..!
ಭಾನುವಾರ ದೆಹಲಿ ಒಂದು ವಿಪರ್ಯಾಸಕ್ಕೆ ಸಾಕ್ಷಿಯಾಗಿದ್ದಂತೂ ಸುಳ್ಳಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ, ಅದನ್ನೇ ಪಕ್ಷದ ಸಿದ್ದಾಂತವಾಗಿಸಿಕೊಂಡು ಬಂದ ಆಪ್ ನಾಯಕ ಮನೀಶ್ ಸಿಸೋಡಿಯಾ ಅದೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದು ವಿಪರ್ಯಾಸವೇ ಸರಿ.
ನವದೆಹಲಿ (ಫೆಬ್ರವರಿ 28, 2023): `ಸೇನಾನಿ'ಗಳು ಜೈಲಿಗೆ...! ದಂಡನಾಯಕರು ಬಯಲಿಗೆ..!!! ಇಂಥದೊಂದು ಸಂಕಷ್ಟದ ಸ್ಥಿತಿಯಲ್ಲಿರುವುದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಕಾರಣ- ಈ ಮಫ್ಲರ್ ಮ್ಯಾನ್ ನಂಬುತ್ತಿದ್ದ ಅಥವಾ ನಂಬಿಕೆಯ ಬಂಟರಂತೆ ಇದ್ದವರು ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್. ಆಪ್ ಸೇನೆಯ ಮತ್ತೊಬ್ಬ ಪ್ರಮುಖ ಸೇನಾಧಿಕಾರಿ ಜೈನ್ ಜೈಲಿಗೆ ಹೋಗಿ 10 ತಿಂಗಳಾಗಿದೆ. ಇದೀಗ ಮತ್ತೊಬ್ಬರು ಜೈಲಿನತ್ತ ಮುಖ ಮಾಡುತ್ತಿದ್ದರೆ, ಇತ್ತ ಆಪ್ ಸೇನೆಯ ಮಹಾದಂಡನಾಯಕನ ಜಂಘಾಬಲವೇ ಉಡುಗಿದೆ.
ಡಿಸಿಎಂ ಮನೀಶ್ ಸಿಸೋಡಿಯಾ ‘ಎಜುಕೇಷನ್ ಮಾಡಲ್'ಗೆ ಹೆಸರುವಾಸಿಯಾಗಿದ್ದರೆ, ಮಾಜಿ ಮಂತ್ರಿ ಸತ್ಯೇಂದ್ರ ಜೈನ್ `ಹೆಲ್ತ್ ಮಾಡಲ್'ಗೆ ಹೆಸರಾಗಿದ್ದರು. ಆಮ್ ಆದ್ಮಿ ಪಕ್ಷದ ಐಕಾನ್ ಕಾರ್ಯಕ್ರಮಗಳಂತೆ ಇಡೀ ದೇಶವ್ಯಾಪಿ ಚರ್ಚೆ ಹುಟ್ಟುಹಾಕಿದ್ದು ಸುಳ್ಳಲ್ಲ. ಇದೇ ಮಾಡಲ್‌ಗಳನ್ನು ಚುನಾವಣೆಯಲ್ಲಿ ಆಪ್ ಪಾರ್ಟಿ ಟ್ರಂಪ್ ಕಾರ್ಡ್ ಅಂತೆ ಬಳಸಿಕೊಂಡಿದ್ದು, ಬ್ರ್ಯಾಂಡ್ ಕೂಡ ಮಾಡಿಕೊಂಡಿತು. ಬಿಜೆಪಿ ಗುಜರಾತ್ ಮಾಡಲ್ ಉಲ್ಲೇಖಿಸಿದ್ರೆ ಆಪ್ ಡೆಲ್ಲಿ ಮಾಡಲ್ ಅಂತ ಹೇಳಿಕೊಂಡು ಇಡೀ ದೇಶ ಸುತ್ತಿದ್ದು ಅಥವಾ ಸುತ್ತುತ್ತಿರುವುದೂ ಕೂಡ ಸುಳ್ಳಲ್ಲ.
ಇದನ್ನು ಓದಿ: From the India Gate: ಕಾಂಗ್ರೆಸ್ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್ ಕಳಿಸಿದ ಸರ್ಕಾರ..!
ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಲ್‌ಗಳನ್ನು ತರಲು ಸಹಕಾರಿಯಾದ ಈ ಇಬ್ಬರು ನಂಬಿಕೆ ಬಂಟರು ಇದೀಗ ಜೈಲಿಗೆ ಹೋಗಿರುವುದು ಅಥವಾ ಹೋಗುತ್ತಿರುವುದು ಅರವಿಂದ್ ಕೇಜ್ರಿವಾಲರ ಜಂಘಾಬಲಕ್ಕೆ ಪೆಟ್ಟು ಕೊಟ್ಟಿದೆ. ಮನೀಶ್ ಸಿಸೋಡಿಯಾ ಅವರ ಮೇಲೆ ಎಷ್ಟು ನಂಬಿಕೆ ಅಂದರೆ ದೆಹಲಿ ಸರ್ಕಾರದ ಪ್ರಮುಖ ಖಾತೆಗಳಾದ ಹಣಕಾಸು, ಶಿಕ್ಷಣ, ಲೋಕೋಪಯೋಗಿ ಹೀಗೆ 18 ಖಾತೆಗಳನ್ನು ನೀಡುವಷ್ಟು ನಂಬಿಕೆ ಇಬ್ಬರ ನಡುವೆ ಇತ್ತು. ಒಂದು ರೀತಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಶ್ರೀರಾಮ ಅಂಥ ಅಂದುಕೊಂಡರೆ, ಸಿಸೋಡಿಯಾ ಅವರನ್ನು ಹನುಮಂತನಿಗೆ ಹೋಲಿಕೆ ಮಾಡಬಹುದು.
`ಒಂದು ವಿಪರ್ಯಾಸ' : ಭಾನುವಾರ ದೆಹಲಿ ಒಂದು ವಿಪರ್ಯಾಸಕ್ಕೆ ಸಾಕ್ಷಿಯಾಗಿದ್ದಂತೂ ಸುಳ್ಳಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ, ಅದನ್ನೇ ಪಕ್ಷದ ಸಿದ್ದಾಂತವಾಗಿಸಿಕೊಂಡು ಬಂದ ಆಪ್ ನಾಯಕ ಮನೀಶ್ ಸಿಸೋಡಿಯಾ ಅದೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದು ವಿಪರ್ಯಾಸವೇ ಸರಿ. ಅದರಲ್ಲೂ ಭ್ರಷ್ಟಾಚಾರದ ಆರೋಪ ಹೊತ್ತು ರಾಜಘಟ್ ನಲ್ಲಿರುವ ರಾಷ್ಟ್ರಪಿತ ಸ್ಮಾರಕದ ಮುಂದೆ ಕೂತು ಸಿಸೋಡಿಯಾ ಪ್ರಾರ್ಥನೆ ಮಾಡಿದ್ದು ದೊಡ್ಡ ಪ್ರಹಾಸವಾಗಿ ಕಂಡಿತು.
ಇದನ್ನೂ ಓದಿ: ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ!
ಸದ್ಯಕ್ಕೆ ಬಿಜೆಪಿಯ ಮೇಲೆ ವಾಗ್ದಾಳಿ, ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ, ಸೇಡಿನ ರಾಜಕೀಯ, ಕುತಂತ್ರ, ಕುಟೀಲತೆ, ಕೇಜ್ರಿವಾಲ್ ಕಂಡ್ರೆ ಮೋದಿಗೆ ಭಯ, ಮುಂದೆ ಬಿಜೆಪಿಗೆ ಸಡ್ಡು ಹೊಡೆಯೋದು ಆಪ್ ಪಕ್ಷವೇ, ಆದಾನಿಗೆ ಇಲ್ಲದ ಇಡಿ, ಐಟಿ ಅಸ್ತ್ರಗಳು ವಿಪಕ್ಷಗಳ ಮೇಲೆ ಮಾತ್ರ ಬಳಕೆಯಾಗುತ್ತಿವೆ. ಹೀಗೆ ಹತ್ತಾರು ಆರೋಪಗಳು `ಪೊರಕೆ'ಯ ಕಾರ್ಯಕರ್ತರು ಮಾಡಿದರೂ ಕೂಡ, ದೆಹಲಿಯ ಖಜಾನೆಗೆ ದುಡ್ಡ ತುಂಬಲು ಮಾಡಿದ್ದ ಅಬಕಾರಿ ನೀತಿಯನ್ನು ಆರೋಪ ಬಂದ ಕೂಡಲೇ ಕೇಜ್ರಿವಾಲ್ ಸರ್ಕಾರ ವಾಪಸ್ ಪಡೆದಿದ್ದು ಏಕೆ ? ಎನ್ನುವ ಮೂಲ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ.
ಮನೀಶ್ ಸಿಸೋಡಿಯಾ ಅವರಿಂದ ಹಿಡಿದು ತೆಲಂಗಾಣ ಸಂಸದನ ಪುತ್ರ ಬಂಧನ, ಅಲ್ಲಿನ ವಿಧಾನ ಪರಿಷತ್ ಶಾಸಕಿಯ ತನಕ ಸಿಬಿಐನವರು ವಿಚಾರಣೆ, ಬಂಧನ ಅಂತ ಹೋದಾಗಲೂ, ಮೊದಲ ಆರೋಪಿಗಳ ವಿರುದ್ಧ ಜಾರ್ಜ್‌ಶೀಟ್ ಹಾಕಿದ ನಂತರವೂ ಇದು ಸೇಡಿನ ರಾಜಕೀಯ ಎಂದು ಆರೋಪಿಸುವುದು ಭ್ರಷ್ಟಾಚಾರ ವಿರೋಧಿಯ ಪಕ್ಷಕ್ಕೆ ಇದು ಎಷ್ಟರ ಮಟ್ಟಿಗೆ ಸರಿ ? ಎನ್ನುವ ಸಾಮಾನ್ಯರ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಇದನ್ನೂ ಓದಿ: Delhi Excise Policy Case: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!
ಅತ್ತ ಕಳೆದ 10 ತಿಂಗಳಿಂದ ಇಡೀ ಕೋರ್ಟ್‌ನಿಂದ ಹಿಡಿದು ಸುಪ್ರೀಂಕೋರ್ಟ್ ತನಕವೂ ಬೇಲ್‌ಗೆ ಹೋದರೂ ತಿರಸ್ಕಾರ ಆಗುತ್ತಿರುವ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನರ ಪ್ರಕರಣವನ್ನು ಸುಮ್ಮನೇ ದ್ವೇಷ ರಾಜಕಾರಣವೇ ಅಂತ ಬಿಟ್ಟುಬಿಡಬಹುದಾ ? ಅನ್ನೋ ಪ್ರಶ್ನೆ ಕೂಡ ಈಗ ಚರ್ಚೆಯ ವಿಷಯವಾಗಿದೆ.
ಮಾಸ್ಟರ್ ಮೈಂಡ್ ಸಿಸೋಡಿಯಾ : ಆಮ್ ಆದ್ಮಿ ಪಕ್ಷದ ಮಾಸ್ಟರ್ ಮೈಂಡ್ ಯಾರು ಅಂದ್ರೆ ಸಿಸೋಡಿಯಾ ಹೆಸರು ಕೇಳಿ ಬರುತ್ತದೆ. ಕೇಜ್ರಿವಾಲ್‌ರ ನಿಷ್ಟ ಅಥವಾ ನಂಬಿಕೆಯ ಬಂಟ ಯಾರು ಎಂದರೆ ಸಿಸೋಡಿಯಾ ಹೆಸರು ಕೇಳಿ ಬರುತ್ತದೆ. ಅರವಿಂದ್ ಕೇಜ್ರಿವಾಲ್ ಪಕ್ಷದ ಮುಖವಾಣಿಯಾದರೂ ಖಾತೆ ರಹಿತ ಸಿಎಂ ಆಗಿದ್ದರು. ತಮ್ಮ ಬಳಿ ಒಂದೂ ಖಾತೆ ಇಟ್ಟುಕೊಳ್ಳದೆ ಆಡಳಿತ ನಡೆಸಲು ನೆರವಾಗುತ್ತಿದ್ದು ಮನೀಶ್ ಸಿಸೋಡಿಯಾ. ಕೇಜ್ರಿವಾಲ್ ಮನಸ್ಸಿನಲ್ಲಿ ಬಂದಿದ್ದು ಸಿಸೋಡಿಯಾ ಕಾರ್ಯರೂಪಕ್ಕೆ ತಂದು ಬಿಡುತ್ತಿದ್ದರು ಅಂದರೂ ಕೂಡ ತಪ್ಪಾಗಲ್ಲ.
ಮನೀಶ್ ಸಿಸೋಡಿಯಾ ಒಂದು ರೀತಿಯಲ್ಲಿ ಫೈನಾನ್ಸ್ ಎಕ್ಸಪರ್ಟ್ ಕೂಡ. ದೆಹಲಿಯ ಹಣಕಾಸು ಖಾತೆ ನಿಭಾಯಿಸಿ ಚಾಣಾಕ್ಷತೆ ಪಡೆದಿದ್ದಾರೆ. ಇವರ ಹಣಕಾಸಿನ ಚಾಣಾಕ್ಷತೆ, ಸ್ಕೀಂ ಗಳಿಗೆ ಹಣ ಜೋಡಿಸುವುದು, ಆದಾಯ ಸೃಷ್ಟಿ, ಪಕ್ಷದ ಭರವಸೆಗಳ ನಿರ್ವಹಣೆ ಇಂಥ ವಿಚಾರಗಳಲ್ಲಿ ಸಿದ್ದ ಹಸ್ತರು ಅನ್ನೋದು ಆಪ್‌ನ ಗಟ್ಟಿ ನಂಬಿಕೆ. ಅದರಂತೆ ಇತ್ತೀಚೆಗೆ ಅಧಿಕಾರ ಹಿಡಿದಿರುವ ಪಂಜಾಬ್‌ನ ಐಎಎಸ್ ಅಧಿಕಾರಿಗಳು ಸಿಸೋಡಿಯಾ ಅವರ ಬಳಿ ಬಂದು ಮಾಹಿತಿ ಪಡೆದಕೊಂಡು ಹೋಗಿ, ಪಂಜಾಬ್ ಬಜೆಟ್ ಸಿದ್ದತೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೂಡ ಆಪ್ ಕೋಟೆಯಿಂದ ಹೊರಬೀಳುತ್ತಿರುವ ಮಾಹಿತಿ. ಇಂಥ ಸಿಸೋಡಿಯನನ್ನು ಸಿಬಿಐ ಇದೀಗ ತನಿಖೆ `ತನಿಖೆಗೆ ಅಸಹಕಾರ' ಎನ್ನುವ ಕಾರಣ ನೀಡಿ ಬಂಧಿಸಿ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಹಿಂದೆ ಸಿಸೋಡಿಯಾ ಅವರೇ ಹೇಳಿಕೊಂಡಂತೆ ಮೋದಿ-ಶಾ ಸರ್ಕಾರ ಜೈಲಿಗೆ ಕಳುಹಿಸಲು ಸಿದ್ದತೆ ನಡೆಸಿದೆ ಎನ್ನುವ ಮಾತು ನಿಜವಾಗಲು ಹೊರಟಿದೆ.
ದೆಹಲಿಯ ಮಂತ್ರಿಗಳ ಪದವಿಗಳನ್ನು `ನಂಬಿಕೆ' ಅನ್ನೋ ಹೆಸರಿನಲ್ಲಿ ಬರೀ 7 ಮಂದಿ ಶಾಸಕರಿಗೆ ಪಟ್ಟಕಟ್ಟಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಇದೀಗ ಎರಡನೇ ಪಂಕ್ತಿಯ ನಾಯಕರ ಕೊರತೆ ಕಾಡುತ್ತಿದೆ. ಜೊತೆಗೆ ನಂಬುಗೆಯ, ಐಡಿಯಾಲಜಿ, ಚಾಣಾಕ್ಷ ಅನ್ನುವ ಪದಗಳನ್ನು ಇಟ್ಟುಕೊಂಡು ಹುಡುಕೋ ಕೆಲಸಕ್ಕೆ ಇದೀಗ ಕೇಜ್ರಿವಾಲ್ ಮುಂದಾಗಿದ್ದಾರೆ. ಸಾಲದಕ್ಕೆ ದೇಶವ್ಯಾಪಿ ಪಕ್ಷ ಕಟ್ಟಬೇಕು ಅನ್ನೋ ಕೇಜ್ರಿವಾಲ ಕನಸಿಗೆ ಭಂಗ ಬರದಂತೆ ದೆಹಲಿಯಲ್ಲಿ ಕಾರ್ಯನಿರ್ವಹಿಸುವವರು ಕೂಡ ಬೇಕಾಗಿದ್ದಾರೆ. ಮಾಸ್ಟರ್ ಮೈಂಡ್ ಸಿಸೋಡಿಯಾ ಬಂಧನದಿಂದ ವಿಚಲಿತವಾಗಿರುವ ಕೇಜ್ರಿವಾಲರು ತಮ್ಮ ಬತ್ತಳಿಕೆಯಲ್ಲಿರುವ ಯಾವ ಬಾಣ ಬೀಡುತ್ತಾರೆ ಅನ್ನೋದು ಸದ್ಯದ ಪ್ರಶ್ನೆ.