ಜೈಲು ಮುಖ್ಯ​ಸ್ಥನ ಜತೆ ಸೆಲ್‌​ನಲ್ಲೇ ಸತ್ಯೇಂದ್ರ ಜೈನ್‌ ಭೇಟಿ ಮಾಡಿದ್ದಾರೆ. ಆಪ್‌ ಸಚಿವರ ಕುರಿ​ತ ಮತ್ತೊಂದು ವಿಡಿಯೋ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಜೈ​ಲಲ್ಲೇ ಸತ್ಯೇಂದ್ರ ಜೈನ್‌ ದರ್ಬಾ​ರ್‌ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ. 

ನವದೆಹಲಿ: ದೆಹಲಿ ಆಮ್‌ ಆದ್ಮಿ ಪಕ್ಷದ (Aam Aadmi Party) ಸರ್ಕಾರದ ಸಚಿವ (Minister) ಸತ್ಯೇಂದ್ರ ಜೈನ್‌ಗೆ (Satyendar Jain) ತಿಹಾರ್‌ ಜೈಲಿನಲ್ಲಿ (Tihar Jail) ಸಿಗುತ್ತಿರುವ ‘ರಾಜಾತಿಥ್ಯ’ದ ಮತ್ತೊಂದು ವಿಡಿಯೋವೊಂದನ್ನು (Video) ಬಿಜೆಪಿ (BJP) ನಾಯಕರು ಶನಿವಾರ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ವತಃ ತಿಹಾರ್‌ ಜೈಲಿನ ಅಧೀಕ್ಷಕರೇ (Jail Chief) ಸತ್ಯೇಂದ್ರ ಜೈನ್‌ ಇರುವ ಸೆಲ್‌ಗೆ ಬಂದು ಕುಳಿತು ಸಚಿವರ ಜೊತೆ ಮಾತನಾಡುತ್ತಿರುವ ದೃಶ್ಯಗಳಿವೆ. ಜೈಲಿನೊಳಗಿನ ದೃಶ್ಯಗಳನ್ನು ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಸತ್ಯೇಂದ್ರ ಜೈನ್‌ ಕೋರ್ಟ್‌ ಮೊರೆ ಹೋಗಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಈ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಸತ್ಯೇಂದ್ರ ಜೈನ್‌ಗೆ ಅತ್ಯಾಚಾರಿಯೊಬ್ಬ ಮಸಾಜ್‌ ಮಾಡುತ್ತಿರುವ, ಸತ್ಯೇಂದ್ರ ಜೈನ್‌ ಜೈಲಿನೊಳಗೆ ಬಗೆ ಬಗೆಯ ಆಹಾರ ಸೇವಿಸುತ್ತಿರುವ, ತನ್ನ ಕೋಣೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಇಟ್ಟುಕೊಂಡು ಆರಾಮದಾಯ ಜೀವನ ನಡೆಸುತ್ತಿರುವ ವಿಡಿಯೋಗಳು ಬಿಡುಗಡೆಯಾಗಿದ್ದವು. ಈ ವಿಡಿಯೋ ಬಿಡುಗಡೆ ಬೆನ್ನಲ್ಲೇ ತಿಹಾರ್‌ ಜೈಲಿನ ಹಿರಿಯ ಅಧಿಕಾರಿ ಅಜಿತ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿತ್ತು.

ಇದನ್ನು ಓದಿ: ಮಸಾಜ್‌ ಅಷ್ಟೇ ಅಲ್ಲ..! ಜೈಲಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಸಲಾಡ್‌, ಹಣ್ಣು, ಭರ್ಜರಿ ಔತಣಕೂಟ..!

Scroll to load tweet…

ಬಿಜೆ​ಪಿ-ಕೇಜ್ರಿ ವಾಕ್ಸ​ಮ​ರ:
ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು ಜೈಲಿನಲ್ಲಿ ಸತ್ಯೇಂದ್ರ ಜೈನ್‌ ದರ್ಬಾರ್‌ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ ವಿಡಿಯೋ ಕುರಿತು ಮಾತನಾಡಿರುವ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ‘ಈ ವಿಡಿಯೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ. ಇದಕ್ಕೆ ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ಬಿಜೆಪಿಯ 10 ವಿಡಿಯೋಗಳಿಗೆ ನಮ್ಮ 10 ಭರವಸೆಗಳೇ ಸವಾಲು ಒಡ್ಡಲಿವೆ’ ಎಂದು ಹೇಳಿದ್ದಾರೆ.

ಧಾರ್ಮಿಕ ನಂಬಿಕೆ ರೀತಿಯ ಆಹಾರ ಕೋರಿದ್ದ ಸತ್ಯೇಂದ್ರ ಜೈನ್‌ ಅರ್ಜಿ ವಜಾ
ತಮ್ಮ ಜೈನ ಧಾರ್ಮಿಕ ನಂಬಿಕೆ ರೀತಿಯ ಆಹಾರ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಕೋರಿ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ವಜಾ ಮಾಡಿದೆ. ತಮಗೆ ತಮ್ಮ ಧಾರ್ಮಿಕ ನಂಬಿಕೆ ರೀತಿಯ ಆಹಾರ ಒದಗಿಸುತ್ತಿಲ್ಲ. ಹೀಗಾಗಿ ಜೈಲು ಸೇರಿದ ಬಳಿಕ 28 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಜೈಲು ಸೇರಿದ ಮೇಲೆ ಅನಾರೋಗ್ಯ ಕಾಡಿದೆ. ಹೀಗಾಗಿ ಸಲಾಡ್‌ ಸೇರಿದಂತೆ ತಮ್ಮ ಬೇಡಿಕೆಯ ಆಹಾರ ಒದಗಿಸಬೇಕು. ವೈದ್ಯಕೀಯ ತಪಾಸಣೆಗೆ ಸೂಚಿಸಬೇಕು ಎಂದು ಜೈನ್‌ ಅರ್ಜಿಯಲ್ಲಿ ಕೋರಿದ್ದರು. 
ಆದರೆ ಅರ್ಜಿ ವಿಚಾರಣೆ ಹಂತದಲ್ಲೇ, ಜೈಲಲ್ಲಿ ಜೈನ್‌ಗೆ ಸಲಾಡ್‌ ಸೇರಿದಂತೆ ಬಯಸಿದ ಎಲ್ಲಾ ರೀತಿಯ ಭಕ್ಷ ಭೋಜ್ಯಗಳನ್ನು ಒದಗಿಸುತ್ತಿದ್ದ ಸಿಸಿಟಿವಿ ದೃಶ್ಯಗಳು ಬಿಡುಗಡೆ ಆಗಿತ್ತು. ಅದರ ಬೆನ್ನಲ್ಲೇ ಇದೀಗ ಜೈನ್‌ ಕೋರಿಕೆ ತಿರಸ್ಕರಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಇದನ್ನೂ ಓದಿ: ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!