ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ 2019ರಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಾಲಯದ ಸಮನ್ಸ್ ತಲುಪದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ವಾರಂಟ್ (NBW) ಜಾರಿ ಮಾಡಿದ್ದು, ಡಿಸೆಂಬರ್ 3ಕ್ಕೆ ವಿಚಾರಣೆ ನಿಗದಿಪಡಿಸಿದೆ.

ದೆಹಲಿ: ಭಾರತ ಉದ್ಧಾರ ಮಾಡುವ ನೆಪ ಇಟ್ಟುಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಇದ್ದಾಗಲೆಲ್ಲಾ ಜರ್ಮನಿಯಿಂದ ಓಡೋಡಿ ಬರುವ, ಯುಟ್ಯೂಬರ್​ ಧ್ರುವ್​ ರಾಠೆ ಅವರಿಗೆ ಈ ಸಂಕಷ್ಟ ಎದುರಾಗಿದೆ. ಪ್ರತಿಭಟನೆ ಇದ್ದಾಗಲೆಲ್ಲಾ ವಿಮಾನದ ಐಷಾರಾಮಿ ಕ್ಲಾಸ್​ನಲ್ಲಿಯೇ ಬರುವ ಧ್ರುವ್​ ಅವರು ಕೋರ್ಟ್​ನಿಂದ ಹೊರಟ ನೋಟಿಸ್​ ಪಡೆಯಲು ಮಾತ್ರ ಪದೇ ಪದೇ ತಲೆಮರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಈಗ ಸಂಕಷ್ಟ ಬಂದಿದ್ದು, ದೆಹಲಿ ಕೋರ್ಟ್​ ಇವರಿಗೆ ಜಾಮೀನು ರಹಿತ ವಾರೆಂಟ್​ ಜಾರಿ (Non Bailable Warrant NBW) ಮಾಡಿದೆ. ಈಚೆಗಷ್ಟೇ ಇವರು ಕಾಕ್ರೋಚ್​ ಜನತಾ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಮಾಡಿದ್ದ ಪ್ರತಿಭಟನೆಯಲ್ಲಿ ಜರ್ಮನಿಯಿಂದ ಬಂದು ದೇಶದ ಉದ್ಧಾರ ಮಾಡುವ ಬಗ್ಗೆ ಮಾತನಾಡಿದ್ದರು. ಇದೀಗ ಹಳೆಯ ಕೇಸ್​ ಓಪನ್​ ಆಗಿದ್ದು, ಸಂಕಷ್ಟ ಎದುರಾಗಿದೆ.

(ಜಾಮೀನು ರಹಿತ ವಾರೆಂಟ್ಏ ನೆಂದರೆ, ಸಾಮಾನ್ಯವಾಗಿ ವಾರೆಂಟ್​ ಜಾರಿ ಮಾಡಿದಾಗ, ಆರೋಪಿಗಳು, ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗ ಸ್ಥಳದಲ್ಲೇ ಜಾಮೀನು ಅಥವಾ ಬಾಂಡ್ ಮೇಲೆ ಬಿಡುಗಡೆ ಮಾಡಿಸಿಕೊಳ್ಳಬಹುದು. ಆದರೆ ಜಾಮೀನು ರಹಿತ ವಾರೆಂಟ್​ ಅನ್ನು ಕೋರ್ಟ್​ ಹೊರಟಿಸಿದರೆ ಆರೋಪಿಗಳಿಗೆ ಈ ಅಧಿಕಾರ ಇರುವುದಿಲ್ಲ. ಅವರು ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರವೇ ನ್ಯಾಯಾಧೀಶರು ಜಾಮೀನು ನೀಡುವ ಬಗ್ಗೆ ವಿಚಾರಣೆ ನಡೆಸಿ ಆದೇಶ ಹೊರಡಿಸುತ್ತಾರೆ). ಆದ್ದರಿಂದ ಕೋರ್ಟ್​ ಮುಂದೆ ಬರುವುದರಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದ ಧ್ರುವ್​ ರಾಠೆ (Dhruv Rathee) ಈಗ ಕೋರ್ಟ್​ಗೆ ಬರಲೇಬೇಕಿದೆ!

ಅಷ್ಟಕ್ಕೂ ಇವರ ವಿರುದ್ಧ ಇರುವುದು 2019ರ ಕೇಸ್​. ಅಂದು ವಿಕಾಸ್ ಸಾಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಎಂಬವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ (Defamation Case) ಇದಾಗಿದೆ. 2019 ರಿಂದ ಈ ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ. ಅವರು ಭಾರತದಲ್ಲಿ ಇರದೇ ಜರ್ಮನಿಯಲ್ಲಿ ವಾಸವಾಗಿರುವುದರಿಂದ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ನೋಟಿಸ್​ ಜಾರಿಯಾದಾಗ, ಅದು ಕುತೂಹಲ ರೀತಿಯಲ್ಲಿ ಧ್ರುವ್​ ರಾಠೆಗೆ ತಲುಪುತ್ತಲೇ ಇರಲಿಲ್ಲ. ಆದ್ದರಿಂದ ಅವರು ಕೋರ್ಟ್​ಗೆ ಹಾಜರು ಆಗುತ್ತಲೇ ಇರಲಿಲ್ಲ. ಆದರೆ ಈ ಸಲ ಹಾಗಾಗದೇ ಅವರು ಬರಲೇಬೇಕಿದೆ.

ಏನಿದು ಕೇಸ್​?

2019ರಲ್ಲಿ, ಬಿಜೆಪಿ ಐಟಿ ಸೆಲ್ ಭಾಗ 2ʼ ಎಂಬ ಹೆಸರಿನ ವಿಡಿಯೋ ಕುರಿತು ವಿಕಾಸ್ ಅವರು, ಧ್ರುವ್​ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ದಾಖಲಿಸಿದ್ದರು. ಇದು 2018ರ ಮೇ ತಿಂಗಳಲ್ಲಿ ಧ್ರುವ್​ ಅವರು ಅಪ್ಲೋಡ್​ ಮಾಡಿದ್ದ ವಿಡಿಯೋವೊಂದಕ್ಕೆ ಸಂಬಂಧಿಸಿದ ಕೇಸ್​ ಆಗಿದೆ. ಆ ವಿಡಿಯೋದಲ್ಲಿ ತಮ್ಮನ್ನು ಅಪಖ್ಯಾತಿಗೊಳಿಸುವ ಸಲುವಾಗಿ ಬಿಜೆಪಿ ಐಟಿ ವಿಭಾಗವು ತಮಗೆ ಲಂಚ ನೀಡಲು ಪ್ರಯತ್ನಿಸಿತ್ತು ಎಂದು ಧ್ರುವ್​ ರಾಠಿ ಆರೋಪಿಸಿದ್ದರು. ನಂತರ ಈ ವಿಡಿಯೋವನ್ನು ರಾಠಿ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಯಿತು. ಆ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಇದನ್ನು ಮರುಟ್ವೀಟ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಈ ಸಮನ್ಸ್‌ ರದ್ದುಗೊಳಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿತ್ತು. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೋರ್ಟ್​, ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಈ ಪ್ರಕರಣದಲ್ಲಿ ಇತ್ತೀಚಿಗೆ ಜಾರಿಯಾದ ಸಮನ್ಸ್ ತಲುಪಿಸುವ ಪ್ರಯತ್ನ ವಿಫಲವಾಗಿತ್ತು. ದೂರುದಾರರು ನ್ಯಾಯಾಲಯದ ಪ್ರಕ್ರಿಯೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ರಾಠಿ ಅವರು ವಿದೇಶದಲ್ಲಿ ವಾಸಿಸುತ್ತಿರುವುದರಿಂದ, ಅವರಿಗೆ ನ್ಯಾಯಾಲಯದ ದಾಖಲೆಗಳನ್ನು ತಲುಪಿಸಲು ಪದೇ ಪದೇ ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ ಎಂದು ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ NBW ಜಾರಿ ಮಾಡಿರುವ ಕೋರ್ಟ್​, ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.