Asianet Suvarna News Asianet Suvarna News

ನಾವು ಯಾರಿಗೂ ಕಡಿಮೆ ಇಲ್ಲ: ವಿಶೇಷಚೇತನರ ಭರತನಾಟ್ಯಕ್ಕೆ ಬೆರಗಾದ ಜನ

  • ನಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟ ವಿಶೇಷಚೇತನರು
  • ಗಾಲಿ ಕುರ್ಚಿ ಮೇಲೆ 30 ನಿಮಿಷಗಳ ಅದ್ಭುತ ಪ್ರದರ್ಶನ
  • ವಿಶಾಖಪಟ್ಟಣಂನಲ್ಲಿ ಕೋವಿಡ್‌ ಕಾರ್ಯಕರ್ತರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮ
Delhi based differently abled Bharatnatyam dance troupe create sensation in Audience akb
Author
Bangalore, First Published Apr 10, 2022, 12:43 AM IST

ವಿಶಾಖಪಟ್ಟಣಂ(ಏ.9): ಭರತನಾಟ್ಯ ಎಂಬುದು ಅಷ್ಟು ಸುಲಭದ ಕೆಲ ಅಲ್ಲ. ಅದಕ್ಕೆ ಸಾಕಷ್ಟು ಶ್ರಮ ಪ್ರತಿಭೆ ಬೇಕು. ಕೈಕಾಲು ಸರಿ ಇದ್ದವರೇ ಭರತನಾಟ್ಯದ ಕೆಲ ಭಂಗಿಗಳನ್ನು ಮಾಡಲು ಹೆಣಗುತ್ತಾರೆ. ಆದರೆ ಇಲ್ಲೊಂದು ವಿಶೇಷ ಚೇತನರ ಗುಂಪು ತಮ್ಮೆಲ್ಲಾ ದೌರ್ಬಲ್ಯವನ್ನು ಮೀರಿ ಭರತನಾಟ್ಯದ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಬೆರಗಾಗಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷಚೇತನ ಭರತನಾಟ್ಯ ಕಲಾವಿದರು ಸೊಗಸಾದ ವಿಭಿನ್ನ ಭಂಗಿಗಳನ್ನು ಮಾಡುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದರು. ಗಾಲಿಕುರ್ಚಿಯ ಮೇಲೆ ಆರು ಹುಡುಗರು ಮತ್ತು ಶ್ರವಣದೋಷವುಳ್ಳ ಮೂವರು ಹುಡುಗಿಯರು 30 ನಿಮಿಷಗಳ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. 

ವಿಶಾಖಪಟ್ಟಣಂನಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ಕಾರ್ಯಕರ್ತರಿಗೆ ಗೌರವ ಸೂಚಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಮೂಲದ  'ಡಬ್ಲ್ಯೂಎಒ' (WAO) ಮತ್ತು ನಟರಾಜ್ ಸಂಗೀತ ಮತ್ತು ನೃತ್ಯ ಅಕಾಡೆಮಿ ಆಯೋಜಿಸಿದ 13 ನೇ ಅಖಿಲ ಭಾರತ ನೃತ್ಯೋತ್ಸವದ ಇತ್ತೀಚೆಗೆ ಮುಕ್ತಾಯಗೊಂಡ ವೈಶಾಖಿ ನೃತ್ಯೋತ್ಸವದ ಭಾಗವಾಗಿ ಈ ಪ್ರದರ್ಶನ ನೀಡಲಾಯಿತು. ಭರತನಾಟ್ಯ ನೃತ್ಯಗಾರರು ಸೊಗಸಾದ ಭಂಗಿಗಳನ್ನು ಕ್ಲಾಸಿಕ್ ಹೆಜ್ಜೆಗಳನ್ನು ಕುಶಲತೆಯಿಂದ ನಿಧಾನವಾಗಿ ಮತ್ತು ಸ್ಥಿರವಾಗಿ ಮುದ್ರೆಗೆ ಬದಲಾಯಿಸಿದರು.

ಯಾರ ನೆರವಿಲ್ಲದೇ ಮತ ಚಲಾಯಿಸಿದ ವಿಶೇಷ ಚೇತನ ಹೆಣ್ಣು ಮಗಳು!

ನಮಗೆ, ಗಾಲಿಕುರ್ಚಿಯು ಸಬಲೀಕರಣದ ಸಂಕೇತವಾಗಿದೆ. ಜನರು ಅದನ್ನು ಅಂಗವಿಕಲರ ಸಾರಿಗೆ ವಿಧಾನವೆಂದು ಭಾವಿಸುತ್ತಾರೆ. ಆದರೆ ಇದು ನಮ್ಮ ಶಕ್ತಿ ಎಂದು ಜಗತ್ತಿಗೆ ತೋರಿಸಲು ಮತ್ತು ಭರತನಾಟ್ಯದಂತಹ ಭಾರತೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲು ನಾವು ಬಯಸುತ್ತೇವೆ ಎಂದು  WAO ಸಂಸ್ಥಾಪಕ ಮತ್ತು ಸ್ವತಃ ವಿಶೇಷ ಚೇತನರಾಗಿರುವ ಕಲಾವಿದ ಹುಸ್ನೇನ್ (Husnain) ಹೇಳಿದರು. ಎಲ್ಲಾ ಪ್ರದರ್ಶನದ ಮೂಲಕ, ಹುಸ್ನೇನ್ ಮತ್ತು ಅವರ ತಂಡವು ಪ್ರೇಕ್ಷಕರಿಗೆ, ಚಕ್ರಗಳು ಕಾಲುಗಳ ಸ್ಥಾನ ತುಂಬಬಹುದು ಎಂಬುದನ್ನು ನೆನಪಿಸಿತು.ಈ ನೃತ್ಯ ರೂಪಕವನ್ನು  ಹುಸ್ನೇನ್ ಮತ್ತು ತಂಡದ ನೃತ್ಯ ನಿರ್ದೇಶಕ ಗುಲ್ಶನ್ ಕುಮಾರ್ (Gulshan Kumar) ಪರಿಪೂರ್ಣಗೊಳಿಸಿದರು.

ವಿಶೇಷ ಚೇತನ ನರ್ತಕ ಹುಸ್ನೇನ್ ಅವರು ನೃತ್ಯವನ್ನು ವೃತ್ತಿಯಾಗಿ ಆಯ್ಕೆ ಮಾಡಲು ಮತ್ತು ಗಾಲಿಕುರ್ಚಿಯನ್ನು ಬಳಸಲು ಹಲವು ಸವಾಲುಗಳನ್ನು ಎದುರಿಸಿದರು. ಹಲವು ವರ್ಷಗಳಿಂದ ಫ್ರೀಲ್ಯಾನ್ಸ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಹುಸ್ನೇನ್ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. 'ಆದರೆ ನಮಗೆ ಅರ್ಹವಾದ ಗೌರವ ಮತ್ತು ಮನ್ನಣೆ ನಮಗೆ ಎಂದಿಗೂ ಸಿಗಲಿಲ್ಲ' ಎಂದು ಅವರು ಹೇಳುತ್ತಾರೆ. 2013ರಲ್ಲಿ ಲೈಫ್ ಸಕ್ಸಸ್ ಎಂಬ ನೃತ್ಯ ಶಾಲೆ ಆರಂಭಿಸಿದರು. ಆದರೆ ಎರಡು ವರ್ಷಗಳ ನಂತರ, ಅವರ ವೈಯಕ್ತಿಕ ಜೀವನದಲ್ಲಿ ಬಿಕ್ಕಟ್ಟಿನ ಕಾರಣ, ಅವರು ಅದನ್ನು ಮುಚ್ಚಬೇಕಾಯಿತು.

ಬಾಹ್ಯಾಕಾಶಕ್ಕೆ ಹೋಗ್ತಾರಾ ಜಗತ್ತಿನ ಮೊದಲ ವಿಶೇಷ ಚೇತನ ಗಗನಯಾತ್ರಿ?

ಆರು ವಿಕಲಚೇತನರ ತಂಡದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಂದು ತಂಡವು ಗಣನೀಯವಾಗಿ ಬೆಳೆದಿದೆ ಮತ್ತು ಈಗ ಸುಮಾರು 95 ಪ್ರದರ್ಶಕರನ್ನು ಹೊಂದಿದೆ. ಗುಂಪಿನ ನೃತ್ಯ ಸಂಯೋಜಕ ಗುಲ್ಶನ್ ಅವರು ಗಾಲಿಕುರ್ಚಿಯಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಹಸ್ತಚಾಲಿತ ಸಾಹಸಗಳನ್ನು ಪ್ರದರ್ಶಿಸುವ ಮೂಳಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ (Guinness Book of World Records) ಸೇರಿದ್ದಾರೆ. ಭರತನಾಟ್ಯದಲ್ಲಿ ಪರಿಣತಿ ಹೊಂದಿರುವ WAO ತಂಡವು ಈಗ ಕಥಕ್‌ನ ಲಕ್ನೋ ಘರಾನಾದ (Lucknow gharana of Kathak) ಬಗ್ಗೆ ತರಬೇತಿ ಪಡೆಯುತ್ತಿದೆ.

ಕಳೆದ 15 ವರ್ಷಗಳಿಂದ ಗಾಲಿಕುರ್ಚಿಯ (wheelchair) ಮೇಲೆ ಪ್ರದರ್ಶನ ನೀಡುವುದರಿಂದ ಗಾಲಿಕುರ್ಚಿಯಿಂದಲೂ ಪ್ರಪಂಚದ ನೋಟವು ಸುಂದರವಾಗಿರುತ್ತದೆ ಎಂದು ನನಗೆ ಅರಿವಾಯಿತು. ನೃತ್ಯವು ನನಗೆ ವಿಮೋಚನೆಯ ಅಭಿವ್ಯಕ್ತಿಯಾಗಿದೆ ಮತ್ತು ನನ್ನ ಗಾಲಿಕುರ್ಚಿ ನನ್ನ ಆಸ್ತಿಯಾಗಿದೆ. ವಿಶೇಷ ಚೇತನ ನೃತ್ಯಗಾರರಿಗೆ ಘನತೆ, ಒಳಗೊಳ್ಳುವಿಕೆ ಮತ್ತು ಸಮಾನತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ನನ್ನ ಧ್ಯೇಯವಾಗಿದೆ ಎಂದು ಹುಸ್ನೇನ್  ಆಂಗ್ಲ ಮಾಧ್ಯಮ ದಿ ಹಿಂದೂಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
 

Follow Us:
Download App:
  • android
  • ios