ಋಷಿಕೇಶದಲ್ಲಿ ರಾಫ್ಟಿಂಗ್ ಮಾಡುವಾಗ ಚಿತ್ರೀಕರಿಸಿದ ವೀಡಿಯೊವನ್ನು ಬೋಧಕರು ಮತ್ತು ಟ್ರಾವೆಲ್ ಏಜೆನ್ಸಿಯು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು,ಇದರಿಂದ  ಮಹಿಳೆಗೆ ಕಿರುಕುಳ ಶುರುವಾಗಿದೆ. 

ದೆಹಲಿ: ಮಹಿಳೆಯೊಬ್ಬರು ರಿವರ್ ರಾಫ್ಟಿಂಗ್ ಮಾಡುತ್ತಿರುವ ವೀಡಿಯೊವನ್ನು ಅವರ ಒಪ್ಪಿಗೆ ಇಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಟ್ರೋಲಿಂಗ್ ಮಾಡುತ್ತಿದ್ದಾರೆ. ಈ ಮೂಲಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಕೂಡಲೇ ಈ ಮಹಿಳೆ ರಿವರ್ ರಾಫ್ಟಿಂಗ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಗೂಗಲ್‌, ಫೇಸ್‌ಬುಕ್‌ ಹಾಗೂ ಎಕ್ಸ್‌ಗಳಿಗೆ ಆದೇಶಿಸಿದೆ. ಋಷಿಕೇಶದಲ್ಲಿ ರಾಫ್ಟಿಂಗ್ ಬೋಧಕರಾಗಿ ಕೆಲಸ ಮಾಡುವ ವ್ಯಕ್ತಿ ಮತ್ತು ಅವರು ಕೆಲಸ ಮಾಡುವ ಟ್ರಾವೆಲ್‌ ಏಜೆನ್ಸಿ ಅಪ್‌ಲೋಡ್ ಮಾಡಿದ ವೀಡಿಯೊ ಕ್ಲಿಪ್‌ಗಳ ಪ್ರಸಾರವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಗೂಗಲ್, ಫೇಸ್‌ಬುಕ್ ಮತ್ತು ಎಕ್ಸ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್ ದತ್ತ ನಿರ್ದೇಶನ ನೀಡಿದ್ದಾರೆ. 

ಮಹಿಳೆಯ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಏಪ್ರಿಲ್ 16 ರಂದು ಕೇಂದ್ರ ಸರ್ಕಾರ, ಆನ್‌ಲೈನ್‌ ಪ್ಲಾಟ್‌ಪಾರ್ಮ್‌ಗಳು ಹಾಗೂ ರಿವರ್ ರಾಫ್ಟಿಂಗ್‌ ಬೋಧಕರು ಮತ್ತು ಟ್ರಾವೆಲ್ ಏಜೆನ್ಸಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಂಬಂಧಿತ ನಿಯಮಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್‌ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. ಮಹಿಳೆಯ ವೀಡಿಯೋವನ್ನು ಪ್ರಸಾರ ಮಾಡುತ್ತಿರುವ ಎರಡರಿಂದ ಐದು ಯುಆರ್‌ಎಲ್‌ ಲಿಂಕ್‌ಗಳನ್ನು ಇಂಟರ್‌ನೆಟ್‌ನಿಂದ ತೆಗೆಯುವಂತೆ ಕೋರ್ಟ್ ನಿರ್ದೇಶಿಸಿದೆ. ಜೊತೆಗೆ ವೀಡಿಯೊ ಕ್ಲಿಪ್ ಪ್ರಕಟಣೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರಿಗೆ ಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿ:ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..

ತನ್ನ ಒಪ್ಪಿಗೆ ಇಲ್ಲದೇ ಮತ್ತು ತನಗೆ ತಿಳಿಯದೆಯೇ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನನ್ನ ವೀಡಿಯೊವನ್ನು ಪ್ರಸಾರ ಮಾಡಿದ್ದರಿಂದ ನನ್ನ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ತಾನು ಮಾರ್ಚ್ 2025 ರಲ್ಲಿ ರಜೆಯ ಮೇಲೆ ಋಷಿಕೇಶಕ್ಕೆ ಹೋಗಿದ್ದೆ ಮತ್ತು ಸಾಹಸ ಕ್ರೀಡೆಯಾದ ರಿವರ್ ರಾಫ್ಟಿಂಗ್‌ಗಾಗಿ ಟ್ರಾವೆಲ್‌ ಏಜೆನ್ಸಿಯನ್ನು ಬುಕ್ ಮಾಡಿದ್ದೆ. ರಾಫ್ಟಿಂಗ್ ಬೋಧಕರ ಸಲಹೆಯ ಮೇರೆಗೆ, ಅವರು ಗೋಪ್ರೊ ಕ್ಯಾಮೆರಾದ ಮೂಲಕ ತಮ್ಮ ರಾಫ್ಟಿಂಗ್ ದೃಶ್ಯವನ್ನು ರೆಕಾರ್ಡ್ ಮಾಡಿದ್ದರು. 

ಅರ್ಜಿದಾರರು ಸೇರಿದಂತೆ ಎಲ್ಲರ ವೀಡಿಯೊವನ್ನು ರಿವರ್‌ ರಾಫ್ಟಿಂಗ್ ಬೋಧಕರು ರೆಕಾರ್ಡ್ ಮಾಡಿದ್ದಾರೆ ಮತ್ತು ಒಂದು ವೀಡಿಯೊದಲ್ಲಿ, ಅವರು ನನ್ನನ್ನು ಸರಿಯಾಗಿ ತೋರಿಸಿಲ್ಲ, ಅಂದರೆ ಭಯಬೀತರಾಗಿದ್ದಂತೆ ಆ ವೀಡಿಯೋದಲ್ಲಿ ತಾನು ಕಾಣಿಸಿಕೊಂಡಿದ್ದೇನೆ. ಈ ವೀಡಿಯೋ ವೈರಲ್ ಆಗಿದ್ದು, ಇದಾದ ನಂತರ ನಾನು ಸೈಬರ್ ನಿಂದನೆ, ಸೈಬರ್ ಬೆದರಿಸುವಿಕೆ, ಬೆದರಿಕೆ, ದ್ವೇಷ, ಟ್ರೋಲಿಂಗ್ ಮತ್ತು ಕಿರುಕುಳಕ್ಕೆ ಬಲಿಯಾಗಿದ್ದಾಗಿ ಅರ್ಜಿದಾರ ಮಹಿಳೆ ಹೇಳಿಕೊಂಡಿದ್ದಾರೆ. ಇದರಿಂದ ತನ್ನ ವೈಯಕ್ತಿಕ ಸ್ವಾತಂತ್ರ್ಯ, ಶಾಂತಿ, ಸುರಕ್ಷತೆ ಮತ್ತು ಭದ್ರತೆ ತೀವ್ರವಾಗಿ ಅಪಾಯಕ್ಕೆ ಸಿಲುಕಿದೆ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಆ ವಿಡಿಯೋ ಮಹಿಳೆಯ ವೈಯಕ್ತಿಕ ಬಳಕೆಗೆ ಮಾತ್ರ ಮೀಸಲಾಗಿತ್ತು ಆದರೆ ರಿವರ್‌ ರಾಫ್ಟಿಂಗ್ ಬೋಧಕ ಮತ್ತು ಟ್ರಾವೆಲ್ ಸಂಸ್ಥೆಯು ಅವರ ಅರಿವಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗಳಿಗೆ ಬಿಡುಗಡೆ ಮಾಡಿದೆ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಆ ವೀಡಿಯೋಗಳನ್ನು ಡಿಲೀಟ್ ಮಾಡಿ ತನ್ನ ಗೌಪ್ಯತೆಯ ಹಕ್ಕನ್ನು ರಕ್ಷಿಸಲು ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಮಹಿಳೆ ನ್ಯಾಯಾಲಯವನ್ನು ಕೋರಿದ್ದರು. 

ಇದನ್ನೂ ಓದಿ:River Rafting: ಏನೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತೆ ಗೊತ್ತಾ?