ದೆಹಲಿ-ಎನ್‌ಸಿಆರ್‌ ವಲಯದಲ್ಲಿ ದೀಪಾವಳಿ ವೇಳೆ ಆಗುವ ವಾಯುಮಾಲಿನ್ಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸುವುದಕ್ಕೂ ಧಾರ್ಮಿಕ ಆಚರಣೆಗೂ ಏನು ಸಂಬಂಧ ಎಂದು ಪ್ರಶ್ನಿಸಿದೆ. ಸಾರ್ವಜನಿಕರು ನ್ಯಾಯಾಂಗದ ಆದೇಶ ಕಾಯದೆ ಸ್ವಯಂಪ್ರೇರಿತರಾಗಿ ಪರಿಸರ ರಕ್ಷಿಸಬೇಕು ಎಂದು ಪೀಠ ಸಲಹೆ ನೀಡಿದೆ.

ನವದೆಹಲಿ: ದೀಪಾವಳಿಯ ಸಮಯದಲ್ಲಿ ಸಿಡಿಮದ್ದುಗಳಿಂದಾಗಿ ಆಗುವ ವಾಯುಮಾಲಿನ್ಯದ ಬಗೆಗಿನ ವಿಚಾರಣೆ ವೇಳೆ, ‘ಪಟಾಕಿ ಸಿಡಿಸುವುದರಲ್ಲಿ ಧಾರ್ಮಿಕವಾದದ್ದು ಏನಿದೆ?’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಧಾರ್ಮಿಕ ಆಚರಣೆಗಳು ಮತ್ತು ಸಿಡಿಮದ್ದುಗಳ ನಡುವೆ ಏನು ಸಂಬಂಧ?

ದೆಹಲಿ-ಎನ್‌ಸಿಆರ್‌ ವಲಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಆಗುವ ವಾಯುಮಾಲಿನ್ಯದ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾ। ಸೂರ್ಯಕಾಂತ್‌, ನ್ಯಾ.ಜೋಯ್‌ಮಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರಿದ್ದ ಪೀಠ ನಡೆಸುತ್ತಿತ್ತು. ಆ ವೇಳೆ ನ್ಯಾ। ಬಾಗ್ಚಿ, ‘ಧಾರ್ಮಿಕ ಆಚರಣೆಗಳು ಮತ್ತು ಸಿಡಿಮದ್ದುಗಳ ನಡುವೆ ಏನು ಸಂಬಂಧವಿದೆ?’ ಎಂದು ಪ್ರಶ್ನಿಸಿದ್ದಾರೆ.

ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ

ಜತೆಗೆ, ‘ನಾವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಬಯಸುವುದಿಲ್ಲ. ಆದರೆ ಸಾರ್ವಜನಿಕರಿಗೆ ಪಟಾಕಿಗಳಿಂದಾಗುವ ಹಾನಿಕಾರಕ ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಹಾಗೂ ಸುರಕ್ಷಿತ ಆಚರಣೆಗಳ ಕುರಿತು ಪ್ರೋತ್ಸಾಹಿಸುವುದು ಮುಖ್ಯ. ಸಾರ್ವಜನಿಕರು ನ್ಯಾಯಾಂಗದ ಆದೇಶಗಳ ಮೇಲೆ ಅವಲಂಬಿತರಾಗುವ ಬದಲು ಸ್ವಯಂಪ್ರೇರಿತರಾಗಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಪೀಠ ಹೇಳಿದೆ.

ದೀಪಾವಳಿಗೆ ಪಟಾಕಿ ಸಿಡಿಸುವುದು ಸೆಂಟಿಮೆಂಟ್ ಪ್ರಶ್ನೆ

ದೀಪಾವಳಿಗೆ ಪಟಾಕಿ ಸಿಡಿಸುವುದು ಸಂಪೂರ್ಣ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಜಸ್ಟೀಸ್ ಎಂಎಂ ಸುಂದರೇಶ್, ಪಿಬಿ ವರಾಲೆ ದ್ವಿಸದಸ್ಯ ಪೀಠ ಈ ಕುರಿತು ಮಹತ್ವದ ಆದೇಶ ನೀಡಿದೆ. ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ಬ್ಯಾನ್ ಮಾಡುವುದಿಲ್ಲ, ಹಾಗಂತ ಸಂಪೂರ್ಣ ಅವಕಾಶವೂ ಇಲ್ಲ. ನಿಗದಿತ ಸಮಯದಲ್ಲಿ ಪಟಾಕಿ ಸಿಡಿಸಬೇಕು. ಹಸಿರು ಪಟಾಕಿಗಳಿಗೆ ಅವಕಾಶ ನೀಡಲಾಗುತ್ತದೆ. ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವ, ಜನಸಾಮಾನ್ಯರ ಆರೋಗ್ಯಕ್ಕೂ ಹೆಚ್ಚು ಅಪಾಯ ತಂದೊಡ್ಡುವ ಪಟಾಕಿಗಳನ್ನು ನಿಷೇಧಿಸಲಾಗುತ್ತದೆ ಎಂದಿದೆ.