ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಕ್ಯಾನ್ಸರ್‌ ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ 35 ಪೇಟೆಂಟ್‌ ಔಷಧಗಳು ಸೇರಿದಂತೆ ಒಟ್ಟು 110 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಜೀವ ರಕ್ಷಕ ಔಷಧಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಇದರ ಉದ್ದೇಶವಾಗಿದೆ.

ನವದೆಹಲಿ: ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಎಲ್ಲಾ ಕ್ಯಾನ್ಸರ್‌ ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ರಾಂಡೆಡ್‌, ಜೆನೆರಿಕ್‌, ದೇಶೀಯವಾಗಿ ಉತ್ಪಾದಿಸಲಾಗುವ, ಆಮದು ಮಾಡಿಕೊಳ್ಳುವ, ಪೇಟೆಂಟ್‌ ಹೊಂದಿರುವ ಮತ್ತು ಪೇಟೆಂಟ್‌ ಇಲ್ಲದ ಔಷಧಗಳಿಗೆ ಇದು ಅನ್ವಯಿಸಲಿದೆ.

ವ್ಯಾಪಾರ ಮಾರ್ಜಿನ್ ಎಂದರೆ ಔಷಧ ತಯಾರಕರು ನಿಗದಿಪಡಿಸಿದ ಬೆಲೆ ಮತ್ತು ಔಷಧವನ್ನು ಮಾರಾಟ ಮಾಡುವಾಗ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಪಡೆಯುವ ಲಾಭದ ಅಂತರ. ಇದನ್ನು ನಿಯಂತ್ರಿಸುವ ಮೂಲಕ ಜೀವ ರಕ್ಷಕ ಕ್ಯಾನ್ಸರ್‌ ಔಷಧಗಳನ್ನು ಜನರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಈ ಆದೇಶವು ಇದೇ ಮಾಸಾಂತ್ಯದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದ್ದು, 35 ಪೇಟೆಂಟ್‌ ಔಷಧಗಳು ಸೇರಿದಂತೆ ಒಟ್ಟು 110 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಕಲಿ ಆ್ಯಂಟಿಬಯೋಟಿಕ್‌ ಔಷಧ ಮಾರಾಟ ಮಾಡಿದ್ದ ಪ್ರಶಾಂತ್‌!

ಬೆಂಗಳೂರು: ವಿದೇಶದ ಪ್ರತಿಷ್ಠಿತ ಔಷಧ ಕಂಪನಿ ಫೈಜರ್ ಹೆಸರಿನಲ್ಲಿ 15 ಸಾವಿರಕ್ಕೂ ಅಧಿಕ ಎರಡು ಆ್ಯಂಟಿ ಬಯೋಟಿಕ್‌ ಔಷಧಗಳ ಶೀಷೆಗಳನ್ನು ಆರೋಪಿ ಪ್ರಶಾಂತ್ ಮಾರಾಟ ಮಾಡಿದ್ದ ಎಂಬ ಸಂಗತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಕಲಿ ಔಷಧ ಮಾರಾಟ ದಂಧೆಯ ಕಿಂಗ್‌ಪಿನ್ ಪ್ರಶಾಂತ್‌ನ ಔಷಧ ವಹಿವಾಟಿನ ವಿವರವನ್ನು ಎಸ್‌ಐಟಿ ಶೋಧಿಸಿತು. ಆಗ ಕಳೆದ ಐದು ವರ್ಷಗಳಿಂದ ಅಮೆರಿಕ ಮೂಲದ ಫೈಜರ್ ಕಂಪನಿ ಹೆಸರಿನ ಪ್ರಮುಖವಾಗಿ ಎರಡು ಆ್ಯಂಟಿ ಬಯೋಟಿಕ್ ಔಷಧಗಳನ್ನು ಆರೋಪಿ ಹೆಚ್ಚು ಮಾರಾಟ ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕು ರೋಗ ನಿರೋಧಕ ಔಷಧಗಳಾಗಿದ್ದು, ಗಂಭೀರ ಸ್ವರೂಪದ ಸೋಂಕು ಕಾಯಿಲೆಗಳಿಗೆ ಫೈಜರ್ ಕಂಪನಿಯ ಆ್ಯಂಟಿ ಬಯೋಟಿಕ್‌ ಔಷಧಗಳನ್ನು ವೈದ್ಯರು ಶಿಫಾರಸು ಮಾಡುತ್ತಿದ್ದರು. ಅವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಹ ಇತ್ತು. ಅಲ್ಲದೆ ಆ ಬಯೋಟಿಕ್‌ಗಳ ಬೆಲೆಯೂ 5,500-6 ಸಾವಿರ ರು.ವರೆಗೆ ಇತ್ತು. ಹೀಗಾಗಿ ಈ ಔಷಧವನ್ನು ನಕಲಿ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ಪ್ರಶಾಂತ್‌ನ ದುರಾಲೋಚನೆಯಾಗಿತ್ತು. ಅಸಲಿಯಂತೇ ಕಾಣುವ ರೀತಿಯಲ್ಲಿ ಫೈಜರ್ ಕಂಪನಿ ಔಷಧಗಳ ಶೀಷೆಗಳಿಗೆ ನಕಲಿ ಔಷಧ ತುಂಬಿ ಪ್ರಶಾಂತ್ ಮಾರಾಟ ಮಾಡಿದ್ದಾನೆ. ಇದರಿಂದ ಕೋಟ್ಯಂತರ ರುಪಾಯಿ ಸಂಪಾದಿಸಿದ್ದಾನೆ ಎಂದು ತಿಳಿದು ಬಂದಿದೆ.