ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅಸ್ತು  12-18 ವರ್ಷ ಮಕ್ಕಳಿಗೆ ಲಸಿಕೆ: ಡಿಸಿಜಿಐ ಅನುಮೋದನೆ  ಮಕ್ಕಳ ಬಳಕೆಗೆ ದೇಶದ 2ನೇ ಲಸಿಕೆ

ನವದೆಹಲಿ (ಡಿ.26) : ಹೈದರಾಬಾದ್‌ (Hyderabad) ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ (Covaxine) ಲಸಿಕೆಯನ್ನು 12-18 ವರ್ಷದೊಳಗಿನ ಮಕ್ಕಳ ತುರ್ತು ಬಳಕೆಗೆ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಶನಿವಾರ ಅನುಮೋದನೆ ನೀಡಿದೆ. ಇದರಿಂದ ಭಾರತದಲ್ಲಿ ಮಕ್ಕಳಿಗೂ ಲಸಿಕೆ (Vaccination) ನೀಡುವ ದಿನಗಳು ಮತ್ತಷ್ಟು ಸಮೀಪಿಸಿದಂತಾಗಿದೆ. ಈ ಮೂಲಕ ದೇಶದ ಮಕ್ಕಳ ಬಳಕೆಗೆ ಲಭ್ಯವಾಗಲಿರುವ ಎರಡನೇ ಲಸಿಕೆ ಕೋವ್ಯಾಕ್ಸಿನ್‌ ಆಗಲಿದೆ. ಈಗಾಗಲೇ ಝೈಡಸ್‌ ಕ್ಯಾಡಿಲಾ ಕಂಪನಿಯ ಲಸಿಕೆಗೆ ಡಿಸಿಜೆಐ ಅನುಮತಿ ನೀಡಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಕೋವ್ಯಾಕ್ಸಿನ್‌ ಲಸಿಕೆಯನ್ನು 2-18ರ ವರ್ಷದ ಮಕ್ಕಳಿಗೆ ಬಳಸಲು ಕೊರೋನಾ ಲಸಿಕೆ ಸಂಬಂಧಿಸಿದ ತಜ್ಞರ ಸಮಿತಿ ಅನುಮೋದನೆ ನೀಡಿತ್ತು. ಅಂತಿಮ ಹಂತದ ಅನುಮೋದನೆಗಾಗಿ ಡಿಸಿಜಿಐಗೆ (DCGI) ಕಳುಹಿಸಿಕೊಡಲಾಗಿತ್ತು.

ವಯಸ್ಕರ ಲಸಿಕೆಯೇ ಬಳಕೆ: ಸದ್ಯ ವಯಸ್ಕರಿಗೆ ಬಳಸಲಾಗುತ್ತಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನೇ ಮಕ್ಕಳ ಮೇಲೂ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ದೇಶದ 6 ಕಡೆ 1000ಕ್ಕೂ ಹೆಚ್ಚು ಮಕ್ಕಳ (Kids) ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಮಕ್ಕಳ ಮೇಲಿನ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ವರದಿಯನ್ನು ಭಾರತ್‌ ಬಯೋಟೆಕ್‌ ಕಂಪನಿ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಗೆ ಸಲ್ಲಿಸಿತ್ತು. ಬಳಿಕ ವಿಷಯ ತಜ್ಞರ ಸಮಿತಿ ಇದನ್ನು ಪರಿಶೀಲಿಸಿ ಅನುಮೋದನೆ ಒಪ್ಪಿಗೆ ನೀಡಿತ್ತು.

ಶೇ.77ರಷ್ಟು ರಕ್ಷಣೆ: ಕೋವ್ಯಾಕ್ಸಿನ್‌ ಲಸಿಕೆಯನ್ನು ವಯಸ್ಕರಂತೆಯೇ 28 ದಿನಗಳ ಅಂತರದಲ್ಲಿ ಎರಡು ಡೋಸ್‌ ಮೂಲಕ ನೀಡಲಾಗುತ್ತದೆ. ಪ್ರಯೋಗ ಹಂತದಲ್ಲಿ ಲಸಿಕೆಯು ವಯಸ್ಕರಷ್ಟೇ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ. ಕೋವಿಡ್‌ ವೈರಸ್‌ ವಿರುದ್ಧ ಮಕ್ಕಳಿಗೆ ಶೇ.77.8ರಷ್ಟುರಕ್ಷಣೆ ಒದಗಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಮೊದಿ ಮಹತ್ವದ ಘೋಷಣೆ : 

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ತಲೆನೋವು ಕೊಡಲಾರಂಭಿಸಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಹೊಸ ವರ್ಷಾಚರಣೆ ಮತ್ತೊಂದು ಹೊಸ ಅಲೆಗೆ ಕಾರಣವಾಗುತ್ತಾ ಎಂಬ ಭೀತಿ ಹುಟ್ಟಿಕೊಂಡಿದೆ. ಈಗಾಗಲೇ ಕರ್ನಾಟಕ ಸೇರಿ ಅನೇಕ ರಾಜ್ಯಗಳು ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿವೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ಆರಂಭಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. 

ಮೋದಿ ಭಾಷಣದ ಮುಖ್ಯಾಂಶಗಳು

* ಭಾರತದಲ್ಲಿ ಕೊರೋನಾ ಕಾಡುತ್ತಿದ್ದು, ಈ ವಿಚಾರವಾಗಿ ಭಾರತ ಇನ್ನೂ ಎಚ್ಚರದಿಂದಿರಬೇಕು. ಅಲ್ಲದೇ ದೇಶವನ್ನು ಒಮಿಕ್ರಾನ್ ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಕೊರೋನಾ ಹೊಸ ರೂಪ ಪಡೆದುಕೊಳ್ಳುತ್ತಿದೆ. ಹೀಗಿದ್ದರೂ ನಾವೂ ಇದರ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿಸಿಕೊಂಡಿದ್ದೇವೆ. 

* ಕೊರೋನಾ ವಿರುದ್ಧ ಹೋರಾಡಲು ನಾಲ್ಕು ಲಕ್ಷ ಆಕ್ಸಿಜನ್ ಸಿಲಿಂಡರ್ ದೇಶಾದ್ಯಂತ ಕೊಟ್ಟಿದ್ದೇವೆ. ಒಂದು ಲಕ್ಷ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿಯೇ ವಿಶೇಷ ವಾರ್ಡ್‌ಗಳನ್ನು ನಿರ್ಮಿಸಿದ್ದೇವೆ. ಕೊರೋನಾ ಯುದ್ಧದಲ್ಲಿ ಹೋರಾಡಲು ಮೂರು ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಪ್ಲಾಂಟ್‌ಗಳನ್ನು ನಿರ್ಮಿಸಿದ್ದೇವೆ. 

* ನಮ್ಮ ರಕ್ಷಣೆಯೇ ಕೊರೋನಾ ವಿರುದ್ಧದ ಮೊದಲ ಅಸ್ತ್ರ. ಅಲ್ಲದೇ ಈ ಹೋರಾಟದಲ್ಲಿ ಎರಡನೇ ಪ್ರಮುಖ ಅಸ್ತ್ರವಾದ ಲಸಿಕೆಯನ್ನೂ ಎಲ್ಲರೂ ಪಡೆಯಬೇಕು. 

* ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲು ಭಾಗ ಲಸಿಕೆ ನೀಡಿದ್ದೇವೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ ಆಗಿದೆ.

* ಹನ್ನೊಂದು ತಿಂಗಳಿನಿಂದ ನಡೆಯುತ್ತಿರುವ ಲಸಿಕಾ ಅಭಿಯಾನದಡಿ ದೆಶದ ಶೇ. 90ರಷ್ಟು ಜನರಿಗೆ ಲಸಿಕೆ ನಿಡಲಾಗಿದೆ. 

ಲಸಿಕೆ ಬಗ್ಗೆ ಮಹತ್ವದ ಘೋಷಣೆ: 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ದೇಶದಲ್ಲಿ ಲಸಿಕೆ ಆರಂಭವಾಗಲಿದೆ. 2022ರ ಜನವರಿ 3, ಸೋಮವಾರದಿಂದ ಲಸಿಕೆ ಆರಂಭ. ಈ ನಿರ್ಧಾರ ಕೊರೋನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಶಾಲಿಯಾಗಿಸುವುದರೊಂದಿಗೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಹಾಗೂ ಹೆತ್ತವರ ಆತಂಕ ಕಡಿಮೆ ಮಾಡಲಿದೆ. 

* ದೇಶದಲ್ಲಿರುವ ಹೆಲ್ತ್‌ ಕೇರ್ ಹಾಗೂ ಫ್ರಂಟ್‌ಲೈನ್ ವರ್ಕರ್ಸ್‌ ಈ ಹೋರಾಟದಲ್ಲಿ ದೇಶವನ್ನು ಸುರಕ್ಷಿತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂದು ಕೂಡಾ ಅವರು ಕೊರೋನಾ ರೋಗಿಗಳ ಸೇವೆಯಲ್ಲಿ ಬಹಳಷ್ಟು ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 2022ರ ಜ.10, ಸೋಮವಾರದಿಂದ ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ಪ್ರಾರಂಭಿಸಲಾಗುವುದು.

* ವೃದ್ಧರು ಹಾಗೂ ಮೊದಲೇ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರು ಮುನ್ನೆಚ್ಚರಿಕೆ ವಹಿಸುವುದು ಅತೀ ಅಗತ್ಯ. ಇದನ್ನು ಗಮನದಲ್ಲಿಟ್ಟುಕೊಂಡು 60 ವರ್ಷಕ್ಕಿಂತ ಹೆಚ್ಚಿನ ನಾಗರಿಕರಿಗೆ ಅವರ ವೈದ್ಯರ ಸಲಹೆ ಮೇರೆಗೆ ಬೂಸ್ಟರ್ ಡೋಸ್ ನೀಡುವ ಕಾರ್ಯವೂ ಆರಂಭವಾಗಲಿದೆ. ಈ ಮುನ್ನೆಚ್ಚರಿಕಾ ಲಸಿಕಾ ಅಭಿಯಾನ 2022ರ ಜ.10, ಸೋಮವಾರದಿಂದ ಆರಂಭಗೊಳ್ಳಲಿದೆ. 

ವದಂತಿ ಹಾಗೂ ತಪ್ಪು ಮಾಹಿತಿಯಿಂದ ದೂರವಿರಿ. ನಾವೆಲ್ಲರೂ ಒಟ್ಟಾಗಿ ಈವರೆಗಿನ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಇದಕ್ಕೆ ಮತ್ತಷ್ಟು ವೇಗ ನೀಡಿ ವ್ಯಾಪಿಸಬೇಕು. ನಮ್ಮೆಲ್ಲರ ಪರಿಶ್ರಮವೇ ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ದೇಶವನ್ನು ಮತ್ತಷ್ಟು ಬಲಶಾಲಿಯಾಗಿಸುತ್ತದೆ.