Omicron Threat: ಭಾರತದಲ್ಲಿ ಒಮಿಕ್ರೋನ್‌ ಅಬ್ಬರ ನಿಶ್ಚಿತ: ಲಸಿಕೆ ಪಡೆಯದವರಿಗೆ ಅಪಾಯ ಫಿಕ್ಸ್‌..!

*   ರಾಜ್ಯದಲ್ಲಿ ಸೋಂಕಿತರು 38ಕ್ಕೇರಿಕೆ
*   ಮೊದಲು ಒಮಿಕ್ರೋನ್‌ ಪತ್ತೆ ಹಚ್ಚಿದ ಆಫ್ರಿಕಾ ತಜ್ಞೆ ಎಚ್ಚರಿಕೆ
*   ಈಗಿರುವ ಲಸಿಕೆಗಳಿಂದಲೇ ಒಮಿಕ್ರೋನ್‌ ಹರಡುವ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯ

Omicron Risk for Those Who Not Get Covid Vaccine in India grg

ಕೋಲ್ಕತಾ(ಡಿ.26): ‘ಭಾರತದಲ್ಲಿ(India) ಒಮಿಕ್ರೋನ್‌(Omicron) ರೂಪಾಂತರಿ ತಳಿಯ ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವುದು ನಿಶ್ಚಿತ. ಆದರೆ, ದಕ್ಷಿಣ ಆಫ್ರಿಕಾದಲ್ಲಾದಂತೆ ಇಲ್ಲೂ ಒಮಿಕ್ರೋನ್‌ ಪೀಡಿತರಲ್ಲಿ ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಜಗತ್ತಿಗೆ ಮೊಟ್ಟ ಮೊದಲ ಬಾರಿ ಒಮಿಕ್ರೋನ್‌ ರೂಪಾಂತರಿ ತಳಿಯನ್ನು ಪತ್ತೆಹಚ್ಚಿದ ದಕ್ಷಿಣ ಆಫ್ರಿಕಾದ ತಜ್ಞೆ ಡಾ. ಏಂಜೆಲಿಕ್‌ ಕೋಯೆತ್ಜೀ(Dr Angelique Coetzee) ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ(South Africa) ವೈದ್ಯಕೀಯ ಸಂಘದ ಅಧ್ಯಕ್ಷರೂ ಆಗಿರುವ ಅವರು, ‘ಈಗಿರುವ ಲಸಿಕೆಗಳಿಂದಲೇ ಒಮಿಕ್ರೋನ್‌ ಹರಡುವ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಆದರೆ, ಲಸಿಕೆ ಪಡೆಯದ ವ್ಯಕ್ತಿಗಳು ಮಾತ್ರ ಈ ತಳಿಯಿಂದ 100% ಅಪಾಯಕ್ಕೆ ತುತ್ತಾಗುತ್ತಾರೆ’ ಎಂದೂ ಎಚ್ಚರಿಸಿದ್ದಾರೆ.

ಸುದ್ದಿಸಂಸ್ಥೆಗೆ ಪ್ರಿಟೋರಿಯಾದಿಂದ ದೂರವಾಣಿ ಸಂದರ್ಶನ ನೀಡಿರುವ ಏಂಜೆಲಿಕ್‌, ‘ಲಸಿಕೆ(Vaccine) ಪಡೆದವರು ಅಥವಾ ಮೊದಲೇ ಕೋವಿಡ್‌(Covid19) ಸೋಂಕಿಗೆ ತುತ್ತಾಗಿದ್ದವರು 3ರಲ್ಲಿ ಒಬ್ಬರಿಗೆ ಮಾತ್ರ ಒಮಿಕ್ರೋನ್‌ ಹರಡುತ್ತಾರೆ. ಆದರೆ ಲಸಿಕೆ ಪಡೆಯದವರು 100% ಈ ವೈರಸ್‌ ಹರಡುತ್ತಾರೆ. ಕೆಲವರು ಹೇಳುತ್ತಿರುವಂತೆ ಒಮಿಕ್ರೋನ್‌ ರೂಪಾಂತರಿಯ ಜೊತೆಗೆ ಕೊರೋನಾ ಸೋಂಕು ಎಂಡೆಮಿಕ್‌ ಹಂತಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಮುಂದೊಂದು ದಿನ ಇದು ಎಂಡೆಮಿಕ್‌ ಹಂತಕ್ಕೆ ಬರಬಹುದು. ಅಷ್ಟರೊಳಗೆ ಒಮಿಕ್ರೋನ್‌ ತಳಿಯೇ ಇನ್ನಷ್ಟು ರೂಪಾಂತರ ಹೊಂದಿ ಹೊಸ ತಳಿಗಳು ಹುಟ್ಟಬಹುದು. ಅವು ಇನ್ನೂ ಪ್ರಬಲವಾಗಿರಬಹುದು ಅಥವಾ ದುರ್ಬಲವಾಗಿರಬಹುದು’ ಎಂದು ಹೇಳಿದ್ದಾರೆ.

Omicron Threat: ಲಸಿಕೆ ಪಡೆದರೂ ಒಮಿಕ್ರೋನ್‌ ಹಬ್ಬುತ್ತಿರುವುದೇಕೆ?

‘ಭಾರತದಲ್ಲಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ ಖಂಡಿತ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಪಾಸಿಟಿವಿಟಿ ದರವೂ ಹೆಚ್ಚಲಿದೆ. ಆದರೆ ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಸಾಧ್ಯತೆಗಳಿವೆ. ಒಮಿಕ್ರೋನ್‌ ಜಗತ್ತಿನಾದ್ಯಂತ(WorldP) ಹರಡುತ್ತಿದೆ. ಸದ್ಯಕ್ಕೆ ಇದರಿಂದ ಜೀವಕ್ಕೆ ಅಪಾಯವಿರುವಂತೆ ತೋರುತ್ತಿಲ್ಲ. ಬೆಚ್ಚಗಿನ ದೇಹದೊಳಗೆ ಹೊಕ್ಕು ಅಸ್ತಿತ್ವ ಉಳಿಸಿಕೊಳ್ಳುವುದು ಒಮಿಕ್ರೋನ್‌ನ ಏಕೈಕ ಉದ್ದೇಶದಂತೆ ಕಾಣಿಸುತ್ತಿದೆ. ಮಕ್ಕಳಿಗೂ ಈ ಸೋಂಕು ತಗಲುತ್ತದೆ. ಆದರೆ 5ರಿಂದ 6 ದಿನದಲ್ಲಿ ಅವರು ಗುಣಮುಖರಾಗುತ್ತಾರೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ 7 ಜನಕ್ಕೆ ಒಮಿಕ್ರೋನ್‌

ರಾಜ್ಯದಲ್ಲಿ(Karnataka) ಒಮಿಕ್ರೋನ್‌ ವೈರಸ್‌ ಸೋಂಕಿತರ ಸಂಖ್ಯೆ ಮತ್ತೆ ಸ್ಫೋಟಗೊಂಡಿದ್ದು, ಶನಿವಾರ ಒಂದೇ ದಿನ ಬೆಂಗಳೂರಿನಲ್ಲಿ(Bengaluru) ಬರೋಬ್ಬರಿ ಏಳು ಮಂದಿಯಲ್ಲಿ ರೂಪಾಂತರಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರೋನ್‌ ಪ್ರಕರಣಗಳ ಸಂಖ್ಯೆ 38ಕ್ಕೆ ಹೆಚ್ಚಿದೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಒಮಿಕ್ರೋನ್‌ ಸೋಂಕಿತನ ಸಂಪರ್ಕ ಹೊಂದಿದ್ದ 76 ಮತ್ತು 62 ವರ್ಷದ ಇಬ್ಬರು ವೃದ್ಧರು, ಇಂಗ್ಲೆಂಡ್‌ನಿಂದ ಬಂದ 31ರ ಯುವಕ, ಈತನ ಸಂಪರ್ಕಕ್ಕೆ ಬಂದಿದ್ದ 54 ವರ್ಷದ ಪುರುಷ, ಅಮೆರಿಕಾದಿಂದ ಬಂದ 15 ವರ್ಷದ ಬಾಲಕ, ದಕ್ಷಿಣ ಆಫ್ರಿಕಾ ಬಳಿಯ ಜಾಂಬಿಯಾದಿಂದ ಬಂದ 63 ವರ್ಷದ ವೃದ್ಧ, ಯುಎಇದಿಂದ ಬಂದಿದ್ದ 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಆರು ಮಂದಿಗೆ ಸೋಂಕಿನ ಲಕ್ಷಣಗಳಿಲ್ಲ. ಒಬ್ಬನಲ್ಲಿ ಅಲ್ಪ ಪ್ರಮಾಣದ ಲಕ್ಷಣಗಳಿವೆ. ಎಲ್ಲಾ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಐಸೋಲೇಷನ್‌ನಲ್ಲಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದಾರೆ.

Covid Vaccine: ರಾಜ್ಯದ ಎಲ್ಲ 1.1 ಕೋಟಿ ಮಧ್ಯ ವಯಸ್ಕರಿಗೆ ಲಸಿಕೆ

9 ಸಂಪರ್ಕಿತರಿಗೆ ಸೋಂಕು:

ಈ ಸೋಂಕಿತರ ಸಂಪರ್ಕ ಹೊಂದಿದ್ದ 28 ಪ್ರಾಥಮಿಕ, 52 ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಸೋಂಕು ಪರೀಕ್ಷೆಗೊಳಪಡಿಸಿದ್ದು, ಒಂಬತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 15 ವರ್ಷದ ಬಾಲಕನನ್ನು ಹೊರತುಪಡಿಸಿ ಸೋಂಕಿತರೆಲ್ಲರೂ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆ ಬಹುತೇಕರಿಗೆ ಸೋಂಕಿನ ಲಕ್ಷಣಗಳಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ವಾರವೇ 24 ಕೇಸ್‌:

ಕಳೆದ ವಾರದಲ್ಲಿ ರಾಜ್ಯದಲ್ಲಿ 18 ಹೊಸ ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ಡಿ.1 ರಿಂದ 18ವರೆಗೂ 14 ಮಂದಿಯಲ್ಲಿ ದೃಢಪಟ್ಟಿತ್ತು. ಆ ಬಳಿಕ ಡಿ.20ರಂದು ಸ್ಥಳೀಯ ಐದು ಮಂದಿ, ಡಿ.23 ರಂದು ವಿದೇಶದಿಂದ ರಾಜ್ಯಕ್ಕೆ ಬಂದ ಒಂಬತ್ತು ಪ್ರಯಾಣಿಕರು ಅವರ ಸಂಪರ್ಕದಲ್ಲಿದ್ದ ಮೂವರನ್ನ ಒಳಗೊಂಡು 12 ಮಂದಿ, ಶನಿವಾರದ ಹೊಸ ಪ್ರಕರಣವೊಂದನ್ನು ಸೇರಿ ಒಂದೇ ವಾರದಲ್ಲಿ 24 ಮಂದಿಯಲ್ಲಿ ಒಮಿಕ್ರೋನ್‌ ಕಾಣಿಸಿಕೊಂಡಿದೆ. ಇನ್ನು ಈವರೆಗೂ ಒಟ್ಟಾರೆ 19 ವಿದೇಶಿ ಪ್ರಯಾಣಿಕರು, 19 ಸ್ಥಳೀಯರನ್ನು ಸೇರಿ 38 ಮಂದಿಗೆ ಈ ರೂಪಾಂತರಿ ಸೋಂಕು ತಗುಲಿದೆ.
 

Latest Videos
Follow Us:
Download App:
  • android
  • ios