Asianet Suvarna News Asianet Suvarna News

Covid 19 Variant: ಒಮಿಕ್ರೋನ್‌ ಭೀತಿ: ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಪ್ರಭಾವಿಗಳು!

*ಖಾಸಗಿ ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಜನರು
*ಲಸಿಕೆ ಸಂಗ್ರಹ ಖಾಲಿ ಮಾಡಲು ಆಸ್ಪತ್ರೆಗಳಿಂದ ಜನರಿಗೆ ಅಕ್ರಮವಾಗಿ ಲಸಿಕೆ ನೀಡಿಕೆ
*ದೇಶದ ಮಹಾನಗರಗಳಲ್ಲಿ ಲಸಿಕೆಯ ಕಾಕ್‌ಟೇಲ್‌ ಪಡೆಯುತ್ತಿರುವ ಪ್ರಭಾವಿಗಳು
*ಸ್ವಯಂವಿವೇಚನೆಯಿಂದ ಲಸಿಕೆ ಪಡೆಯಬೇಡಿ, ಆರೋಗ್ಯಕ್ಕೆ ತೊಂದರೆ: ವೈದ್ಯರ ಎಚ್ಚರಿಕೆ

Covid 19 Variant Omicron Fear many rush to Hospitals to get booster dose vaccine mnj
Author
Bengaluru, First Published Dec 21, 2021, 5:07 AM IST

ಹೈದರಾಬಾದ್‌/ನವದೆಹಲಿ (ಡಿ. 21): ಅತ್ಯಂತ ವೇಗವಾಗಿ ಹಬ್ಬುವ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌ ಪತ್ತೆಯಾಗಿರುವ (Covid 19 New Variant Omicron) ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜನರು ದೇಶದ ವಿವಿಧೆಡೆ ಕಾರ್ಪೊರೆಟ್‌ ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಬೂಸ್ಟರ್‌ ಡೋಸ್‌ (Vaccine Booster Dose) ಪಡೆಯುತ್ತಿರುವ ಪ್ರಕರಣಗಳು ಕಂಡುಬಂದಿವೆ. ಬೂಸ್ಟರ್‌ ಡೋಸ್‌ಗೆ ಸರ್ಕಾರ ಅನುಮತಿ ನೀಡುವ ಮೊದಲೇ ನಡೆಯುತ್ತಿರುವ ಈ ಬೆಳವಣಿಗೆ ಕಳವಳಕ್ಕೆ ಕಾರಣವಾಗಿದೆ.

ಈಗಾಗಲೇ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆದಿದ್ದವರು ಈಗ ಕೋವ್ಯಾಕ್ಸಿನ್‌ನ ಎರಡು ಡೋಸ್‌ ಲಸಿಕೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದವರು ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನ ಉದ್ಯಮಿಯೊಬ್ಬರು ಎರಡು ಡೋಸ್‌ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಪಡೆದ ತರುವಾಯ ಸ್ಪುಟ್ನಿಕ್‌ ಲಸಿಕೆಯ ಒಂದು ಡೋಸ್‌ ಕೂಡ ಪಡೆದುಕೊಂಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ಮೂಲಗಳು ತಿಳಿಸಿದ್ದು, ಅದನ್ನು ವೈದ್ಯರೊಬ್ಬರು ಕೂಡ ಖಚಿತಪಡಿಸಿದ್ದಾರೆ. ಲಸಿಕೆಯ ಕಾಕ್‌ಟೇಲ್‌ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಎರಡೂ ಡೋಸ್‌ ಲಸಿಕೆ ಪಡೆದರೂ ಬೂಸ್ಟರ್‌ ಡೋಸ್‌! 

ರಾಜಕಾರಣಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸರು ಹಾಗೂ ಉದ್ಯಮಿಗಳು ಆಸ್ಪತ್ರೆಗಳ ಮೇಲೆ ಪ್ರಭಾವ ಬೀರಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಲಸಿಕೆಯ ಕಾಲಾವಧಿ ಮುಗಿಯುವುದರೊಳಗೆ ಅದನ್ನು ಖಾಲಿ ಮಾಡಬೇಕು ಎಂಬ ಉದ್ದೇಶದಿಂದ ಅಕ್ರಮವಾಗಿ ಬೂಸ್ಟರ್‌ ಡೋಸ್‌ ನೀಡುತ್ತಿವೆ ಎಂದು ವೈದ್ಯರೇ ಆರೋಪಿಸಿದ್ದಾರೆ.

ಇದನ್ನೂ ಓದಿ: Sensex crashes ದೇಶದಲ್ಲಿ ಓಮಿಕ್ರಾನ್ ಹೆಚ್ಚಳದ ಆತಂಕ, ಸೆನ್ಸೆಕ್ಸ್‌ 1189 ಅಂಕಗಳ ಮಹಾಪತನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಎರಡೂ ಡೋಸ್‌ ಲಸಿಕೆ ಪಡೆದ ಹಲವರು ಬೂಸ್ಟರ್‌ ಡೋಸ್‌ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಈ ನಡುವೆ, ಯಾವುದೇ ರಾಷ್ಟ್ರೀಯ ನೀತಿ ಪ್ರಕಟವಾಗುವ ಮೊದಲೇ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ಪರಿಣಾಮವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಬೂಸ್ಟರ್‌ ಬಗ್ಗೆ ಸಾಕ್ಷ್ಯ ಇಲ್ಲ:

ಒಮಿಕ್ರೋನ್‌ ವಿರುದ್ಧ ಹೋರಾಡಲು ಬೂಸ್ಟರ್‌ ಡೋಸ್‌ ಸಹಾಯ ಮಾಡುತ್ತದೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ವೈಜ್ಞಾನಿಕ ಸಾಕ್ಷ್ಯ ಇಲ್ಲ. ಪ್ರತಿಕಾಯ ಶಕ್ತಿಗಳು ಹೆಚ್ಚಳವಾಗಿಬಿಟ್ಟರೆ ವೈರಸ್‌ ವಿರುದ್ಧ ರಕ್ಷಣೆ ಸಿಗುತ್ತದೆ ಎಂದೂ ಅಲ್ಲ. ತಪ್ಪು ಮಾಹಿತಿ ಹೊಂದಿರುವ ಜನರು ಬೂಸ್ಟರ್‌ ಡೋಸ್‌ ಪಡೆದುಕೊಳ್ಳುತ್ತಿದ್ದಾರೆ. ತಮ್ಮ ಸ್ಟಾಕ್‌ ಖಾಲಿ ಮಾಡಿಕೊಳ್ಳಲು ಆಸ್ಪತ್ರೆಗಳು ಹಾಗೂ ಕಂಪನಿಗಳು ಮುಂದಾಗಿರುವುದರಿಂದ ಈ ಬೆಳವಣಿಗೆ ನಡೆಯುತ್ತಿದೆ ಎಂದು ಏಮ್ಸ್‌ ಆಸ್ಪತ್ರೆಯ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ.ಸಂಜಯ್‌ ರಾಯ್‌ ತಿಳಿಸಿದ್ದಾರೆ.

ಇದನ್ನೂ ಓದಿ: Karnataka omicron case ರಾಜ್ಯದ 6 ಜಿಲ್ಲೆಗಳಿಗೆ ಹರಡಿದ ಓಮಿಕ್ರಾನ್, ಕರ್ನಾಟಕದಲ್ಲಿ ಹೆಚ್ಚಾಯ್ತು ವೈರಸ್ ಭೀತಿ!

ಕೋವಿಡ್‌ ಲಸಿಕೆಯನ್ನು ಅಲ್ಪಾವಧಿಯಲ್ಲಿ ಹೊರತರಲಾಗಿದೆ. ಅದರಿಂದಾಗುವ ದೀರ್ಘ ಪರಿಣಾಮಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ಬೂಸ್ಟರ್‌ ಡೋಸ್‌ ಪ್ರಯೋಜನಕಾರಿ ಎಂಬುದು ದೃಢಪಟ್ಟಬಳಿಕ ಲಸಿಕೆ ಪಡೆಯುವುದು ವಿವೇಕದ ನಡೆ ಎಂದು ಹೈದರಾಬಾದ್‌ನ ವೈದ್ಯ ಡಾ ಪಿ. ರಘು ರಾಮ್‌ ತಿಳಿಸಿದ್ದಾರೆ.

ಮಾಸ್ಕ್‌ ಧರಿಸುವುದು ಮೊದಲ ಹಂತದ ರಕ್ಷಣೆ

ಕೊರೋನಾದ ಯಾವುದೇ ರೂಪಾಂತರಿ ಬರಲಿ. ಸರಿಯಾಗಿ ಮಾಸ್ಕ್‌ ಧರಿಸುವುದು ಮೊದಲ ಹಂತದ ರಕ್ಷಣೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಅನುರಾಗ್‌ ಅಗ್ರಾವಾಲ್‌ ಹೇಳಿದ್ದಾರೆ.ಹೆಚ್ಚು ಜನರು ಸೇರುವ ಸ್ಥಳಗಳಿಂದ ದೂರವಿರುವುದು, ಮಾಸ್ಕ್‌ ಧರಿಸುವುದು ಈ ಹಂತದಲ್ಲಿ ತುಂಬಾ ಮಹತ್ವದ್ದು ಎಂದು ಕೋವಿಡ್‌ ಜೀನೋಮಿಕ್ಸ್‌ ಒಕ್ಕೂಟದ ಉಪಾಧ್ಯಕ್ಷ ಡಾ. ಎನ್‌.ಕೆ. ಅರೋರಾ ತಿಳಿಸಿದ್ದಾರೆ.

Follow Us:
Download App:
  • android
  • ios