ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ 'ಮುರಸು' ಚಂಡಮಾರುತ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ್ದು, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ರಕ್ಷಣೆಗಾಗಿ ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕದಿಂದ 500 ಲೈನ್‌ಮೆನ್‌ಗಳನ್ನು ಆಂಧ್ರಕ್ಕೆ.

Cyclone Murusu hit andhrapradesh: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮುರಸು’ ಚಂಡಮಾರುತ ಇಂದು(ಮಂಗಳವಾರ) ನಸುಕಿನ ಜಾವ ಆಂಧ್ರಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ನೆಲ್ಲೂರು ಮತ್ತು ನರಸಾಪುರದ ನಡುವಿನ ಕರಾವಳಿಗೆ ಅಪ್ಪಳಿಸಿರುವ ಮುರುಸು ಚಂಡಮಾರುತ. ಇದರ ಪರಿಣಾಮವಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಉತ್ತರ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ‘ಮುರಸು’ ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಗಂಟೆಗೆ 22 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಇಂದು ಮುಂಜಾನೆ ಒಂಗೋಲ್ ಬಳಿ ಗಂಟೆಗೆ 100 ರಿಂದ 110 ಕಿ.ಮೀ. ವೇಗದಲ್ಲಿ ಹಾಗೂ ಗರಿಷ್ಠ 120 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಪಲ್ನಾಡು, ತಿರುಪತಿ, ನಂದ್ಯಾಲ, ಗುಂಟೂರು, ಬಾಪಟ್ಲ, ಪ್ರಕಾಶಂ, ನೆಲ್ಲೂರು, ಚಿತ್ತೂರು, ಅನ್ನಮಯ್ಯ, ಕಡಪ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಶಾಲೆ, ವಿಮಾನ ಸೇವೆ ರದ್ದು:

ಚೆನ್ನೈ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದಲೇ ಸತತ ಮಳೆಯಾಗುತ್ತಿದ್ದು, ಮಾಧವರಂನಲ್ಲಿ 11 ಸೆಂ.ಮೀ., ಎನ್ನೋರ್ ಬಂದರು ಹಾಗೂ ನುಂಗಂಬಾಕಂನಲ್ಲಿ ತಲಾ 10 ಸೆಂ.ಮೀ. ಮಳೆ ದಾಖಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಹಲವು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಚೆನ್ನೈ ನಗರಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಗರದ ಹಲವೆಡೆ ನೀರು ತುಂಬಿಕೊಂಡಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ.

ಸೈಕ್ಲೋನ್ ಮುರುಸು ಅಬ್ಬರ: ರಕ್ಷಣೆಗಾಗಿ ಎನ್‌ಡಿಆರ್‌ಎಫ್‌ ತಂಡ:

ಚಂಡಮಾರುತದ ಭೀತಿ ಎದುರಿಸುತ್ತಿರುವ ಆಂಧ್ರಪ್ರದೇಶಕ್ಕೆ ನೆರವಾಗಲು ತಮಿಳುನಾಡಿದ ಅರಕ್ಕೋಣಂನಲ್ಲಿರುವ 4ನೇ ಬೆಟಾಲಿಯನ್‌ನಿಂದ 90 ಸಿಬ್ಬಂದಿಯನ್ನೊಳಗೊಂಡ 3 ಎನ್‌ಡಿಆರ್‌ಎಫ್‌ ತಂಡಗಳನ್ನು ರವಾನಿಸಲಾಗಿದೆ. ಈ ತಂಡಗಳು ಆಂಧ್ರಪ್ರದೇಶದ ನೆಲ್ಲೂರು, ಪ್ರಕಾಶಂ ಮತ್ತು ಮಾರ್ಕಾಪುರ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲಿವೆ. ಅಪಾಯದಲ್ಲಿರುವ ನಾಗರಿಕರನ್ನು ರಕ್ಷಿಸುವುದು, ಬಿದ್ದಿರುವ ಮರ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸುವುದು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಈ ತಂಡಗಳ ಜವಾಬ್ದಾರಿಯಾಗಿದೆ.

500 ಮಂದಿ ಲೈನ್‌ಮೆನ್‌ ಆಂಧ್ರಕ್ಕೆ ಪ್ರಯಾಣ

ಆಂಧ್ರಪ್ರದೇಶದಲ್ಲಿ ಅರ್ನಬ್ ಚಂಡಮಾರುತ ಬೆನ್ನಲ್ಲೇ ಇದೀಗ ಮುರುಸು ಅಪ್ಪಳಿಸಿರುವುದರಿಂದ ಹಾನಿಗೊಳಗಾದ ವಿದ್ಯುತ್ ಪೂರೈಕೆ ಮೂಲಸೌಕರ್ಯ ಮರುಸ್ಥಾಪನೆಗೆ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಚಿದ್ದು, 500 ಮಂದಿ ಕೌಶಲ್ಯಯುತ ಲೈನ್‌ಮೆನ್‌ ಸೇರಿ ಅತ್ಯಾಧುನಿಕ ಉಪಕರಣಗಳುಳ್ಳ ತಂಡ ಕಳುಹಿಸಲಾಗಿದೆ.

ಲೈನ್‌ಮೆನ್‌, ಕ್ರೇನ್, ಅರ್ಥ್ ಆಗರ್‌ ಹೊಂದಿರುವ 15 ಪಾಲ್ಫಿಂಗರ್ ಲಾರಿ, 25 ಟ್ರ್ಯಾಕ್ಟರ್ ಆಧಾರಿತ ಡ್ರಿಲ್ಲಿಂಗ್ ಯಂತ್ರಗಳ ಜತೆಗೆ ಆಪರೇಟರ್‌ ಸಿಬ್ಬಂದಿಯನ್ನೂ ಕಳುಹಿಸಿದ್ದು, ಸೋಮವಾರ ಮಧ್ಯರಾತ್ರಿ ವೇಳೆಗೆ ಆಂಧ್ರಪ್ರದೇಶ ತಲುಪಲಿದ್ದಾರೆ. ಈ ಬಗ್ಗೆ ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಪ್ರತಿ ಎಸ್ಕಾಂಗೆ ಒಬ್ಬ ಸಂಪರ್ಕ ಅಧಿಕಾರಿ ನೇಮಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿದ್ಯುತ್‌ ಮರು ಸ್ಥಾಪನೆಗೆ ನೆರವಾಗುವಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೆರವು ಕೋರಿದ್ದರು. ವಿದ್ಯುತ್ ಅತ್ಯಗತ್ಯ ಸೇವೆಯಾಗಿದ್ದು, ವಿಕೋಪಕ್ಕೆ ಸಿಲುಕಿದ ಜನರ ಕ್ಷೇಮಕ್ಕಾಗಿ ಅದನ್ನು ತಕ್ಷಣ ಮರುಸ್ಥಾಪಿಸುವುದು ತುರ್ತು ಅಗತ್ಯ. ಕಷ್ಟದ ಸಮಯದಲ್ಲಿ ಕರ್ನಾಟಕವು ಆಂಧ್ರಪ್ರದೇಶದ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಅತ್ಯಾಧುನಿಕ ಉಪಕರಣಗಳ ಬಳಕೆಯ ಮೂಲಕ ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿ ವಿದ್ಯುತ್ ಪೂರೈಕೆಯನ್ನು ಶೀಘ್ರವೇ ಪುನರಾರಂಭಿಸುತ್ತೇವೆ ಎಂದು ಹೇಳಿದರು.

10 ತಂಡಗಳ ರವಾನೆ:

ಲೈನ್‌ಮನ್‌ಗಳನ್ನು ತಲಾ 10 ಸದಸ್ಯರ ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಒಬ್ಬ ಕಿರಿಯ ಎಂಜಿನಿಯರ್ ಅಥವಾ ಸಹಾಯಕ ಎಂಜಿನಿಯರ್ ನೇತೃತ್ವ ವಹಿಸುತ್ತಾರೆ. ನಿಯೋಜಿತ ತಂಡಗಳ ಒಟ್ಟಾರೆ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಪ್ರತಿ O&M ವೃತ್ತದಿಂದ ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ನಿಯೋಜಿಸಲಾಗಿದೆ.