ಗಂಟೆಗೆ 150 ಕಿ.ಮೀ. ವೇಗದಲ್ಲಿ ‘ಬಿಪೊರ್‌ಜೊಯ್’ ಚಂಡಮಾರುತದ ಅಬ್ಬರ: ಸಂಜೆ ಅಪ್ಪಳಿಸಲಿದೆ ಡೆಡ್ಲಿ ಸೈಕ್ಲೋನ್
ಗಂಟೆಗೆ ಸುಮಾರು 75 ಕಿ.ಮೀ. ಗಾಳಿ ಬೀಸುತ್ತಿರುವ ಕಾರಣ ಬುಧವಾರವೇ ರಾಜ್ಯದ ಸೌರಾಷ್ಟ್ರ ಹಾಗೂ ಕಛ್ನಲ್ಲಿ ವ್ಯಾಪಕ ಮಳೆ ಸುರಿದಿದೆ. ದೇವಭೂಮಿ ದ್ವಾರಕಾ, ಜಾಮನಗರ, ಪೋರಬಂದರ್ ಹಾಗೂ ರಾಜಕೋಟ್ ಜಿಲ್ಲೆಗಳ 9 ತಾಲೂಕುಗಳು ಕನಿಷ್ಠ 5 ಸೆಂ.ಮೀ.ನಿಂದ ಗರಿಷ್ಠ 12 ಸೆಂ.ಮೀ.ವರೆಗೂ ಮಳೆ ಸುರಿದಿದೆ.
ಅಹಮದಾಬಾದ್ (ಜೂನ್ 15, 2023): ಕಳೆದ ಹಲವು ದಿನಗಳಿಂದ ಭೀತಿ ಸೃಷ್ಟಿಸಿರುವ ‘ಬಿಪೊರ್‌ಜೊಯ್’ ಚಂಡಮಾರುತ ಗುರುವಾರ ಗುಜರಾತ್ನ ಕಛ್ ಜಿಲ್ಲೆಯ ಜಖಾವು ಬಂದರಿಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತ ನಿಯಂತ್ರಿಸುವ ಉದ್ದೇಶದಿಂದ 50 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಗಂಟೆಗೆ ಸುಮಾರು 75 ಕಿ.ಮೀ. ಗಾಳಿ ಬೀಸುತ್ತಿರುವ ಕಾರಣ ಬುಧವಾರವೇ ರಾಜ್ಯದ ಸೌರಾಷ್ಟ್ರ ಹಾಗೂ ಕಛ್ನಲ್ಲಿ ವ್ಯಾಪಕ ಮಳೆ ಸುರಿದಿದೆ. ದೇವಭೂಮಿ ದ್ವಾರಕಾ, ಜಾಮನಗರ, ಪೋರಬಂದರ್ ಹಾಗೂ ರಾಜಕೋಟ್ ಜಿಲ್ಲೆಗಳ 9 ತಾಲೂಕುಗಳು ಕನಿಷ್ಠ 5 ಸೆಂ.ಮೀ.ನಿಂದ ಗರಿಷ್ಠ 12 ಸೆಂ.ಮೀ.ವರೆಗೂ ಮಳೆ ಸುರಿದಿದೆ.
ಇದನ್ನು ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು
‘ಬುಧವಾರ ಕಛ್ನಿಂದ 290 ಕಿ.ಮೀ. ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಅದು ವಾಯವ್ಯ ಭಾಗದತ್ತ ಮುನ್ನುಗ್ಗುತ್ತಿದ್ದು, ಗಂಟೆಗೆ 150 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಗುರುವಾರ ಸಂಜೆ ಜಖಾವು ಬಂದರಿಗೆ ಅಪ್ಪಳಿಸಲಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.
ರಕ್ಷಣಾ ಕಾರ್ಯ ತೀವ್ರಗತಿ:
ಚಂಡಮಾರುತ ಅಬ್ಬರಿಸುತ್ತಿರುವ ಕಾರಣ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಎಲ್ಲ ಸೇನಾಪಡೆಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು. ರಕ್ಷಣೆಗೆ ಧಾವಿಸಬೇಕು’ ಎಂದು ಮೂರೂ ರಕ್ಷಣಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಇದರ ಬೆನ್ನನ್ನೇ ಸೇನೆ, ನೌಕಾಪಡೆ ಹಾಗೂ ಬಿಎಸ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್ ಅಲರ್ಟ್: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ
ಇದೇ ವೇಳೆ, ಗುಜರಾತ್ ಸರ್ಕಾರ ಸತತ 3ನೇ ದಿನವೂ ಕರಾವಳಿಯಿಂದ 10 ಕಿ.ಮೀ. ಅಂತರದಲ್ಲಿನ ಅಪಾಯಕಾರಿ ವಲಯಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿಸಿದೆ. ‘ಬುಧವಾರದವರೆಗೆ 50 ಸಾವಿರ ಜನರನ್ನು ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ 5 ಸಾವಿರ ಜನರನ್ನು ಗುರುವಾರ ಬೆಳಗ್ಗೆಯೊಳಗೆ ಸ್ಥಳಾಂತರಿಸುತ್ತೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
18 ಎನ್‌ಡಿಆರ್‌ಎಫ್ ತಂಡಗಳು, 12 ಎಸ್ಡಿಆರ್ಎಫ್, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡಗಳು, 397 ವಿದ್ಯುತ್ ಇಲಾಖೆಯ ತಂಡಗಳನ್ನು ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಹಲವು ಭಾಗಗಳಲ್ಲಿ ಬಿರುಗಾಳಿ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿ ವಿದ್ಯುತ್ ಇಲಾಖೆ ತಂಡಗಳು ಮರು ವಿದ್ಯುತ್ ಸಂಪರ್ಕಕ್ಕೆ ಶ್ರಮಿಸುತ್ತಿವೆ. ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ವ್ಯತ್ಯಯ ಆಗುವ ಸಾಧ್ಯತೆ ಇದೆ. ಹೀಗಾಗಿ ಸ್ಯಾಟಲೈಟ್ ಫೋನ್ಗಳನ್ನು ರಕ್ಷಣಾ ತಂಡಗಳಿಗೆ ನೀಡಲಾಗಿದೆ.
ಇದನ್ನೂ ಓದಿ: ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್
ಶಾಲೆಗಳು ಹಾಗೂ ಕೆಲವು ಕಟ್ಟಡಗಳಲ್ಲಿ ಆಶ್ರಯ ಶಿಬಿರ ನಿರ್ಮಿಸಲಾಗಿದೆ. ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಜನರ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಿವೆ. ಆಸ್ಪತ್ರೆಗಳಲ್ಲೂ ಸಾಕಷ್ಟು ವೈದ್ಯರನ್ನು ನಿಯೋಜಿಸಲಾಗಿದೆ. ಔಷಧ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ.
ಸಮುದ್ರದ ಉಬ್ಬರ:
ಚಂಡಮಾರುತದ ಕಾರಣ ಸಮುದ್ರ ಪ್ರಕ್ಷುಬ್ಧವಾಗಿದೆ. ಸೌರಾಷ್ಟ್ರ ಹಾಗೂ ಕಛ್ನಲ್ಲಿ 2-3 ಮೀ. ಎತ್ತರದ ಅಲೆಗಳು ಬುಧವಾರ ಏಳುತ್ತಿವೆ. ಗುರುವಾರ 3-6 ಅಡಿ ಎತ್ತರದ ಅಲೆಗಳು ಏಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ
ರಕ್ಷಣೆಗೆ 33 ಎನ್‌ಡಿಆರ್‌ಎಫ್ ತಂಡ
ನವದೆಹಲಿ: ಬಿಪೊರ್‌ಜೊಯ್ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್)ನ 33 ತುಕಡಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪ್ರತಿ ತಂಡವೂ 35 - 40 ಜನರನ್ನು ಒಳಗೊಂಡಿದ್ದು, ಮರ ಕಡಿಯುವ ತಂತ್ರ, ಬೋಟ್, ಔಷಧ, ಪರಿಹಾರ ಸಾಮಗ್ರಿಗಳೊಂದಿಗೆ ಸಜ್ಜಾಗಿವೆ ನಿಂತಿವೆ.
ಹಲವು ರಾಜ್ಯಗಳಲ್ಲಿ ಮಳೆ ಸಂಭವ
ಬಿಪೊರ್‌ಜೊಯ್ ಚಂಡಮಾರುತದ ಪರಿಣಾಮ ಮುಂದಿನ 4 ದಿನಗಳ ಕಾಲ ರಾಜಸ್ಥಾನ, ಪಂಜಾಬ್, ಹರ್ಯಾಣ, ದೆಹಲಿ ಮತ್ತು ಉತ್ತರಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..