ಅಪಘಾತದಲ್ಲಿ ಬಾಲಕ ಸ್ಥಳದಲ್ಲೇ ಸಾವು, ನೆರವಿನ ಬದಲು ಲಾರಿಯಿಂದ ಚೆಲ್ಲಿದ ಮೀನಿಗಾಗಿ ಮುಗಿಬಿದ್ದ ಜನ ವಿಡಿಯೋ ಭಾರತೀಯರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ನೆರವಿನ ಬದಲು ಜನರಿಗೆ ರಸ್ತೆಯಲ್ಲಿ ಬಿದ್ದಿದ್ದ ಫ್ರಿ ಮೀನು ಹೆಚ್ಚಾಯಿತು.
ಪಾಟ್ನ (ಜ.16) ಮಾನವೀಯತೆ ಸತ್ತು ಹೋಗಿದೆ ಎಂದು ಹಲವು ಬಾರಿ ಚರ್ಚೆಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ರಸ್ತೆಯಲ್ಲೇ ಪತಿ ಬಿದ್ಧ ಘಟನೆ ಭಾರಿ ಚರ್ಚೆಯಾಗಿತ್ತು. ಮಧ್ಯರಾತ್ರಿ ಪತ್ನಿ ರಸ್ತೆಯಲ್ಲಿ ನೆರವಾಗಿ ಅಂಗಲಾಚಿದರೂ ಒಂದೇ ಒಂದು ವಾಹನ ನಿಲ್ಲಿಸಿಲ್ಲ. ಪರಿಣಾಮ ಪತಿ ಮೃತಪಟ್ಟ ಘಟನೆ ಹಲವರ ಕಣ್ಣಾಲಿ ತೇವಗೊಳಿಸಿತ್ತು. ಇದೀಗ ಅದಕ್ಕಿಂತ ಭೀಕರ ಘಟನೆಯೊಂದು ನಡೆದಿದೆ. ಅಪಘಾತದಲ್ಲಿ 7ನೇ ತರಗತಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೀನು ತುಂಬಿದ್ದ ಪಿಕ್ ಅಪ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಆದರೆ ಜನರು ಗಂಭೀರವಾಗಿ ಗಾಯಗೊಂಡದ್ದ ಬಾಲಕನನ್ನು ಆಸ್ಪತ್ರೆ ಸಾಗಿಸುವ ಅಥವಾ ಕನಿಷ್ಠ ನೆರವು ನೀಡುವ ಪ್ರಯತ್ನವನ್ನೂ ಮಾಡಿಲ್ಲ. ಜನರು ಲಾರಿಯಿಂದ ಬಿದ್ದ ಮೀನು ಹೆಕ್ಕಲು ಮುಗಿಬಿದ್ದ ಘಟನೆ ಬಿಹಾರದ ಪಪ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಝಾಝಿಹಟ್ ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ಬಾಲಕ ರಿತೇಶ್ ಮೃತ
ಬೆಳಗ್ಗೆ ಕೋಚಿಂಗ್ ಕ್ಲಾಸ್ ತೆರಳಿ ಅಧ್ಯಯನ ಮಾಡಿ ಮನೆಗೆ ಮರಳುತ್ತಿರುವ ವೇಳೆ ಅಫಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ ಮೀನು ತುಂಬಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇನ್ನು ಕೆಲ ದೂರ ಸಾಗಿದರೆ ಮನೆ ಮುಟ್ಟುತ್ತಿತ್ತು. ಅದಕ್ಕೂ ಮೊದಲೇ ಅಪಘಾತ ಸಂಭವಿಸಿದೆ ಝಝಿಹಟ್ ಗ್ರಾಮದ ಸಂತೋಷ್ ದಾಸ್ ಪುತ್ರ ರಿತೇಶ್ ದಾಸ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನ ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ಧಾವಿಸಿದ್ದಾರೆ.
ಪೋಷಕರ ಕಣ್ಮೀರು, ಜನರಿಂದ ಮೀನು ಲೂಟಿ
ಬಾಲಕ ರಿತೇಶ್ ರಸ್ತೆಯಲ್ಲೇ ಬಿದ್ದಿದ್ದಾನೆ. ಆತನಿಗೆ ಏನಾಗಿದೆ ಅನ್ನೋದು ನೋಡಲು ಜನರು ಹೋಗಿಲ್ಲ. ಕನಿಷ್ಠ ಆಸ್ಪತ್ರೆ ದಾಖಲಿಸುವ ಪ್ರಯತ್ನವನ್ನೂ ಮಾಡಿಲ್ಲ. ಒಂದೆಡೆ ರಿತೇಶ್ ದಾಸ್ ಮೃತದೇಹ ರಸ್ತೆಯಲ್ಲೇ ಬಿದ್ದಿದ್ದರೆ, ಇತ್ತ ಪೋಷಕರು ಓಡೋಡಿ ಬಂದು ಮಗನ ಮೃತದೇಹ ಮುಂದೆ ಕಣ್ಣೀರಿಟ್ಟಿದ್ದಾರೆ. ಇತ್ತ ಜನರು ಇದ್ಯಾವುದು ಗಮನಿಸಲೇ ಹೋಗಿಲ್ಲ. ಪಿಕ್ ಅಪ್ ವಾಹನದಿಂದ ರಸ್ತೆ ಮೇಲೆ ಬಿದ್ದ ಮೀನು ಹಿಡಿದು ಚೀಲಕ್ಕೆ ತುಂಬಿಸಿ ಮನೆಗೆ ಕೊಂಡೊಯ್ಯುವಲ್ಲಿ ನಿರತರಾಗಿದ್ದಾರೆ. ಒಂದೆಡೆ ಪೋಷಕರ ಆಕ್ರಂದನ, ಮತ್ತೊಂದೆಡೆ ಜನರಿಂದ ಮೀನು ಲೂಟಿ ವಿಡಿಯೋ ನಿಜಕ್ಕೂ ಕಲ್ಲು ಹೃದಯವನ್ನೂ ಕರಗಿಸುತ್ತೆ. ಆದರೆ ಜನರು ಮಾತ್ರ ತಮ್ಮ ಮೀನು ಲೂಟಿ ಮಾಟಿ ಮನೆಗೆ ಕೊಂಡೊಯ್ಯುವಲ್ಲಿ ಬ್ಯೂಸಿಯಾಗಿದ್ದಾರೆ.
ಅಪಘಾತದ ಬೆನ್ನಲ್ಲೇ ಮೀನಿಗೆ ಮುಗಿಬಿದ್ದ ಜನ
ಅಪಘಾತದ ಬೆನ್ನಲ್ಲೇ ಜನರು ಕನಿಷ್ಠ ಆ್ಯಂಬುಲೆನ್ಸ್‌ಗೆ ಫೋನ್ ಮಾಡುವ, ಅಥವಾ ಇತರ ವಾಹನದಲ್ಲಿ ಗಾಯಗೊಂಡ ಬಾಲಕ ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಿಲ್ಲ. ಕನಿಷ್ಠ ಪೊಲೀಸರಿಗೆ ಫೋನ್ ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ನೇರವಾಗಿ ಜನರು ಪಿಕ್ ವಾಹನದಿಂದ ಬಿದ್ದ ಮೀನು ಹೆಕ್ಕುವಲ್ಲಿ ನಿರತರಾಗಿದ್ದಾರೆ. ಹಲವರು ತಮ್ಮತಮ್ಮೊಳಗೆ ಜಗಳವಾಡುತ್ತಾ ಮೀನು ಕೈಯಲ್ಲಿ ಹಿಡಿದು ಮನೆಗೆ ಓಡುತ್ತಿರುವ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಾಲಕನ ಪಕ್ಕದಲ್ಲೇ ಬಿದ್ದಿದ್ದ ಮೀನುಗಳನ್ನು ಹೆಕ್ಕಿ ತೆಗೆದಿದ್ದಾರೆ. ಆದರೆ ಬಾಲಕನ ಕಡೆ ಕಣ್ಣೆತ್ತಿಯೂ ನೋಡಿಲ್ಲ.
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಭಾರತದ ಹಲವು ಕಡೆ ಇದೇ ರೀತಿಯ ಭಿನ್ನ ಘಟನೆಗಳು ನಡೆದಿದೆ . ಮಾನವೀಯತೆ ಅನ್ನೋದೇ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಾರೆ. ಘಟನೆಯನ್ನು ಖಂಡಿಸುತ್ತಾರೆ. ಆದರೆ ಸ್ಥಳದಲ್ಲಿ ಯಾರೊಬ್ಬರು ನೆರವಿಗೆ ಬರುವುದಿಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.


