ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಟಿಎಎಸ್‌ಎಂಎಸಿ ಕುರಿತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.)ವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. 

ನವದೆಹಲಿ (ಮೇ.23): ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಟಿಎಎಸ್‌ಎಂಎಸಿ ಕುರಿತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.)ವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಇ.ಡಿ.ಯು ಎಲ್ಲಾ ಮಿತಿಗಳನ್ನು ಮೀರುತ್ತಿದೆ, ಒಕ್ಕೂಟ ವ್ಯವಸ್ಥೆಯ ಆಡಳಿತದ ಪರಿಕಲ್ಪನೆಯ ಉಲ್ಲಂಘಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ತಮಿಳನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯ ಮಾರ್ಕೆಟಿಂಗ್‌ ಕಾರ್ಪೊರೇಷನ್‌ (ಟಿಎಎಸ್‌ಎಂಎಸಿ- ಟಾಸ್ಮಾಕ್‌) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಇ.ಡಿ.ಗೆ ನೋಟಿಸ್‌ ಅನ್ನೂ ಜಾರಿ ಮಾಡಿದೆ. ಇದೇ ವೇಳೆ, ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯ್‌ ಮತ್ತು ನ್ಯಾ.ಆಗಸ್ಟಿನ್‌ ಜಾರ್ಜ್‌ ಮಸಿಯ ಅವರ ಪೀಠವು ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜ್‌ ಅವರಿಗೆ, ‘ನಿಮ್ಮ ಇ.ಡಿ.ಯು ಎಲ್ಲಾ ಮಿತಿಗಳನ್ನು ದಾಟುತ್ತಿದೆ’ ಎಂದು ಹೇಳಿ ಟಿಎಎಸ್‌ಎಂಎಸಿ ವಿರುದ್ಧದ ತನಿಖೆಗೆ ತಡೆ ನೀಡಿದೆ.

ಆಗ ಇ.ಡಿ. ಪರ ವಕೀಲರು, ಇದು 1 ಸಾವಿರ ಕೋಟಿ ರು. ಹಗರಣ. ಈ ಪ್ರಕರಣದಲ್ಲಿ ಇ.ಡಿ. ಯಾವುದೇ ಮಿತಿ ದಾಟಿಲ್ಲ ಎಂದು ವಾದಿಸಿದರು. ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್‌, ಅಮಿತ್‌ ನಂದ ತಿವಾರಿ ಅವರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೀಠವು, ‘2014ರಿಂದ ಈವರೆಗೆ ಮದ್ಯದಂಗಡಿ ಪರವಾನಗಿ ಹಂಚಿಕೆಗೆ ಸಂಬಂಧಿಸಿ ರಾಜ್ಯ ಸರ್ಕಾರವೇ 40ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಿಸಿದೆ. ಇದೀಗ ಇ.ಡಿ. ಏಕಾಏಕಿ ಈ ಪ್ರಕರಣದಲ್ಲಿ ಪ್ರವೇಶಿಸಿದ್ದು, ಟಿಎಎಸ್‌ಎಂಎಸಿ ಮೇಲೆ ದಾಳಿ ನಡೆಸಿದೆ. ರಾಜ್ಯಸ್ವಾಮ್ಯದ ಸಂಸ್ಥೆ ಮೇಲೆ ನೀವು ಹೇಗೆ ದಾಳಿ ನಡೆಸಲು ಸಾಧ್ಯ’ ಎಂದು ಪೀಠ ಪ್ರಶ್ನಿಸಿತು.

ಭಾರತ-ಪಾಕ್‌ ಕದನ ವಿರಾಮಕ್ಕೆ ನನ್ನ ಮಧ್ಯಸ್ಥಿಕೆ: 8ನೇ ಬಾರಿ ಹೇಳಿದ ಟ್ರಂಪ್‌

ಬಿಜೆಪಿ ವಿರುದ್ಧ ಡಿಎಂಕೆ ಕಿಡಿ: ಟಿಎಎಸ್‌ಎಂಎಸಿ ಪ್ರಕರಣದ ಇ.ಡಿ. ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವುದು ಬಿಜೆಪಿಗೆ ತೀವ್ರ ಮುಖಭಂಗವುಂಟು ಮಾಡಿದೆ. ಇ.ಡಿ.ಯನ್ನು ಮುಂದಿಟ್ಟುಕೊಂಡು ಡಿಎಂಕೆ ಪಕ್ಷದ ಹೆಸರುಕೆಡಿಸುವುದು ಮತ್ತು ಬ್ಲ್ಯಾಕ್‌ಮೇಲ್‌ ಮಾಡುವ ಬಿಜೆಪಿಯ ಪ್ರಯತ್ನಕ್ಕೆ ಭಾರೀ ಹಿನ್ನಡೆ ಆಗಿದೆ ಎಂದು ಡಿಎಂಕೆಯ ನಾಯಕ ಆರ್‌.ಎಸ್‌. ಭಾರತಿ ತಿಳಿಸಿದ್ದಾರೆ.