ದೇಶದಿಂದ RSS ನಿಷೇಧಿಸಬೇಕು, ಪ್ರಿಯಾಂಕ್‌ಗಿಂತ ಒಂದು ಹೆಜ್ಜೆ ಮುಂದಹೋದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಹದೆಗೆಡಲು ಆರ್‌ಎಸ್ಎಸ್ ಕಾರಣವಾಗಿದೆ. ನನ್ನ ಪ್ರಕಾರ ಆರ್‌ಎಸ್ಎಸ್ ನಿಷೇಧಿಸಬೇಕು ಎಂದಿದ್ದಾರೆ.

ನವದೆಹಲಿ (ಅ.31) ಕರ್ನಾಕಕದಲ್ಲಿ ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸಬೇಕು ಎಂದು ಪತ್ರ ಬರೆದು ಕೋಲಾಹಲವೇ ಸೃಷ್ಟಿಸಿದ್ದಾರೆ. ಈ ಪತ್ರದ ಬೆನ್ನಲ್ಲೇ ಸರ್ಕಾರ ಕೂಡ ಸರ್ಕಾರಿ ಸ್ಥಳ, ಮೈದಾನಗಳಲ್ಲಿ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಚಟುಟಿಕೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಧಾರವಾಡ ಮಧ್ಯಂತರ ತಡೆ ನೀಡಿದೆ. ಈ ವಾದ ವಿವಾದಗಳ ನಡುವೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್ಎಸ್ ದೇಶದಿಂದ ನಿಷೇಧಿಸಬೇಕು ಎಂದಿದ್ದಾರೆ.

ಆರ್‌ಎಸ್ಎಸ್‌ನಿಂದ ದೇಶದ ಕಾನೂನು ಸುವ್ಯವಸ್ಥೆಗೆ ಅಡ್ಡಿ

ಸದ್ಯ ದೇಶದಲ್ಲಿ ವಿಫಲಗೊಂಡಿರುವ ಕಾನೂನು ಸುವ್ಯವಸ್ಥೆಗೆ ಆರ್‌ಎಸ್ಎಸ್ ಹಾಗೂ ಬಿಜೆಪಿ ಕಾರಣವಾಗಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ, ಆರ್‌ಎಸ್ಎಸ್ ಸಂಘಟನೆಯನ್ನುಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸರ್ದಾರ್ ಪಟೇಲ್ 150ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ಸರ್ದಾರ್ ಪಟೇಲ್ ಗೌರವಿಸುತ್ತಿದ್ದರೆ ಆರ್‌ಎಸ್ಎಸ್ ಬ್ಯಾನ್ ಮಾಡಲಿ

ಪ್ರಧಾನಿ ಮೋದಿ ಸರ್ದಾರ್ ಪಟೇಲ್ ಅವರನ್ನು ನಿಜಕ್ಕೂ ಗೌರವಿಸುತ್ತಿದ್ದರೆ ಆರ್‌ಎಸ್ಎಸ್‌ ಬ್ಯಾನ್ ಮಾಡಲಿ. ದೇಶದಲ್ಲಿ ನಡೆಯತ್ತಿರುವ ಎಲ್ಲಾ ಕಾನೂನು ಸುವ್ಯವಸ್ಥೆ ವಿಚಾರ, ಅದರ ವಿಫಲತೆಗೆ ಆರ್‌ಎಸ್ಎಸ್‌ ಹಾಗೂ ಬಿಜೆಪಿ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತದಲ್ಲಿ ಒಗ್ಗಟ್ಟು ಮೂಡಿಸಲು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇಂದಿರಾ ಗಾಂಧಿ ಎಲ್ಲಾ ಪ್ರಯತ್ನ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೇ ವೇಳೆ ಮಹಾತ್ಮಾ ಗಾಂಧಿ ಹತ್ಯೆ ಬಳಿಕ ಸರ್ದಾರ ಪಟೇಲ್ ಅವರು ಶ್ಯಾಮ್ ಪ್ರಸಾದ್ ಮುಖರ್ಜಿಗೆ ಬರೆದ ಪತ್ರ ಉಲ್ಲೇಖಿಸಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯನ್ನು ಆರ್‌ಎಸ್ಎಸ್‌ ಸಂಭ್ರಮಿಸಿದೆ. ಆರ್‌ಎಸ್ಎಸ್‌ ಬ್ಯಾನ್ ಮಾಡಲು ಯಾವುದೇ ಮಾರ್ಗವಿಲ್ಲ, ಆದರೆ ಬ್ಯಾನ್ ಮಾಡದೇ ಇರಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು ಎಂದಿದ್ದಾರೆ. ಸಂಘದ ಸದಸ್ಯರಲ್ಲಿ ಸಂಪೂರ್ಣ ವಿಷವಿದೆ. ಅವರು ಮಹಾತ್ಮಾ ಗಾಂಧಿ ಹತ್ಯೆಯನ್ನು ಸ್ವೀಟ್ ಹಂಚಿ ಸಂಭ್ರಮಿಸಿದ್ದರು ಎಂದಿದ್ದಾರೆ.

ಕರ್ನಾಟಕದಲ್ಲಿ ಆರ್‌ಎಸ್ಎಸ್‌ ವಿವಾದ ಬೆನ್ನಲ್ಲೇ ದೇಶಾದ್ಯಂತ ಇದೀಗ ವಿವಾದ ಜೋರಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಹೊತ್ತಿರುವ ಆರ್‌ಎಸ್ಎಸ್‌ ವಿವಾದ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ದೇಶದಲ್ಲಿ ಇದೀಗ ಆರ್‌ಎಸ್ಎಸ್‌ ಬ್ಯಾನ್ ಚರ್ಚೆ ಆರಂಭಗೊಂಡಿದೆ.