ಚನ್ನಪಟ್ಟಣ ಆರ್‌ಎಸ್ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾಗಿ, ಒಂದೆಡೆ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರುದ್ದ ಮುಗಿಬೀಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಬೆಂಬಲಿಗರು ಗಣವೇಷ ತೊಟ್ಟು ಭಾಗಿಯಾಗಿದ್ದಾರೆ.

ಚನ್ನಪಟ್ಟಣ (ಅ.19) ಕರ್ನಾಟಕದಲ್ಲಿ ಆರ್‌ಎಸ್ಎಸ್ ಹಾಗೂ ಕಾಂಗ್ರೆಸ್ ಸರ್ಕಾರ ನಡುವೆ ಸಂಘರ್ಷ ನಡೆಯುತ್ತಿದೆ. ಆರ್‌ಎಸ್ಎಸ್ 100ನೇ ವಾರ್ಷಿಕೋತ್ಸವ ಸಂದರ್ಭದಲ್ಲೇ ದೇಶಾದ್ಯಂತ ಪಥಸಂಚಲನ ಮೂಲಕ ಆಚರಿಸುತ್ತಿದೆ.ಆದರೆ ಕರ್ನಾಟಕದ ಹಲೆವೆಡೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಸಿಕ್ಕಿಲ್ಲ. ಕೋರ್ಟ್‌ನಲ್ಲಿ ಅರ್ಜಿ, ಮತ್ತೊಂದೆಡೆ ಪಥಸಂಚಲನ ನಡೆಸಿದ ಆರ್‌ಎಸ್‌ಎಸ್ ಕಾರ್ಯಕರ್ತರು ಅರೆಸ್ಟ್ ಘಟನೆಗಳು ನಡೆದಿದೆ. ಇದರ ನಡುವೆ ಚನ್ನಪಟ್ಟಣದಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ಪಥಸಂಚಲನ ನಡೆಸಿದ್ದಾರೆ. ವಿಶೇಷ ಅಂದರೆ ಕಾಂಗ್ರೆಸ್ ಶಾಸಕನ ಆಪ್ತರು, ಬೆಂಬಲಿಗರು ಈ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ.

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕ ಸಿಪಿವೈ ಬೆಂಬಲಿಗರು

ಚನ್ನಪಟ್ಟಣ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಬೆಂಬಲಿಗರು ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಶಾಸಕನ ಆಪ್ತರು, ಬೆಂಬಲಿಗರು ಗಣವೇಷ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ಸಿಪಿ ಯೋಗೇಶ್ವರ್ ಬೆಂಬಲಿಗರಾದ ಐರಿಶ್ ಬಾಬು, ಶರತ್, ಕೂಡ್ಲೂರು ಚಿಕ್ಕಯ್ಯ ಸೇರಿದಂತೆ ಕೆಲ ಮುಖಂಡರು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ನೂರಾರು ಕಾಂಗ್ರೆಸ್ ನಾಯಕ ಸಿಪಿ ಯೋಗೇಶ್ವರ್ ಆಪ್ತರು ಗಣವೇಷ ಧರಿಸಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ.

ಸ್ಥಳೀಯರಿಂದ ಪುಷ್ಪವೃಷ್ಠಿ

ಚನ್ನಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆರಂಭಗೊಳ್ಳುತ್ತಿದ್ದಂತೆ ಸ್ಥಳೀಯರು ಪುಷ್ಪವೃಷ್ಠಿ ಮೂಲಕ ಸ್ವಾಗತಕೋರಿದ್ದಾರೆ. ದಾರಿಯುದ್ದಕ್ಕೂ ಸ್ಥಳೀಯರು ಹೂವಿನ ಮಳೆ ಸುರಿಸಿದ್ದಾರೆ. ಶಿಸ್ತಿನ ಸಿಪಾಯಿಗಳಂತೆ ಆರ್‌ಎಸ್‌ಎಸ್ ಸ್ವಯಂ ಸೇವಕರು ಪಥಸಂಚಲನ ನಡೆಸಿದ್ದಾರೆ.

ಕೋರ್ಟ್ ಮೆಟ್ಟಿಲು ಹತ್ತಿದ ಚಿತ್ತಾಪುರ ಪಥಸಂಚಲನ

ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಪ್ರತಿನಿಧಿಸುವ ಕ್ಷೇತ್ರದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಸ್ವಯಂ ಸೇವಕರು ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್, ಆರ್‌ಎಸ್‌ಎಸ್ ಅರ್ಜಿ ಪರಿಗಣಿಸುಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.ನವೆಂಬರ್ 2ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಕೋರ್ಟ್ ಸೂಚಿಸಿದೆ. ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ಇದೀಗ ರಾಜಕೀಯ ಪ್ರತಿಷ್ಠೆಯಾಗಿ ನಿಂತಿದೆ.

ಸೇಡಂನಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ಅರೆಸ್ಟ್

ಕಲಬುರಗಿಯ ಸೇಡಂನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೇಳಿತ್ತು. ಇದು ಕೂಡ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ಇಲ್ಲೂ ಕೂಡ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿಲ್ಲ. ಪಥಸಂಚಲನ ಸಮಯ ಹತ್ತಿರಬಂದರೂ ಅನುಮತಿ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಆರ್‌ಎಸ್‌ಎಸ್ ಸ್ವಯಂ ಸೇವಕರು ಸೇಡಂನಲ್ಲಿ ಪಥಸಂಚಲನ ಆರಂಭಿಸಿದ್ದರು. ಆದರೆ ಅನುಮತಿ ಇಲ್ಲದ ಕಾರಣ ಪೊಲೀಸರು ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಬಂಧಿಸಿದ್ದಾರೆ. ನೂರಾರು ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ವಿರುದ್ದ ಬಿಜೆಪಿ ಕೆಂಡ

ಸರ್ಕಾರದ ನಡೆ ವಿರುದ್ದ ರಾಜ್ಯ ಬಿಜೆಪಿ ನಾಯಕರು ಕೆರಳಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಣೆ, ಆರ್‌ಎಸ್‌ಎಸ್ ಸ್ವಯಂ ಸೇವಕರ ಬಂಧನಗಳಿಂದ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದಿದ್ದಾರೆ.