ಲಾಠಿ ಹಿಡಿದು RSS ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಚಿತ್ತಾಪುರ ಶಾಂತಿ ಸಭೆಯಲ್ಲಿ ಭೀಮ್ ಆರ್ಮಿ ಗದ್ದಲ ಎಬ್ಬಿಸಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದೆ. ಕಿತ್ತಾಟದಿಂದ ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.
ಚಿತ್ತಾಪುರ (ಅ.28) ಚಿತ್ತಾಪುರದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದೆ. ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆಯಿಂದ ಆರಂಭಗೊಂಡ ಆಕ್ರೋಶ, ಅಸಮಾಧಾನ ಇದೀಗ ಹೆಚ್ಚಾಗುತ್ತಿದೆ. ಆರ್‌ಎಸ್ಎಸ್ ಮನವಿ ಪರಿಗಣಿಸಲು ಕೋರ್ಟ್ ಸೂಚನೆಯಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಹೈಕೋರ್ಟ್ ಸೂಚನೆಯಂತೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸ್ಥಳೀಯ ಜಿಲ್ಲಾಡಳಿತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಚಿತ್ತಾಪುರದಲ್ಲಿ ಆಯೋಜಿಸಿದ ಆರ್‌ಎಸ್ಎಸ್, ಭೀಮ್ ಆರ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಶಾಂತಿ ಸಭೆ ಗದ್ದಲದಲ್ಲಿ ಅಂತ್ಯಗೊಂಡಿದೆ. ಲಾಠಿ ಹಿಡಿದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡುವುದಿಲ್ಲ ಎಂದು ಭೀಮ್ ಆರ್ಮಿ ಸವಾಲು ಹಾಕಿದೆ. ಕೂಗಾಟ, ಹಾರಾಟಗಳ ಮೂಲಕ ಶಾಂತಿಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದೆ.
ಚಿತ್ತಾಪುರ ದಂಗಲ್- ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯ
ಚಿತ್ತಾಪುರದಲ್ಲಿ ಆಯೋಜಿಸಿದ ಶಾಂತಿ ಸಭೆಯಲ್ಲಿ ಆರ್‌ಎಸ್‌ಎಸ್, ಭೀಮ್ ಆರ್ಮಿ ಸೇರಿದಂತೆ 10 ವಿವಿಧ ಸಂಘಟನೆಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಆರ್‌ಎಸ್ಎಸ್ ವಿರುದ್ಧ ಇರುವ ಭೀಮ್ ಆರ್ಮಿ ಸೇರಿದಂತೆ ಇತರ ಸಂಘಟನೆಗಳು ಆರ್‌ಎಸ್ಎಸ್ ಪಥಸಂಚಲನ ಹೇಗಿರಬೇಕು ಎಂದು ರೂಪುರೇಶೆ ಸೂಚಿಸುವ ಮಟ್ಟಿಗೆ ಸಭೆ ತಲುಪಿತ್ತು. ಸಭೆಯಲ್ಲಿ ತೀವ್ರ ಗದ್ದಲ ಸೃಷ್ಟಿಯಾದ ಕಾರಣ ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.
ಆರ್‌ಎಸ್‌ಎಸ್ ನಾಯಕರನ್ನು ಸಭೆಯಿಂದ ಕರೆತಂದ ಪೊಲೀಸ್
ಸಭೆಯಲ್ಲಿ ಭೀಮ್ ಆರ್ಮಿ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ಹೊರಹಾಕಿತ್ತು. ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ಬಿಗುವಿನತ್ತ ತಿರುಗುತ್ತಿದ್ದಂತೆ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಸೇರಿದಂತೆ ಆರೆಸ್ಸೆಸ್ ಮುಖಂಡರನ್ನು ಪೊಲೀಸ್ ಭದ್ರತೆ ನಡುವೆ ಸಭೆಯಿಂದ ಹೊರಗೆ ಕರೆತರಲಾಗಿದೆ. ಭೀಮ್ ಆರ್ಮಿ, ದಲಿತ ಪ್ಯಾಂಥರ್, ಭೀಮ ಸೇನಾ ಸೇರಿದಂತೆ ಉಳಿದ ಎಲ್ಲಾ ಸಂಘಟನೆಯವರು ಒಟ್ಟಾಗಿ ಆರೆಸ್ಸೆಸ್ ವಿರುದ್ದ ದಿಕ್ಕಾರದ ಘೋಷಣೆ ಕೂಗಿದ್ದಾರೆ.
ಲಾಠಿ ಹಿಡಿದು ಪಥಸಂಚಲನಕ್ಕೆ ಅವಕಾಶ ಕೊಡುವುದಿಲ್ಲ
ಲಾಠಿ ಹಿಡಿದು ಪಥಸಂಚಲನಕ್ಕೆ ಆರ್‌ಎಸ್ಎಸ್‌ಗೆ ಅವಕಾಶ ಕೊಡುವುದಿಲ್ಲ ಎಂದು ದಲಿತ ಪ್ಯಾಂಥರ್, ಭೀಮ ಆರ್ಮಿ ಸೇರಿದಂತೆ 8 ಸಂಘಟನೆಗಳ ಮುಖಂಡರ ಬಿಗಿಪಟ್ಟು ಹಿಡಿದಿದ್ದಾರೆ. ಆರ್‌ಎಸ್ಎಸ್ ಸಂಘಟನೆ, ದಲಿತ ನಾಯಕ ಪ್ರಿಯಾಂಕ್ ಖರ್ಗೆ ಟಾರ್ಗೇಟ್ ಮಾಡುತ್ತಿದೆ. ಇದನ್ನು ದಲಿತ ಸಂಘಟನೆಗಳು ವಿರೋಧಿಸುತ್ತಿದೆ. ಚಿತ್ತಾಪುರ ಪಥ ಸಂಚಲನದಲ್ಲಿ ಆರೆಸ್ಸೆಸ್ ರಾಷ್ಟ್ರದ್ವಜ, ಸಂವಿಧಾನ ಪೀಠಿಕೆ ಹಿಡಿದು ಪಥ ಸಂಚಲನ ಮಾಡಲಿ, ನಾವೂ ಬೆಂಬಲಿಸುತ್ತೇವೆ ಎಂದಿದೆ.
