ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಅಜ್ಜಿಯ ನಿಧನದ ಬಗ್ಗೆ ದೆಹಲಿ ಪೊಲೀಸರು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ದೆಹಲಿ ಪೊಲೀಸರು ಘಟನೆಯ ನೈಜ ವಿಡಿಯೋ ಬಿಡುಗಡೆ ಮಾಡುವ ಮೂಲಕ ದೀಪ್ಕೆಯ ಸುಳ್ಳನ್ನು ಬಯಲು ಮಾಡಿದ್ದಾರೆ. ಇದರಿಂದಾಗಿ ನೆಟ್ಟಿಗರು ದೀಪ್ಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೆಹಲಿ: ಕಾಕ್ರೋಚ್ ಜನತಾ ಪಕ್ಷ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಇಂಥವರ ಉದ್ದೇಶವನ್ನು ಮೊದಲೇ ಅರಿತಿದ್ದ ದೆಹಲಿ ಪೊಲೀಸರು, ಪ್ರತಿಯೊಂದು ಘಟನೆಯ ವಿಡಿಯೋ ಮಾಡಿದ್ದು, ಅದನ್ನು ರಿಲೀಸ್ ಮಾಡುವ ಮೂಲಕ ದೀಪ್ಕೆಯ ಆಟಕ್ಕೆ ತೆರೆ ಬೀಳಿಸಿದ್ದಾರೆ. ಸತ್ಯ ಏನು ಎನ್ನುವ ವಿಡಿಯೋ ರಿಲೀಸ್ ಮಾಡಿರುವ ಕಾರಣದಿಂದ ದೀಪ್ಕೆ ಪೋಸ್ಟ್ಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ದೀಪ್ಕೆ ಪೋಸ್ಟ್ನಲ್ಲಿ ಹಾಕಿದ್ದೇನು
ದೆಹಲಿಯ ಜಂತರ್ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಅಭಿಜೀತ್ ದೀಪ್ಕೆ ಅವರ ಅಜ್ಜಿ ತೀರಿಕೊಂಡರು. ಆ ಸಮಯದಲ್ಲಿ ತಮಗೆ ಮಾಹಿತಿಯೇ ನೀಡಲಿಲ್ಲ ಎಂದು ಜನರು ಕಣ್ಣೀರು ಹಾಕುವಂಥ ಪೋಸ್ಟ್ ಒಂದನ್ನು ದೀಪ್ಕೆ ಹಾಕಿಕೊಂಡಿದ್ದಾರೆ. , ತಮ್ಮ ಸೋದರಸಂಬಂಧಿ ಜೊತೆ ಮಾತನಾಡಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಇದರಲ್ಲಿ ಅವರು ಆರೋಪಿಸಿದ್ದಾರೆ. "ನನ್ನ ಅಜ್ಜಿಯೊಂದಿಗೆ ವಾಸಿಸುವ ನನ್ನ ಸೋದರಸಂಬಂಧಿ ಜೊತೆ ಮಾತನಾಡಲು ಅವಕಾಶ ನೀಡುವಂತೆ ನಾನು ವಿನಂತಿಸಿದ್ದೆ. ಕನಿಷ್ಠ ನನ್ನ ಸೋದರಸಂಬಂಧಿಯ ಸಂಖ್ಯೆಯನ್ನು ತೆಗೆದುಕೊಳ್ಳಲು ಕೇವಲ ಒಂದೆರಡು ನಿಮಿಷಗಳ ಕಾಲ ನನ್ನ ಫೋನ್ ಕೇಳಿದ್ದೆ. ದೆಹಲಿ ಪೊಲೀಸರು ನನ್ನ ಫೋನ್ ಬಳಸಲು ಏಕೆ ಬಿಡಲಿಲ್ಲ? ನಾನು ವಕೀಲರೊಂದಿಗೆ ಕರೆ ಮಾಡಲು ಸಹ ಕೇಳಿದ್ದೆ, ಅದನ್ನು ಮತ್ತೆ ನಿರಾಕರಿಸಲಾಯಿತು" ಎಂದು ಅವರು X ನಲ್ಲಿ ಬರೆದಿದ್ದಾರೆ.
ವಿಡಿಯೋ ರಿಲೀಸ್: ಸಿಕ್ಕಿಬಿದ್ದ ದೀಪ್ಕೆ
"ಬೆಳಿಗ್ಗೆ 3:30 ಕ್ಕೆ, ದೆಹಲಿ ಪೊಲೀಸರು ನನ್ನ ತಂದೆಗೆ ಕರೆ ಮಾಡಿ ನಾಳೆ ನಾನು ದೀರ್ಘಕಾಲ ಜೈಲಿಗೆ ಹೋಗುತ್ತೇನೆ ಎಂದು ತಿಳಿಸಲು ಕೇಳಿಕೊಂಡರು. ತಾಯಿಯನ್ನು ಕಳೆದುಕೊಂಡ ಅದೇ ತಂದೆಗೆ ಅವರು ಕರೆ ಮಾಡಿದ್ದರು. ನಾವು ಈಗಾಗಲೇ ನನ್ನ ಅಜ್ಜಿಯನ್ನು ಕಳೆದುಕೊಂಡ ನಂತರ ನೀವು ನನ್ನ ಕುಟುಂಬಕ್ಕೆ ಇನ್ನೂ ಎಷ್ಟು ಆಘಾತವನ್ನುಂಟುಮಾಡಲು ಬಯಸಿದ್ದೀರಿ ಎಂದೆಲ್ಲಾ ಎಕ್ಸ್ನಲ್ಲಿ ಆರೋಪಿಸಿದ್ದಾರೆ. ಆದರೆ ಅಜ್ಜಿ ಸತ್ತ ವಿಷಯವನ್ನು ದೆಹಲಿಯ ಪೊಲೀಸರು ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದ ದೀಪ್ಕೆಗೆ ಎಷ್ಟು ವಿನಮ್ರದಿಂದ ಹೇಳಿದ್ದರು ಎನ್ನುವ ವಿಡಿಯೋ ಅನ್ನು ಪೊಲೀಸರು ರಿಲೀಸ್ ಮಾಡುವ ಮೂಲಕ ದೀಪ್ಕೆಯ ಸುಳ್ಳಿನ ಸರಮಾಲೆಗೆ ಅಂತ್ಯ ಹಾಡಿದ್ದಾರೆ!
ವೈರಲ್ ಆಗಿರೋ ವಿಡಿಯೋದಲ್ಲಿ ಮೊದಲಿಗೆ ಲೇಡಿ ಪೊಲೀಸರು ದೀಪ್ಕೆ ಬಳಿ ಬಂದು ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ. ಬಳಿಕ ಪೊಲೀಸರೇ ಬಂದು ಒಂದು ಸಾವಿನ ಸುದ್ದಿಯನ್ನು ಹೇಗೆ ತಿಳಿಸಬೇಕು ಎನ್ನುವ ನೋವಿನಲ್ಲಿಯೇ ದೀಪ್ಕೆಗೆ ತಿಳಿಸಿದ್ದು, ಅದನ್ನು ಕೇಳಿ ದೀಪ್ಕೆ ಒಂದು ಕ್ಷಣ ವಿಚಲಿತ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ದೀಪ್ಕೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದೇ ಬೇರೆ. ಪೊಲೀಸರು ತಮ್ಮ ವಿರುದ್ಧ ಅನುಚಿತವಾಗಿ ನಡೆಸಿಕೊಂಡರು ಎನ್ನುವುದಾಗಿ ಹೇಳಿ ಈಗ ಸಿಕ್ಕಿಬಿದ್ದಿದ್ದಾರೆ.


