ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!
ಕಾನೂನಾಗುವ ಹಂತಕ್ಕೆ ಐತಿಹಾಸಿಕ ಪೌರತ್ವ ತಿದ್ದುಪಡಿ ಮಸೂದೆ| ಲೋಕಸಭೆಯಲ್ಲಿ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಮಸೂದೆ| ಪೌರತ್ವ ತಿದ್ದುಪಡಿ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆ| ಪೌರತ್ವ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರೋಧ| ಮಸೂದೆ ಬೆಂಬಲಿಸಿ ಮತ ಚಲಾಯಿಸಿದ ಶಿವಸೇನೆ| ಮಸೂದೆ ವಿರೋಧಿಸಿದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಫೆಡರಲ್ ಯುಎಸ್ ಆಯೋಗ| ಮಸೂದೆ ಜಾರಿಯಾದರೆ ಅಮಿತ್ ಶಾ ಮೇಲೆ ನಿರ್ಬಂಧ ಹೇರುವಂತೆ ಅಮೆರಿಕ ಸರ್ಕಾರಕ್ಕೆ ಒತ್ತಾಯ|
ನವದೆಹಲಿ(ಡಿ.10): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ರಾಜ್ಯಸಭೆಯಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ಶತಾಯಗತಾಯ ಕಾನೂನನ್ನಾಗಿ ಮಾಡಲು ಸಜ್ಜಾಗಿರುವ ಕೇಂದ್ರ ಸರ್ಕಾರ, ರಾಜ್ಯಸಭೆಯಲ್ಲೂ ಮಸೂದೆಗೆ ಬೆಂಬಲ ಸಿಗುವ ಭರವಸೆಯಲ್ಲಿದೆ.
ಪೌರತ್ವ ತಿದ್ದುಪಡಿ ಮಸೂದೆಯನ್ವಯ ಭಾರತದಲ್ಲಿ ಆಶ್ರಯ ಪಡೆದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಹಾಗೂ ಜೊರಾಸ್ಟ್ರಿಯನ್ ಸಮುದಾಯದ ಜನರಿಗೆ ಭಾರತದ ನಾಗರಿಕತ್ವ ಸಿಗಲಿದೆ.
ಇದ್ದಕ್ಕಿದ್ದಂತೆ ಅಮಿತ್ ಶಾ ಶಾಕ್, ಬಿಜೆಪಿ ಸಂಸದರಿಗೆ ವಿಪ್!
ಆದರೆ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಕಾಂಗ್ರೆಸ್, ಈ ಮಸೂದೆ ಜಾರಿಯಾದರೆ ಅದು ದೇಶದ ಐತಿಹಾಸಿಕ ತಪ್ಪು ನಿರ್ಧಾರವಾಗಲಿದೆ ಎಂದು ಹರಿಹಾಯ್ದಿದೆ.
ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ಭವಿಷ್ಯದಲ್ಲಿ ದೇಶ ಹಲವು ಸಂಕಟಗಳನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಅಚ್ಚರಿಯೆಂಬಂತೆ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂಸೆಯನ್ನು ಶಿವಸೇನೆ ಬೆಂಬಲಿಸಿದ್ದು, ಶಿವಸೇನೆಯ ಈ ನಡೆ ಕಾಂಗ್ರೆಸ್‌ನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಆದರೆ ಇದೀಗ ಉಲ್ಟಾ ಹೊಡೆದಿರುವ ಶಿವಸೇನೆ, ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅದರಂತೆ ಅಮೆರಿಕದಲ್ಲೂ ಈ ಮಸೂದೆಗೆ ವಿರೋಧ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಫೆಡರಲ್ ಯುಎಸ್ ಆಯೋಗ ಮಸೂದೆಯನ್ನು ಅಪಾಯಕಾರಿ ಎಂದು ಬಣ್ಣಿಸಿದೆ.
ಮಸೂದೆಯನ್ನು ವಿರೋಧಿಸುವಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಯೋಗ, ಒಂದು ವೇಳೆ ಮಸೂದೆ ಜಾರಿಯಾದರೆ ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಅಮೆರಿಕ ಸರ್ಕಾರವನ್ನು ಆಗ್ರಹಿಸಿದೆ.
ಆದರೆ ಇದ್ಯಾವ ಟೀಕೆಗಳಿಗೂ ಕಿವಿಗೊಡದ ಪ್ರಧಾನಿ ಮೋದಿ, ಐತಿಹಾಸಿಕ ಪೌರತ್ವ ತಿದ್ದುಪಡಿ ಮಸೂಸೆಯನ್ನು ಲೋಕಸಭೆಯಲ್ಲಿ ಅಂಗೀಕಾರವಾಗುವಂತೆ ನೋಡಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.
ಒಟ್ಟಿನಲ್ಲಿ ಪರ-ವಿರೋಧ ಚರ್ಚೆಯ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಕಾನೂನಾಗುವ ಹಂತಕ್ಕೆ ತಲುಪಿದ್ದು, ಇದು ಭಾರತದ ಐತಿಹಾಸಿಕ ತಪ್ಪು ನಿರ್ಧಾರವೋ ಅಥವಾ ಐತಿಹಾಸಿಕ ಸರಿ ನಿರ್ಧಾರವೋ ಎಂಬುದನ್ನು ಕಾಲವೇ ಉತ್ತರಿಸಲಿದೆ.