ಒಕ್ಕಲಿಗ ನಾಯಕತ್ವದಿಂದ ದೇವೇಗೌಡ ನಿರ್ಗಮಿಸಲಿ: ಸಿ.ಪಿ.ಯೋಗೇಶ್ವರ್
ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾರ್ಥಕ್ಕೆ ಚನ್ನಪಟ್ಟಣ ಜನ ಪಾಠ ಕಲಿಸಿದ್ದಾರೆ. ಫಲಿತಾಂಶದ ಮೂಲಕ ಒಕ್ಕಲಿಗ ಮತದಾರರು ದೇವೇಗೌಡರ ಕುಟುಂಬದಿಂದ ಒಕ್ಕಲಿಗ ನಾಯಕತ್ವ ಕಿತ್ತುಕೊಂಡಿದ್ದಾರೆ.
ಬೆಂಗಳೂರು (ನ.24): ‘ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾರ್ಥಕ್ಕೆ ಚನ್ನಪಟ್ಟಣ ಜನ ಪಾಠ ಕಲಿಸಿದ್ದಾರೆ. ಫಲಿತಾಂಶದ ಮೂಲಕ ಒಕ್ಕಲಿಗ ಮತದಾರರು ದೇವೇಗೌಡರ ಕುಟುಂಬದಿಂದ ಒಕ್ಕಲಿಗ ನಾಯಕತ್ವ ಕಿತ್ತುಕೊಂಡಿದ್ದಾರೆ. ಇನ್ನು ದೇವೇಗೌಡರು ಒಕ್ಕಲಿಗ ನಾಯಕತ್ವದಿಂದ ಗೌರವಯುತವಾಗಿ ನಿರ್ಗಮಿಸಬೇಕು’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಮುಂದೆ ಒಕ್ಕಲಿಗರ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಬೇಕು. ಡಿ.ಕೆ.ಶಿವಕುಮಾರ್ ಅವರು ವಹಿಸಿಕೊಳ್ಳುತ್ತಾರಾ ಎಂಬುದನ್ನು ನೋಡಬೇಕು. ನಾವು ಅವರ ಜತೆ ಇದ್ದೇವೆ ಎನ್ನುವ ಮೂಲಕ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಜೆಡಿಎಸ್‌ಗೆ ಅಸ್ತಿತ್ವದ ಚುನಾವಣೆಯಾಗಿತ್ತು. ತಮ್ಮ ಅಸ್ತಿತ್ವಕ್ಕಾಗಿ ದೇವೇಗೌಡರು ತಮ್ಮ ಮೊಮ್ಮಗ, ಕುಮಾರಸ್ವಾಮಿ ಅವರು ತಮ್ಮ ಮಗನನ್ನೇ ಪಣವಾಗಿಟ್ಟರು. ನಿಖಿಲ್ ಸೋಲುವ ಮುಖಾಂತರ ಆ ಪಕ್ಷ ಅಂತಿಮ ದಿನಗಳಿಗೆ ಹತ್ತಿರವಾಗಿದೆ. ದೇವೇಗೌಡರು ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ದೈತ್ಯ ಶಕ್ತಿಯಾಗಿದ್ದ ದೇವೇಗೌಡರಲ್ಲಿ ಪ್ರಕೃತಿ ಸಹಜವಾಗಿ ವಯಸ್ಸಾದಂತೆ ಈಗ ಶಕ್ತಿಯಿಲ್ಲ. ಹೀಗಾಗಿ ಗೌರವಯುತವಾಗಿ ದೇವೇಗೌಡರು ನಿರ್ಗಮಿಸಿ ವಿಶ್ರಾಂತಿ ಪಡೆಯಲಿ ಎಂದು ಹೇಳಿದರು.
ಕುಮಾರಸ್ವಾಮಿ ಒಕ್ಕಲಿಗರನ್ನು ಮುಗಿಸುವ ನಾಯಕ: ಇನ್ನು ಕುಮಾರಸ್ವಾಮಿ ಒಬ್ಬ ಸ್ವಾರ್ಥಿ. ಅವರ ಸರಿಸಮಾನ ನಾಯಕರನ್ನು ಮುಗಿಸುವ ನಾಯಕ. ಚಲುವರಾಯಸ್ವಾಮಿ, ಬಾಲಕೃಷ್ಣ ಹೀಗೆ ಯಾರನ್ನೂ ಸಹಿಸಲಿಲ್ಲ. ನನಗೆ ಎಲ್ಲರೂ ಹೇಳುತ್ತಿದ್ದರೂ ಈಗ ಅವರ ಜತೆ ಒಡನಾಡುವವರೆಗೆ ನನಗೆ ಅವರ ಬುದ್ಧಿ ಗೊತ್ತಾಗಲಿಲ್ಲ. ಅವರನ್ನು ನಂಬಿದ ಬಹಳಷ್ಟು ಒಕ್ಕಲಿಗರನ್ನು ಮುಗಿಸಿದ್ದರು. ಆರು ತಿಂಗಳಲ್ಲಿ ನನಗೂ ಪಾಠ ಕಲಿಸಿದರು. ನಾನು ಬಚಾವಾಗಿ ಹೊರಬಂದು ಜನರ ಬೆಂಬಲದಿಂದ ಪುನಃ ರಾಜಕೀಯ ಜೀವನ ಕಂಡುಕೊಂಡಿದ್ದೇನೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ 3 ಕ್ಷೇತ್ರದ ಸೋಲು ನನ್ನ ಹೊಣೆ: ವಿಜಯೇಂದ್ರ
ತಂದೆ ವಿರುದ್ಧದ ಸೋಲಿನ ಸೇಡನ್ನು ಮಗನ ವಿರುದ್ಧ ತೀರಿಸಿಕೊಂಡ ಯೋಗೇಶ್ವರ್: ಚನ್ನಪಟ್ಟಣ ಕ್ಷೇತ್ರದ ಮಟ್ಟಿಗೆ ಸಿ.ಪಿ.ಯೋಗೇಶ್ವರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ನಡುವಿನ ನಾಲ್ಕನೇ ಸೆಣಸಾಟವಿದು. ಇಬ್ಬರೂ ಎರಡು ಬಾರಿ ಗೆಲುವು ಕಂಡಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು, 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಇದೀಗ ಉಪಚುನಾವಣೆಯಲ್ಲಿ ಎಚ್‌ಡಿಕೆ ಪುತ್ರ ನಿಖಿಲ್ ವಿರುದ್ಧ ಗೆದ್ದು ಯೋಗೇಶ್ವರ್ ಎಚ್‌ಡಿಕೆ ವಿರುದ್ಧದ ಎರಡು ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.