ಪ್ಯಾಕ್ ಮಾಡುವ ಮುನ್ನ ಐಸ್ ಕ್ರೀಂ ರುಚಿ ನೋಡುತ್ತಿದ್ದ ವಿಡಿಯೋ ವೈರಲ್ ಆದ ಬಳಿಕ ಕೇರಳದ ಕೊಡುವಳ್ಳಿಯ ಐಸ್ ಕ್ರೀಂ ಅಂಗಡಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಮತ್ತು ಉತ್ಪನ್ನ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ತಿರುವನಂತಪುರ: ಪ್ಯಾಕೇಡ್ ಆಹಾರ ಶುದ್ಧವಾಗಿರುತ್ತದೆ ಎಂದು ಎಲ್ಲರೂ ನಂಬಿರುತ್ತಾರೆ. ಆದ್ರೆ ಐಸ್‌ ಕ್ರೀಂ ಮಾರಾಟಗಾರ ಪ್ಯಾಕ್ ಮಾಡುವ ಮುನ್ನ ರುಚಿ ನೋಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಅಹಾರ ಇಲಾಖೆ ಅಧಿಕಾರಿಗಳು ಅಂಗಡಿ ಬೀಗ ಜಡಿದು ಮಾಲೀಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆ ಕೇರಳದ ಕೊಡುವಳ್ಳಿ ಬಳಿಯ ಕಿಝಕ್ಕೋತು ಪಂಚಾಯತ್ ವ್ಯಾಪ್ತಿಯ ಎಲೆಟ್ವಿಲ್ ವಟ್ಟೋಲಿಯಲ್ಲಿರುವ 'ಐಸ್ ಮಿ' ಹೆಸರಿನ ಅಂಗಡಿಯಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ಕೋಝಿಕ್ಕೋಡ್ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಐಸ್ ಕ್ರೀಂ ತಯಾರಕ ರಶೀದ್ ಎಂಬಾತ ಪ್ಯಾಕ್ ಮಾಡುವ ಮುನ್ನ ರುಚಿ ನೋಡುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿ ಅನೀಸ್ ರೆಹಮಾನ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಪಿ.ಎಂ.ವಿನೋದ್ ಐಸ್ ಕ್ರೀಂ ಅಂಗಡಿ ಮೇಲೆ ದಾಳಿ ನಡೆಸಿ ಬೀಗ ಹಾಕಿದ್ದಾರೆ. ವಿಡಿಯೋ ಆಧರಿಸಿ ಮತ್ತು ಐಸ್ ಕ್ರೀಂ ತಯಾರಕರ ಹೇಳಿಕೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಇಲ್ಲಿಯ ಐಸ್‌ ಕ್ರೀಂ ಮಾದರಿಯನ್ನು ಸಂಗ್ರಹಿಸಿ ಕೋಝಿಕ್ಕೋಡ್‌ನ ಮಲಪ್ಪರಂಬದ ಪ್ರಾದೇಶಿಕ ವಿಶ್ಲೇಷಣಾತ್ಮಕ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. 

ಸದ್ಯ ಐಸ್ ಮಿ ಅಂಗಡಿಯ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮಕ್ಕಾಗಿ ಪ್ರಾಥಮಿಕ ವರದಿಯನ್ನು ಸಹಾಯಕ ಆಹಾರ ಸುರಕ್ಷತಾ ಆಯುಕ್ತರಿಗೆ ವರದಿಯನ್ನು ಸಲ್ಲಿಸಲಾಗಿದೆ. ಅಂಗಡಿಯ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ತಯಾರಕರು ಅದು ಕುಟುಂಬದ ಬಳಕೆಗಾಗಿ ತಯಾರಿಸಲಾಗುತ್ತಿತ್ತು ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ ಎಂದು ಅಧಿಕಾರಿ ರೆಹಮಾನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜ್ಞಾನವ್ಯಾಪಿ ಮಸೀದಿಯೊಳಗೆ ಶಿವಲಿಂಗ, ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ನೋಟಿಸ್ ಶಾಕ್!

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಿರಿಯ ಆರೋಗ್ಯ ನಿರ್ವಾಹಕ ವಿನೋದ್, ಐಸ್ ತಯಾರಿಕೆ ಘಟಕ ಹಲವು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರೋದು ಸಹ ಗಮನಕ್ಕೆ ಬಂದಿದೆ. ಆದರೆ ತಯಾರಕರು ಈ ರೀತಿ ಮಾಡಿದ್ದೇಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

ಇಲ್ಲಿಯ ಘಟಕದಿಂದ ಸಂಗ್ರಹಿಸಲಾದ ಐಸ್‌ ಕ್ರೀಂ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಇದೊಂದು ಸಣ್ಣ ಘಟನೆಯಾದ್ರೂ ಆಹಾರ ಉತ್ಪದನಾ ಘಟಕಗಳಲ್ಲಿನ ನೈರ್ಮಲ್ಯ ಮಾನದಂಡಗಳನ್ನು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟು ಹಾಕಿದೆ. ಯಾವುದೇ ಆಹಾರ ಘಟಕವಾದ್ರೂ ಅಲ್ಲಿ ನೈರ್ಮಲ್ಯಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋತಿ ಬಿದ್ದ ರಭಸಕ್ಕೆ ಮುರಿದ ಕಾರಿನ ಸನ್‌ರೂಫ್: ವೀಡಿಯೋ ವೈರಲ್

Scroll to load tweet…