3 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಅಪಪ್ರಚಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳಿಗೆ ಗೆಲುವು ಸಿಕ್ಕಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ನ.24): ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ. ವಿರೋಧ ಪಕ್ಷಗಳ ಸುಳ್ಳು, ಟೀಕೆ, ಅಪಪ್ರಚಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳಿಗೆ ಗೆಲುವು ಸಿಕ್ಕಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶವು ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿವೆ. ಈ ಬಗ್ಗೆ ಹಿಂದೆಯೇ ಹೇಳಿದ್ದೆ. ಫಲಿತಾಂಶ ಸರ್ಕಾರದ ಪರವಾಗಿ ಬಂದಿದೆ. ಇನ್ನಾದರೂ ವಿರೋಧ ಪಕ್ಷಗಳು ಟೀಕೆ, ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ಕಾರ್ಯಕರ್ತರು-ಶಾಸಕರ ಪರಿಶ್ರಮ ಕಾರಣ. ಇಲ್ಲಿ ನಾನು ಮತ್ತು ಸಿದ್ದರಾಮಯ್ಯ ಅವರಷ್ಟೇ ಮುಖ್ಯವಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದ್ದರ ಫಲ ದೊರೆತಿದೆ ಎಂದರು. ಉಪಚುನಾವಣೆಗಳು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ನಡೆದಿದೆ. ಮೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಬೀತಾಗಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ-ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಜನರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಪರಿಶುದ್ಧ ಆಡಳಿತಕ್ಕೆ ಜನರು ಬೆಂಬಲ ನೀಡಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿ ಐತಿಹಾಸಿಕ ಜಯಭೇರಿ: ಎನ್‌ಡಿಎ ಮಹಾರಾಜ
‘ಎಚ್‌ಡಿಕೆ ನಿರ್ಮಾಪಕ ಆದ್ರೆ ಯೋಗೇಶ್ವರ್ ಕಲೆಗಾರ’: ಚನ್ನಪಟ್ಟಣ ಉಪಚುನಾವಣೆ ಮತದಾನದ ನಂತರ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸೋಲಿನ ಬಗ್ಗೆ ಮಾತನಾಡಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಯೋಗೇಶ್ವರ್ ಚಲನಚಿತ್ರ ನಟ, ಕಲೆಗಾರ. ಅವರು ಯಾವ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತಾರೆ. ಅದು ಅವರ ಟ್ರಿಕ್ ಆಗಿದೆ. ಅವರು ಸೋಲುವುದಾಗಿ ಎಲ್ಲಿಯೂ ಹೇಳಿಲ್ಲ. ಕುಮಾರಸ್ವಾಮಿ ನಿರ್ಮಾಪಕರಾದರೆ, ಯೋಗೇಶ್ವರ್ ನಟ. ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ ಎಂದರು.
ನಿಖಿಲ್, ಭರತ್ ಸೋಲಲ್ಲ: ಚನ್ನಪಟ್ಟಣದ ಫಲಿತಾಂಶ ನಿಖಿಲ್ ಕುಮಾರಸ್ವಾಮಿ ಸೋಲು ಎಂದು ಹೇಳುವುದಿಲ್ಲ. ಅದು ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಮಾಡಿದ ಕೆಲಸಗಳಿಗೆ ಜನರು ನೀಡಿರುವ ತೀರ್ಪಾಗಿದೆ. ಹಾಗೆಯೇ, ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಮಾಡಿದ ಕೆಲಸದಿಂದಾಗಿ ಭರತ್ ಬೊಮ್ಮಾಯಿ ಸೋತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
2 ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ: ನಿಖಿಲ್ ಕುಮಾರಸ್ವಾಮಿ
ಜನರ ಸಾಲ ತೀರಿಸುತ್ತೇವೆ: ಮಾಧ್ಯಮಗಳಲ್ಲಿ ಸರ್ಕಾರಕ್ಕೆ ಮುಖಭಂಗ ಎಂದು ಹೇಳಲಾಗಿತ್ತು. ಆದರೆ, ಫಲಿತಾಂಶ ಅದನ್ನು ಬದಲಿಸಿದೆ. ಜನರು ನಮಗೆ ಗೆಲುವಿನ ಸಾಲ ನೀಡಿದ್ದಾರೆ. ಅದನ್ನು ಜವಾಬ್ದಾರಿಯುತ ಆಡಳಿತ ನೀಡುವ ಮೂಲಕ ತೀರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಒಗ್ಗಟ್ಟನ್ನು ಮುಂದುವರಿಸಿಕೊಂಡು ಜನರ ಸೇವೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಜನರು ಭಾವನೆ ಮೇಲಿನ ರಾಜಕಾರಣವನ್ನು ತಿರಸ್ಕರಿಸಿ, ಬದುಕಿನ ಮೇಲಿನ ರಾಜಕಾರಣಕ್ಕೆ ಒತ್ತು ನೀಡಿರುವ ಸಂದೇಶ ನೀಡಿದ್ದಾರೆ. ಅಲ್ಲದೆ, ಈ ಚುನಾವಣೆಯು 2028ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು.