ರಾಮನಗರದಲ್ಲಿ ಜೆಡಿಎಸ್ ವಾಶ್‌ಔಟ್: ಹೊಸ ದಾಖಲೆ ಬರೆದ ಕಾಂಗ್ರೆಸ್
ರೇಷ್ಮೆನಾಡಿನಲ್ಲಿ ಜೆಡಿಎಸ್ ಅನ್ನು ಕ್ಲೀನ್ ಸ್ವೀಪ್ ಮಾಡಿರುವ ಕಾಂಗ್ರೆಸ್ ಪಕ್ಷ ರಾಮನಗರ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದೆ. ದಳಪತಿಗಳ ಪಾಲಿಗೆ ದಶಕಗಳಿಂದಲೂ ರಾಮನಗರ ಜಿಲ್ಲೆ ಜೆಡಿಎಸ್ ನ ಭದ್ರಕೋಟೆಯಾಗಿಯೇ ಉಳಿದಿತ್ತು.
ರಾಮನಗರ (ನ.24): ರೇಷ್ಮೆನಾಡಿನಲ್ಲಿ ಜೆಡಿಎಸ್ ಅನ್ನು ಕ್ಲೀನ್ ಸ್ವೀಪ್ ಮಾಡಿರುವ ಕಾಂಗ್ರೆಸ್ ಪಕ್ಷ ರಾಮನಗರ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದೆ. ದಳಪತಿಗಳ ಪಾಲಿಗೆ ದಶಕಗಳಿಂದಲೂ ರಾಮನಗರ ಜಿಲ್ಲೆ ಜೆಡಿಎಸ್ ನ ಭದ್ರಕೋಟೆಯಾಗಿಯೇ ಉಳಿದಿತ್ತು. ಆದರೀಗ ಕೈ ಪಾಳಯ ಹಂತಹಂತವಾಗಿ ಜೆಡಿಎಸ್ ಭದ್ರಕೋಟೆಯನ್ನು ಚಿದ್ರಗೊಳಿಸಿ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ. 2013ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ -3 ಮತ್ತು ಕಾಂಗ್ರೆಸ್ - 1 ಕ್ಷೇತ್ರವನ್ನು ಗೆದ್ದಿತ್ತು. 2018ರ ಚುನಾವಣೆಯಲ್ಲಿ ಜೆಡಿಎಸ್ - 2, ಕಾಂಗ್ರೆಸ್ -1 ಹಾಗೂ ಸಮಾಜವಾದಿ ಪಕ್ಷ -1 ಸ್ಥಾನ ಗೆದ್ದಿತ್ತು. ಆಗ ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್ ದೊಡ್ಡ ಪಕ್ಷವಾಗಿ ಹೊರ ಹುಮ್ಮಿತ್ತು.
ಹೊಸ ದಾಖಲೆ ಬರೆದ ಕೈ ಪಾಳಯ: 2023ರ ಸಾರ್ವತ್ರಿಕ ಚುನಾವಣೆಯಲ್ಲಿ 4 ಕ್ಷೇತ್ರಗಳ ಪೈಕಿ ಕಾಂಗ್ರೆಸ್ - 3, ಜೆಡಿಎಸ್ - 1 ಕ್ಷೇತ್ರದಲ್ಲಿ ಮಾತ್ರ ಗೆಲವು ಕಂಡಿತ್ತು. ಈಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಹೊಸ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದೆ. 1972ರಿಂದ 2004ರವರೆಗೆ ಜಿಲ್ಲೆಯಲ್ಲಿ ಸಾತನೂರು ಸೇರಿ 5 ವಿಧಾನಸಭಾ ಕ್ಷೇತ್ರಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ 2008ರಲ್ಲಿ ಸಾತನೂರು ಕ್ಷೇತ್ರವನ್ನು ಕೈ ಬಿಟ್ಟ ನಂತರ 4 ವಿಧಾನಸಭಾ ಕ್ಷೇತ್ರಗಳು ಮಾತ್ರ ಉಳಿದುಕೊಂಡಿದ್ದವು. ಜಿಲ್ಲೆಯಲ್ಲಿ 5 ಮತ್ತು 4 ಕ್ಷೇತ್ರಗಳಿದ್ದಾಗ ಯಾವುದೇ ಒಂದು ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಉದಾಹರಣೆ ಇರಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ 2 ಅಥವಾ 3 ಸ್ಥಾನಗಳು ಒಲಿಯುತ್ತಿದ್ದವು.
ಮಹಾರಾಷ್ಟ್ರದಲ್ಲಿ ಐತಿಹಾಸಿಕ ಜಯಭೇರಿ: ಎನ್‌ಡಿಎ ಮಹಾರಾಜ
ಆದರೆ, ಈ ಬಾರಿಯ ಚನ್ನಪಟ್ಟಣ ಉಪಚುನಾವಣೆ ಮೂಲಕ ಕಾಂಗ್ರೆಸ್ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಅಲ್ಲದೆ, ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲವು ಕಂಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 2023ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆಲವು ಸಾಧಿಸಿದ್ದ ಜೆಡಿಎಸ್ ಕುಮಾರಸ್ವಾಮಿ 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕೇಂದ್ರ ಸಚಿವರಾದರು. ಅವರಿಂದಾಗಿ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (1,12,642 ) ಎದುರು 25,413 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಮೂರಂಕಿ ದಾಟದ 23 ಅಭ್ಯರ್ಥಿಗಳು: ಇನ್ನು ಎಸ್ ಡಿಪಿಐ ಅಭ್ಯರ್ಥಿ ಮಹಮ್ಮದ್ ಫಾಜಿಲ್ - 957, ಪ್ರಜಾಕೀಯ ಪಕ್ಷದ ಎಸ್ .ಅಭಿಷೇಕ್ - 437, ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜು - 2352, ಜಿ.ಟಿ.ಪ್ರಕಾಶ್ 1649 , ಜಯಮಾಲಾ - 320, ಸೈಯದ್ ಆಸಿಫ್ ಬುಕಾರಿ - 161 ಮತಗಳು ಲಭಿಸಿದರೆ, ನೋಟಾಗೆ 427 ಮತಗಳು ಬಿದ್ದಿವೆ. ಉಳಿದಂತೆ 23 ಅಭ್ಯರ್ಥಿಗಳ ಮತಗಳು ಮೂರಂಕಿ ದಾಟಿಲ್ಲ. ಇನ್ನು 473 ಪೋಸ್ಟಲ್ ಬ್ಯಾಲೆಟ್ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಯೋಗೇಶ್ವರ್ ಗೆ 254, ನಿಖಿಲ್ ಕುಮಾರಸ್ವಾಮಿಗೆ 198 ಮತಗಳು ಲಭಿಸಿವೆ. 12 ಮತಗಳು ತಿರಸ್ಕೃತಗೊಂಡಿದ್ದರೆ, 1 ಮತ ನೋಟಾ ಪಾಲಾಗಿದೆ.
ಕಾಂಗ್ರೆಸ್ ಗೆಲುವಿಗೆ ಕಾರಣಗಳು
1.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳು, ಶಾಸಕರು ಬಿಡುವಿಲ್ಲದೆ ಪ್ರಚಾರ ನಡೆಸಿದರು.
2.ಚನ್ನಪಟ್ಟಣ ಕ್ಷೇತ್ರದಲ್ಲಿ 2 ಬಾರಿ ಸೋಲಿನ ಸಿಂಪತಿ, ಮನೆ ಮಗ (ಸ್ಥಳೀಯ), ಸ್ವಾಭಿಮಾನ ಎಂದು ಕಾರ್ಡ್ ಪ್ಲೇ ಮಾಡಿದ್ದು ವರ್ಕ್ ಔಟ್ ಆಯಿತು.
3.ಯೋಗೇಶ್ವರ್ ಶಾಸಕ ಹಾಗೂ ಸಚಿವರಾಗಿದ್ದಾಗ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದವು.
4.ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳಾದ (ಅಹಿಂದ) ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ ಮತಗಳು ಯೋಗೇಶ್ವರ್ ಪರ ಒಲವು ತೋರಿರುವುದು.
5.ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದರಿಂದ ಉಪಚುನಾವಣೆ ಎದುರಿಸಲು ಹೆಚ್ಚಿನ ಬಲ ತಂದುಕೊಟ್ಟಿತು.
2 ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಸೋಲಿಗೆ ಕಾರಣಗಳು
1.ತಾತ ದೇವೇಗೌಡ, ಅಪ್ಪ ಕುಮಾರಸ್ವಾಮಿ, ಅಮ್ಮ ಅನಿತಾ ಹಾಗೂ ದೋಸ್ತಿ ನಾಯಕರ ಪ್ರಚಾರದ ಹೊರತಾಗಿಯೂ ಮತದಾರರು ಕೈ ಕೊಟ್ಟರು. ಒಕ್ಕಲಿಗ ಸಮುದಾಯದ ಮತಗಳನ್ನೇ ಹೆಚ್ಚಾಗಿ ನಂಬಿಕೊಂಡಿದ್ದು.
2. ಮಂಡ್ಯ ಸಂಸತ್ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸೋತರೂ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಸಿಗಲಿಲ್ಲ ಸಿಂಪತಿ.
3.ಮಾಜಿ ಸಂಸದ ಡಿ.ಕೆ.ಸುರೇಶ್, ವಸತಿ ಸಚಿವ ಜಮೀರ್ ಅಹಮದ್ ಖಾನ್ ಆಡಿದ ಲಘು ಮಾತುಗಳು ಜನರ ಮೇಲೆ ಪರಿಣಾಮ ಬೀರುವಂತೆ ಮಾಡಿ ಮತಗಳನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ದಳಪತಿಗಳು ಎಡವಿದರು.
4.ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಜೆಡಿಎಸ್ ವಿರುದ್ಧ ಒಂದಾದ ಅಹಿಂದ ವರ್ಗ ಕಾಂಗ್ರೆಸ್ ಬೆಂಬಲಿಸಿತು. ಅಲ್ಲದೆ, ಜೆಡಿಎಸ್ ನ ಕುಟುಂಬ ರಾಜಕಾರಣವನ್ನು ನಿರಾಕರಿಸಿ ಸ್ಥಳೀಯ ಸ್ವಾಭಿಮಾನಕ್ಕೆ ಮತದಾರರು ಮಣೆ ಹಾಕಿದರು.
5.ಯೋಗೇಶ್ವರ್ ಗೆದ್ದರೆ ಜಿಲ್ಲೆಯವರಾದ ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಹಾದಿ ಸುಗಮವಾಗಲಿದೆ. ಜೊತೆಗೆ ಚುನಾವಣೆ ಸಂದರ್ಭದಲ್ಲಷ್ಟೇ ಕ್ಷೇತ್ರಕ್ಕೆ ಬರುವ ಜೆಡಿಎಸ್ ನಾಯಕರು ಜನರ ಕಷ್ಟ - ಸುಖ ಕೇಳಲ್ಲ ಎಂದು ಕಾಂಗ್ರೆಸ್ಸಿಗರು ಪ್ರಚಾರ ಮಾಡಿದರು.