ಕೂಲಿ ಕೆಲಸ ಮಾಡುತ್ತಲೇ ಹೈ ಸ್ಕೋರ್‌ನೊಂದಿಗೆ ನೀಟ್ ಪಾಸಾದ ಯುವಕ
ಯಾವುದೇ ತರಬೇತಿ ಸವಲತ್ತುಗಳಿಲ್ಲದೆ 21 ವರ್ಷದ ಸರ್ಫ್‌ರಾಜ್ ನೀಟ್ ಪರೀಕ್ಷೆಯಲ್ಲಿ 720ಕ್ಕೆ 677 ಅಂಕ ಗಳಿಸಿದ್ದಾರೆ. ದಿನಗೂಲಿ ಕೆಲಸ ಮಾಡುತ್ತಿದ್ದ ಸರ್ಫ್‌ರಾಜ್ ಈಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿದ್ದಾರೆ. ಅವರ ಸ್ಪೂರ್ತಿ ನೀಡುವ ಕತೆ ಇಲ್ಲಿದೆ.
ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡುವ ನೀಟ್ ಪರೀಕ್ಷೆಯನ್ನು ಪಾಸು ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ನೀಟ್‌ನಲ್ಲಿ ತೇಗರ್ಡೆ ಹೊಂದುವುದಕ್ಕಾಗಿ ಅನೇಕ ವಿದ್ಯಾರ್ಥಿಗಳು ರಾತ್ರಿ ಹಗಲೆನ್ನದೇ ಓದುತ್ತಾರೆ, ಅಧ್ಯಯನದಲ್ಲಿ ತೊಡಗುತ್ತಾರೆ, ಮಕ್ಕಳು ಈ ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡಲಿ ಎಂದು ಪೋಷಕರು ಕೂಡ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಕ್ಕಳಿಗೆ ಕೋಚಿಂಗ್ ಟ್ಯೂಷನ್ ಅಂತ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಆದರೂ ಕೂಡ ಅನೇಕ ಮಕ್ಕಳಿಗೆ ಈ ಪರೀಕ್ಷೆಯನ್ನು ಪಾಸು ಮಾಡುವುದು ಕಷ್ಟ ಎನಿಸುತ್ತದೆ. ಅಲ್ಲದೇ ಓದು ಹಾಗೂ ಪರೀಕ್ಷೆ ಹಾಗೂ ಪೋಷಕರ ಒತ್ತಡಕ್ಕೆ ಸಿಲುಕಿ ಮಕ್ಕಳು ಸಾವಿನ ದಾರಿ ಹಿಡಿದಂತಹ ಹಲವು ಬೇಸರದ ಘಟನೆಗಳು ನಡೆದಿವೆ.
ಹೀಗಿರುವಾಗ ಯಾವುದೇ ಸವಲತ್ತುಗಳಿಲ್ಲದ 21 ವರ್ಷದ ತರುಣನೋರ್ವ ನೀಟ್ ಪರೀಕ್ಷೆಯನ್ನು ಅತ್ಯುನ್ನತ ಸ್ಕೋರ್‌ನೊಂದಿಗೆ ಪಾಸ್ ಮಾಡಿದ್ದು, ಇಚ್ಚಾಶಕ್ತಿ , ಬುದ್ಧಿವಂತಿಕೆಗೆ ಹಾಗೂ ಸಾಧಿಸಬೇಕೆನ್ನುವ ಹಠದ ಪರಿಣಾಮಕ್ಕೆ ಸಾಕ್ಷಿಯಾಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಸರ್ಫ್‌ರಾಜ್ ಎಂಬ 21 ವರ್ಷದ ತರುಣನೇ ಈ ಸಾಧನೆ ಮಾಡಿದ ಯುವಕ. ಈತ ಯಾವುದೇ ತರಬೇತಿ ಸವಲತ್ತುಗಳಿಲ್ಲದೇ 2024ರ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 677 ಅಂಕ ಗಳಿಸುವ ಮೂಲಕ ಟ್ಯೂಷನ್ ಪಡೆದ ವಿದ್ಯಾರ್ಥಿಯೂ ದಾಖಲಿಸದಂತಹ ಅತ್ಯುನ್ನತ ಸ್ಕೋರ್ ದಾಖಲಿಸಿದ್ದಾನೆ. ಈತನ ಸಾಧನೆ ನೀಟ್ ಪರೀಕ್ಷೆ ಪಾಸು ಮಾಡಿ ವೈದ್ಯಕೀಯ ವೃತ್ತಿ ಮಾಡಬೇಕು ಎಂದು ಬಯಸುವ ಅನೇಕ ಸಾಮಾನ್ಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.
ಈತನ ಈ ಸಾಧನೆಯ ಸ್ಟೋರಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ 'ಫಿಸಿಕ್ಸ್ ವಾಲಾ'ದ ಫೌಂಡರ್ ಆಗಿರುವ ಅಲ್ಖಾ ಪಾಂಡೆ ಎಂಬುವವರು ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಪಶ್ಚಿಮ ಬಂಗಾಳದ ಪುಟ್ಟ ಗ್ರಾಮವೊಂದರಿಂದ ಬಂದ ಸರ್ಫರಾಜ್ ಕತೆ ಕಠಿಣ ಪರಿಶ್ರಮದಿಂದ ಮೇಲೆ ಬಂದ ಸ್ಪೂರ್ತಿಯ ಕತೆಯಾಗಿದೆ. ದಿನಕ್ಕೆ 300 ರೂಪಾಯಿ ಸಂಬಳಕ್ಕೆ 400 ಇಟ್ಟಿಗೆಗಳನ್ನು ಹೊರುತ್ತ ದಿನಗೂಲಿ ಕೆಲಸ ಮಾಡುತ್ತಿದ್ದಲ್ಲಿಂದ ಆರಂಭವಾಗಿ ಕೋಲ್ಕತ್ತಾದ ನೀಲ್ ರತನ್ ಸಿರ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್‌ಗೆ ದಾಖಲಾಗುವವರೆಗೆ ಈತನ ಪ್ರಯಾಣವೂ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗೆ ಸಾಕ್ಷಿಯಾಗಿದೆ.
ವೈದ್ಯನಾಗುವ ಗುರಿ ಹೊಂದಿದ್ದ ಸಾಮಾನ್ಯ ಹುಡುಗ ಸರ್ಫರಾಜ್ ಮುಂದೆ ಸಾಕಷ್ಟು ಸವಾಲುಗಳಿದ್ದವು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಪುಟ್ಟ ಮನೆಯಲ್ಲಿ ವಾಸ ಮಾಡ್ತಿದ್ದ ಸರ್ಫರಾಜ್ ತನ್ನ ಕನಸನ್ನು ನನಸಾಗಿಸುವುದರ ಜೊತೆ ಜೊತೆಗೆ ಕುಟುಂಬದ ನಿರ್ವಹಣೆಗೆ ತಂದೆಗೆ ನೆರವಾಗಲು ದುಡಿಮೆಯನ್ನು ಮಾಡುತ್ತಿದ್ದರು. ಸರ್ಫರಾಜ್ ಅವರ ಆ ಕಷ್ಟದ ದಿನಗಳನ್ನು ಅವರ ತಾಯಿ ಮಾಧ್ಯಮಗಳ ಮುಂದೆ ಹೇಳಿಕೊಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ತರಗುಟ್ಟುವ ಚಳಿಯ ರಾತ್ರಿಗಳಲ್ಲಿ ಮನೆಯ ಟೆರೇಸ್ ಮೇಲೆ ಓದುತ್ತಿದ್ದ ಆತನ ಪಕ್ಕದಲ್ಲಿ ಕುಳಿತುಕೊಂಡು ಮಗನಿಗೆ ಶೀತದ ವಾತಾವರಣದಿಂದ ಅನಾರೋಗ್ಯ ಆಗದಂತೆ ಕುಳಿತ ದಿನಗಳನ್ನು ಅವರು ನೆನದಿದ್ದಾರೆ.
ಇಷ್ಟೊಂದು ಕಷ್ಟಪಟ್ಟು ವೈದ್ಯನಾಗಬೇಕಾ ಇಷ್ಟೊಂದು ಓದಿದ ನಂತರವೂ ಆತ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಕುಹಕದ ಮಾತುಗಳ ಹೊರತಾಗಿಯೂ ಸರ್ಫ್‌ರಾಜ್ ತಮ್ಮ ವೈದ್ಯನಾಗುವ ಗುರಿಯನ್ನು ಹಿಂದೆ ಬಿಡಲಿಲ್ಲ. ಕೋವಿಡ್ ಸಮಯದಲ್ಲಿ ಸರ್ಫರಾಜ್ ಅವರ ವೈದ್ಯನಾಗುವ ಕನಸಿಗೆ ತಿರುವು ಸಿಕ್ಕಿತ್ತು, ಸರ್ಕಾರ ನೀಡಿದ ಹಣಕಾಸಿನ ಸಹಾಯದಿಂದ ಸ್ಮಾರ್ಟ್‌ಫೋನೊಂದನ್ನು ಖರೀದಿಸಿಸ ಸರ್ಫರಾಜ್ ಯೂಟ್ಯೂಬ್‌ನಲ್ಲಿ ಫಿಸಿಕ್ಸ್ ವಾಲಾದ ಉಚಿತ ಪಾಠಗಳನ್ನು ಕೇಳುತ್ತಾ ಸ್ವಂತವಾಗಿ ಅಧ್ಯಯನ ಮಾಡಲು ಶುರು ಮಾಡಿದ್ದರು. ಪರಿಣಾಮ ಇಂದು ಅವರು ನೀಟ್ ಪರೀಕ್ಷೆಯನ್ನು ಅತ್ಯುನ್ನತ ದರ್ಜೆಯಲ್ಲಿ ಪಾಸ್ ಮಾಡಿದ್ದಾರೆ.
2023ರಲ್ಲಿ ಸರ್ಫರಾಜ್ ಅವರು ದಂತ ವೈದ್ಯಕೀಯ ಕೋರ್ಸ್‌ಗೆ ಸೇರಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅವರು ಕೋರ್ಸನ್ನು ಮಧ್ಯದಲ್ಲೇ ಬಿಡಬೇಕಾಯ್ತು, ನಂತರ 2024ರಲ್ಲಿ ಮತ್ತೆ ನೀಟ್ ಪರೀಕ್ಷೆ ಬರೆದ ಸರ್ಫರಾಜ್ ಜನ ಮೆಚ್ಚುವ ಸಾಧನೆ ಮಾಡಿದ್ದಾರೆ. ಸರ್ಫರಾಜ್ ಅವರ ಈ ಸಾಧನೆಯನ್ನು ಮೆಚ್ಚಿದ ಅಲ್ಕಾ ಪಾಂಡೆ ಆತನಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಆತನಿಗೆ ಹೊಸದಾದ ಫೋನೊಂದನ್ನು ಕೊಡುಗೆಯಾಗಿ ನೀಡಿದ್ದಾರೆ ಜೊತೆಗೆ ಆತನ ಕಾಲೇಜು ಶಿಕ್ಷಣಕ್ಕಾಗಿ 5 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಆದರೆ ಈ ಐದು ಲಕ್ಷ ರೂಪಾಯಿ ಉಡುಗೊರೆ ಅಲ್ಲ, ಇದೊಂದು ಲೋನ್ ಆಗಿದ್ದು, ಇದನ್ನು ಭವಿಷ್ಯದಲ್ಲಿ ಇಂತಹದ್ದೇ ಮತ್ತೊಬ್ಬ ಸರ್ಫರಾಜ್‌ಗೆ ಸಹಾಯ ಮಾಡುವ ಮೂಲಕ ತೀರಿಸಬೇಕಿದೆ.