Hawk Force inspector martyred: ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹಾಕ್ ಫೋರ್ಸ್‌ನ ಇನ್ಸ್‌ಪೆಕ್ಟರ್  2 ಬಾರಿ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಅಶೀಶ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹಾಕ್ ಫೋರ್ಸ್‌ನ ಇನ್ಸ್‌ಪೆಕ್ಟರ್ ಹುತಾತ್ಮ

ಛತ್ತೀಸ್‌ಗಢದಲ್ಲಿ ಮಾವೋವಾದಿ ನಕ್ಸಲರ ನಿರ್ಮೂಲನೆ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈಗಾಗಲೇ ಹಲವು ಪ್ರಮುಖ ನಕ್ಸಲ್ ನಾಯಕರ ತಲೆಗಳನ್ನು ಭದ್ರತಾಪಡೆಗಳು ನೆಲಕ್ಕುರುಳಿಸಿವೆ. ಇದೇ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ವಿರೋಧಿ ಘಟಕ ಹಾಕ್ ಪೋರ್ಸ್‌ನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಹುತಾತ್ಮರಾಗಿದ್ದಾರೆ. ನಕ್ಸಲ್ ವಿರೋಧಿ ಘಟಕ ಹಾಕ್ ಪೋರ್ಸ್‌ನಲ್ಲಿ ಇನ್ಸ್‌ಪೆಕ್ಟರ್ ಅಶೀಶ್ ಶರ್ಮಾ ಅವರು ನಕ್ಸಲರು ಹಾಗೂ ಭದ್ರತಾ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ. ಮಧ್ಯಪ್ರದೇಶ ಛತ್ತೀಸ್‌ಗಢ ಮಹಾರಾಷ್ಟ್ರ ಮೂರು ರಾಜ್ಯಗಳ ಗಡಿಯನ್ನು ಹೊಂದಿರುವ ಟ್ರೈ ಜಂಕ್ಷನ್‌ನಲ್ಲಿ ಇಂದು ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಆಶೀಶ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.

ಎರಡು ಬಾರಿ ಶೌರ್ಯ ಪದಕ ಪಡೆದಿರುವ 40 ವರ್ಷದ ಅಧಿಕಾರಿ ಅಶೀಶ್ ಶರ್ಮಾ

ಎರಡು ಬಾರಿ ಶೌರ್ಯ ಪದಕ ಪಡೆದಿರುವ ಮತ್ತು ತಮ್ಮ ಧೈರ್ಯಶಾಲಿ ಕಾರ್ಯಾಚರಣೆಗಳಿಂದಾಗಿ ಭಧ್ರತಾ ಪಡೆಗಳಾದ್ಯಂತ ಹೆಸರುವಾಸಿಯಾಗಿರುವ 40 ವರ್ಷದ ಅಧಿಕಾರಿ ಇನ್ಸ್‌ಪೆಕ್ಟರ್ ಅಶೀಶ್ ಶರ್ಮಾ ಅವರು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ಪೊಲೀಸರ ಜಂಟಿ ತಂಡವನ್ನು ಮುನ್ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಛತ್ತೀಸ್‌ಗಢ ಭಾಗದಲ್ಲಿ ಆಳವಾಗಿ ಕಾರ್ಯನಿರ್ವಹಿಸುತ್ತಿರುವ ಭಾರೀ ಶಸ್ತ್ರಸಜ್ಜಿತ ಮಾವೋವಾದಿಗಳ ವಿರುದ್ಧ ನಡೆದ ಗುಂಡಿನ ಚಕಮಕಿ ವೇಳೆ ಅಶೀಶ್ ಅವರ ತೊಡೆ ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡುಗಳು ಹೊಕ್ಕಿದ್ದು, ಅವರು ಕರ್ತವ್ಯದ ವೇಳೆಯೇ ಪ್ರಾಣ ಬಿಟ್ಟಿದ್ದಾರೆ.

ಮುಂಜಾನೆ 8.30ರ ಸುಮಾರಿಗೆ ನಡೆದ ತೀವ್ರ ಗುಂಡಿನ ಚಕಮಕಿ:

ಬೆಳಿಗ್ಗೆ 8.30 ರ ಸುಮಾರಿಗೆ, ನಕ್ಸಲ್ ವಿರೋಧಿ ಕಾರ್ಯಾಚರಣೆಯ ತಂಡವು ದಟ್ಟವಾದ ಕಾಡಿನ ಮಧ್ಯೆ ಮುನ್ನಡೆಯುತ್ತಿದ್ದಂತೆ, ಇದ್ದಕ್ಕಿದ್ದಂತೆ ಗುಂಡಿನ ಚಕಮಕಿ ನಡೆಯಿತು. ಇನ್ಸ್‌ಪೆಕ್ಟರ್ ಶರ್ಮಾ ಎಂದಿನಂತೆ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದು, ತಮ್ಮ ತಂಡವು ಸರಿಯಾದ ಸ್ಥಾನದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವಾಗ ಹಲವು ಗುಂಡೇಟುಗಳು ಅವರ ದೇಹ ಸೇರಿತ್ತು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್‌ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಅವರನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರಾದರು ಅವರು ಬದುಕುಳಿಯಲಿಲ್ಲ.

ತೀವ್ರ ರಕ್ತಸ್ರಾವದಿಂದ ಆಶೀಶ್ ಶರ್ಮಾ ನಿಧನ

ನಾವು ಅವರನ್ನು ಸೂಪರ್ ಸ್ಪೆಷಾಲಿಟಿ ಕೇಂದ್ರಕ್ಕೆ ಸ್ಥಳಾಂತರಿಸಲು ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೆವು. ಆದರೆ ಅವರನ್ನು ವಿಮಾನದಲ್ಲಿ ಕರೆದೊಯ್ಯುವ ಮೊದಲೇ ಅವರು ತೀವ್ರ ಗಾಯಗಳಿಂದಾಗಿ ಸಾವನ್ನಪ್ಪಿದರು ಎಂದು ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವಿಶೇಷ ಮಹಾನಿರ್ದೇಶಕ ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ನಕ್ಸಲೈಟ್‌ ಕಡೆಗೂ ಸಾವುನೋವುಗಳು ಸಂಭವಿಸಿವೆಆದರೆ ಕಾರ್ಯಾಚರಣೆ ಮುಗಿದ ನಂತರವೇ ನಿಖರ ಅಂಕಿಅಂಶಗಳು ತಿಳಿಯಲಿವೆ ಎಂದು ಅವರು ಹೇಳಿದ್ದಾರೆ.

ಇನ್ಸ್‌ಪೆಕ್ಟರ್ ಶರ್ಮಾ ಹಾಕ್ ಪೋರ್ಸ್‌ನ ಅತ್ಯಂತ ನಿರ್ಭೀತ ಅಧಿಕಾರಿ

ಇನ್ಸ್‌ಪೆಕ್ಟರ್ ಶರ್ಮಾ ಬಾಲಘಾಟ್ ಜಿಲ್ಲೆಯಲ್ಲಿ ಹಾಕ್ ಫೋರ್ಸ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದರು. ಈ ಹಾಕ್ ಪೋರ್ಸ್‌ನ ಅತ್ಯಂತ ನಿರ್ಭೀತ ಅಧಿಕಾರಿಗಳಲ್ಲಿ ಒಬ್ಬರೆಂದು ಅವರು ಪರಿಗಣಿಸಲ್ಪಟ್ಟಿದ್ದರು. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ರೌಂಡಾ ಕಾಡುಗಳಲ್ಲಿ ಮೂವರು ಕಟ್ಟರ್ ಮಹಿಳಾ ಮಾವೋವಾದಿಗಳನ್ನು ತಟಸ್ಥಗೊಳಿಸಿದ ಕಾರ್ಯಾಚರಣೆಯನ್ನು ಅವರು ಮುನ್ನಡೆದ್ದರು. ಇದಾದ ನಂತರ ಅವರಿಗೆ ಸರದಿಯಲ್ಲಿ ಬಡ್ತಿ ನೀಡಲಾಗಿತ್ತು. ಈ ಕಾರ್ಯಾಚರಣೆಯ ನಂತರ ಪಡೆಯೊಳಗೆ ಅವರ ಸಾಧನೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅಶೀಶ್ ಶರ್ಮಾ ಅವರು ಸದಾ ಮುಂದೆ ನಿಂತು ಸಹೋದ್ಯೋಗಿಗಳನ್ನು ಮುನ್ನಡೆಸುವ ಅತ್ಯಂತ ಬದ್ಧತೆಯ ಅಧಿಕಾರಿ ಎಂದು ಅವರ ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫೋಟೋಗ್ರಾಫರ್‌ಗೆ ಹೊಡೆದ ವರ: ಮದುವೆ ನಿಲ್ಲಿಸಿದ ವಧು

ಇದನ್ನೂ ಓದಿ: 89ರ ಇಳಿವಯಸ್ಸಲ್ಲಿ ಜೊತೆಯಾಗಿ ಸಾವಿಗೆ ಶರಣಾದ ಖ್ಯಾತ ಸೆಲೆಬ್ರಿಟಿ ಅವಳಿಗಳು