ಕಸೌಲಿಗೆ ಪ್ರವಾಸ ತೆರಳಿದ್ದ ನಾಲ್ವರು ಮಹಿಳೆಯರು ಆನ್ಲೈನ್ ಮೂಲಕ ಬುಕ್ ಮಾಡಿದ್ದ ವಿಲ್ಲಾದಿಂದ ದಿಢೀರ್ ಹೊರಹಾಕಲ್ಪಟ್ಟಿದ್ದರು. ಈ ಅನ್ಯಾಯದ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ಅವರಿಗೆ ನ್ಯಾಯ ಸಿಕ್ಕಿದೆ. ಟ್ರಾವೆಲ್ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಕೋರ್ಟ್ ಬರೋಬ್ಬರಿ 1.4 ಲಕ್ಷ ರೂ. ದಂಡ ವಿಧಿಸಿದೆ.
ಗೊತ್ತಿಲ್ಲದ ಊರುಗಳಿಗೆ ನಾವು ಪ್ರವಾಸಕ್ಕೆ ಹೋದಾಗ ಒಂದೆಲ್ಲ ಒಂದು ವಿಚಾರದಲ್ಲಿ ಲಾಕ್ ಆಗಿಬಿಡ್ತೀವಿ. ವಸತಿ ವಿಚಾರ ಆಗಬಹುದು, ಭಾಷೆ ಸಮಸ್ಯೆ ಸೇರಿದಂತೆ ಇನ್ನಿತರೆ ವಿಚಾರದಲ್ಲಿ ಆಗಿರಬಹುದು. ಅದನ್ನೇ ಕೆಲವು ಸ್ಥಳೀಯರು ದುರುಪಯೋಗ ಪಡಿಸಿಕೊಂಡು ನಮ್ಮನ್ನ ಸುಲಿಗೆ ಮಾಡೋದು, ಕಿರುಕುಳ ನೀಡಿರುವ ಅನೇಕ ಪ್ರಕರಣಗಳು ಕಣ್ಮುಂದೆ ಇವೆ. ಅಂತೆಯೇ ಚಂಡೀಗಡದಲ್ಲಿ ವಿಶೇಷ ಪ್ರಕರಣ ಒಂದರಲ್ಲಿ ಕೋರ್ಟ್, 15 ಸಾವಿರ ಪರಿಹಾರದ ಬದಲಾಗಿದೆ ಬರೋಬ್ಬರಿ 1.4 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಆದೇಶಿಸಿದೆ.
ಏನಿದು ಪ್ರಕರಣ?
ಪ್ರಕರಣ ಮೇ 5, 2024ರಲ್ಲಿ ನಡೆದಿರೋದು! 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಲ್ವರು ಮಹಿಳೆ ಟ್ರಿಪ್ ಪ್ಲಾನ್ ಮಾಡಿದ್ದರು. ಕಸೌಲಿಗೆ ಒಂದು ದಿನದ ಟ್ರಿಪ್ ಪ್ಲಾನ್ ಮಾಡಿ ಆನ್ಲೈನ್ ಟ್ರಾವೆಲ್ ಪ್ಲಾಟ್ಫಾರ್ಮ್ ಮೂಲಕ 3 ಬಿಎಚ್ಕೆ ವಿಲ್ಲಾ ಬುಕ್ ಮಾಡಿದ್ದರು. 21 ಸಾವಿರ ರೂಪಾಯಿ ಪಾವತಿ ಮಾಡಿ ಬುಕ್ ಮಾಡಿದ್ದರು. ಬೆನ್ನಲ್ಲೇ ಟ್ರಾವೆಲ್ ಸಂಸ್ಥೆ ಬುಕಿಂಗ್ ದೃಢಿಕರಿಸಿ ಎಸ್ಎಂಎಸ್ ಮತ್ತು ಮೇಲ್ ಮೂಲಕ ಖಾತರಿಗೊಳಿಸಿತ್ತು.
ಅಂತೆಯೇ ಮಹಿಳೆಯರು ಕಸೌಲಿಗೆ ತಲುಪಿ ವಿಲ್ಲಾಗೆ ಚೆಕ್-ಇನ್ ಆಗಿದ್ದರು. ಎಂಟ್ರಿಯಾದ ಮೂರೇ ಗಂಟೆಯಲ್ಲಿ ಟ್ರಾವೆಲ್ ಪ್ಲಾಟ್ಫಾರ್ಮ್ ಸಂಸ್ ಬುಕಿಂಗ್ ರದ್ದುಗೊಳಿಸಿದೆ ಎಂದು ತಿಳಿಸಿದೆ. ಕೂಡಲ ವಿಲ್ಲಾ ಖಾಲಿ ಮಾಡುವಂತೆ ಮಹಿಳೆಯರಿಗೆ ಕೇಳಿಕೊಂಡು ಅವರನ್ನು ಹೊರದಬ್ಬಿತ್ತು. ಪರಿಣಾಮ ಸಂಜೆ ವೇಳೆಗೆ ಮಹಿಳೆಯರು ಗತಿ ಇಲ್ಲದೇ ಚಂಡೀಗಡಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಮೋಸಕ್ಕೆ ಒಳಗಾದ ಮಹಿಳೆಯರು 'ನ್ಯಾಯ ಕೊಡಿ' ಎಂದು ಚಂಡೀಗಢ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ಆಯೋಗದ ಅಧ್ಯಕ್ಷ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ರಾಜೇಶ್ ಕುಮಾರ್ ಆರ್ಯ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಮೋಸ ಮಾಡಿದ್ದ ಸಂಸ್ಥೆಯು ನಾವು ಕೇವಲ ಮಧ್ಯವರ್ತಿಗಳು, ಹೋಟೆಲ್ನಲ್ಲಿ ನಡೆಯುವ ಘಟನೆಗಳಿಗೆ ನಾವು ಜವಾಬ್ದಾರರಲ್ಲ ಎಂದು ವಾದಿಸಿತ್ತು. ಆದರೆ ಆಯೋಗವು ಈ ವಾದವನ್ನು ತಿರಸ್ಕರಿಸಿ.. ದೃಢೀಕರಿಸಲ್ಪಟ್ಟ ಬುಕಿಂಗ್ ಅನ್ನು ಸಂಸ್ಥೆಯೇ ರದ್ದುಗೊಳಿಸಿದೆ. ಅದನ್ನು ಗ್ರಾಹಕರಿಗೆ ಮುಂಚಿತವಾಗಿ ತಿಳಿಸಿಲ್ಲ ಎಂಬುದುನ್ನ ಖಾತರಿಪಡಿಸಿಕೊಂಡಿತು. ಜೊತೆಗೆ ನೆಮ್ಮದಿ ಮತ್ತು ವಿಶ್ರಾಂತಿಗಾಗಿ ಕೈಗೊಂಡ ಪ್ರವಾಸವು ಆತಂಕ, ಅವಮಾನ ಮತ್ತು ಕಿರಿಕಿರಿಗೆ ಕಾರಣವಾಗಿದೆ. ಖುಷಿಯ ಕ್ಷಣದ ಪ್ರವಾಸವು ಹಿಂಸೆಯಾಗಿ ಬದಲಾಗಿದೆ. ಪ್ರವಾಸದ ಉದ್ದೇಶವೇ ಇಲ್ಲಿ ಹಾಳಾಗಿದೆ ಎಂಬುದನ್ನು ಆಯೋಗ ತಿಳಿದುಕೊಂಡಿತು. ನಂತರ ಟ್ರಾವೆಲ್ ಸಂಸ್ಥೆ ತಪ್ಪಿತಸ್ಥ ಎಂದು ತೀರ್ಪು ನೀಡಿತು.


